ಬೆಂಗಳೂರು: ವೈಷ್ಣೋದೇವಿ ದರ್ಶನಕ್ಕೆ ಕಾಪ್ಟರ್ ಸೇವೆ ನೆಪದಲ್ಲಿ ವೃದ್ಧನಿಗೆ ವಂಚನೆ
ಬುಕ್ಕಿಂಗ್ ಶುಲ್ಕ ಮತ್ತು ಟಿಕೆಟ್ ಶುಲ್ಕದ ನೆಪದಲ್ಲಿ 1.57 ಲಕ್ಷ ರು ಅನ್ನು ಆನ್‌ಲೈನ್‌ನಲ್ಲಿ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ವಂಚನೆ
ಬೆಂಗಳೂರು(ಮೇ.19): ಜಮ್ಮು-ಕಾಶ್ಮೀರ ರಾಜ್ಯದಲ್ಲಿರುವ ಸುಪ್ರಸಿದ್ಧ ವೈಷ್ಣೋದೇವಿ ದರ್ಶನಕ್ಕೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುವ ಸೋಗಿನಲ್ಲಿ ವೃದ್ಧರೊಬ್ಬರಿಗೆ ಕಿಡಿಗೇಡಿಗಳು ವಂಚಿಸಿದ್ದಾರೆ.
ವಿವೇಕನಗರದ ವಿ.ಸಂಗುಜನ್ ಮೋಸ ಹೋಗಿದ್ದು, ಇತ್ತೀಚಿಗೆ ವೈಷ್ಣೋದೇವಿ ದೇವಸ್ಥಾನಕ್ಕೆ ಪ್ರಯಾಣಿಸಲು ಆನ್‌ಲೈನ್ ಮೂಲಕ ಹೆಲಿಕ್ಯಾಪ್ಟರ್ ಬುಕ್ ಮಾಡಲು ಯತ್ನಿಸಿದ್ದಾಗ ಟೋಪಿ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್: ಹಣಕ್ಕಾಗಿ ಕೂಲಿ ಕಾರ್ಮಿಕರ ಬರ್ಬರ ಕೊಲೆ!
ವೈಷ್ಣೋದೇವಿ ದರ್ಶನಕ್ಕೆ ತೆರಳಲು ಯೋಜಿಸಿದ್ದ ಸಂಗುಜನ್ ಅವರು, ಕೆಲ ದಿನಗಳ ಹಿಂದೆ ಹೆಲಿಕಾಪ್ಟರ್ ಸೇವೆ ಪಡೆಯಲು ಶ್ರೀ ಮಾತಾ ವೈಷ್ಣೋದೇವಿ ಶ್ರೈನಿ ಬೋರ್ಡ್ ಕಾಲ್ ಸೆಂಟರ್‌ಗೆ ಕರೆ ಮಾಡಿದ್ದರು. ಆದರೆ ಕಾಲ್ ಸೆಂಟರ್ ಸಿಬ್ಬಂದಿ ಪ್ರತಿಕ್ರಿಯಿಸದೆ ಹೋದಾಗ ಅವರು ಸುಮ್ಮನಾಗಿದ್ದರು. ಕೆಲ ಹೊತ್ತಿನ ಬಳಿಕ ಸಂಗುಜನ್ ಅವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾವು ಹೆಲಿಕ್ಯಾಪ್ಟರ್ ಬುಕ್ ಮಾಡಿ ಕೊಡುವುದಾಗಿ ಮಾಹಿತಿ ಪಡೆದುಕೊಂಡಿದ್ದಾನೆ. ಬಳಿಕ ಬುಕ್ಕಿಂಗ್ ಶುಲ್ಕ ಮತ್ತು ಟಿಕೆಟ್ ಶುಲ್ಕದ ನೆಪದಲ್ಲಿ 1.57 ಲಕ್ಷ ರು ಅನ್ನು ಆನ್‌ಲೈನ್‌ನಲ್ಲಿ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.