ಬೆಂಗಳೂರು(ಡಿ.03): ಕಡಿಮೆ ಬೆಲೆಗೆ ಮೆಡಿಕಲ್‌ ಗ್ಲೌಸ್‌ ಪೂರೈಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 45 ಲಕ್ಷ ಪಡೆದು ಸೈಬರ್‌ ಕಳ್ಳರು ವಂಚಿಸಿರುವ ಘಟನೆ ನಡೆದಿದೆ.

ಗಿರಿನಗರದ ಉದ್ಯಮಿ ವಿ.ರಮೇಶ್‌ ಎಂಬುವರೇ ಮೋಸಕ್ಕೊಳಗಾದವರು. ಈ ಸಂಬಂಧ ಗುಜರಾತ್‌ ಮೂಲದ ರಿಷಿಕೇಶ್‌ ಚೌಧರಿ, ನೀಲೇಶ್‌ ಕುಮಾರ್‌ ಹಾಗೂ ಕುಲ್‌ದೀಪ್‌ ಸಿಂಗ್‌ ವಿರುದ್ಧ ಗಿರಿನಗರ ಠಾಣೆಯಲ್ಲಿ ರಮೇಶ್‌ ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ರಮೇಶ್‌ ಅವರಿಗೆ ರಿಷಿಕೇಷ್‌ ಪರಿಚಯವಾಗಿದೆ. ಆಗ 31 ಬಾಕ್ಸ್‌ ಮೆಡಿಕಲ್‌ ಗ್ಲೌಸ್‌ ಬೇಕು ಎಂದು ರಮೇಶ್‌ ಕೇಳಿದ್ದರು. ಇದಕ್ಕೊಪ್ಪಿದ ಆತ, 1.2 ಕೋಟಿ ಮೌಲ್ಯದ ಗ್ಲೌಸ್‌ ಅನ್ನು ಕೇವಲ 45 ಲಕ್ಷಕ್ಕೆ ನೀಡುವುದಾಗಿ ತಿಳಿಸಿ, ಮುಂಗಡ ಹಣ ಪಾವತಿಸುವಂತೆ ಸೂಚಿಸಿದ್ದ. ಇದರಂತೆ 5 ಲಕ್ಷವನ್ನು ಆನ್‌ಲೈನ್‌ನಲ್ಲಿ ರಿಶಿಕೇಷ್‌ ಬ್ಯಾಂಕ್‌ ಖಾತೆಗೆ ರಮೇಶ್‌ ಜಮೆ ಮಾಡಿದ್ದರು. ಪ್ರತಿಯಾಗಿ ರಿಶಿಕೇಷ್‌, ಗ್ಲೌಸ್‌ ಬಾಕ್ಸ್‌ಗಳನ್ನು ರವಾನಿಸಿರುವುದಾಗಿ ಫೋಟೋ ಕಳುಹಿಸಿ ಬಾಕಿ .40 ಲಕ್ಷ ಜಮೆ ಮಾಡುವಂತೆ ಕೇಳಿದ್ದ. ಹೀಗೆ ಹಂತ ಹಂತವಾಗಿ 40 ಲಕ್ಷ ಆರ್‌ಟಿಜಿಎಸ್‌ ಮೂಲಕ ರವಾನೆ ಮಾಡಿದ್ದರು. ಆದರೆ ನಿಗದಿತ ಸಮಯಕ್ಕೆ ಗ್ಲೌಸ್‌ಗಳು ತಲುಪಲಿಲ್ಲ.

ಎಷ್ಟೇ ದುಡ್ಡು ಕೊಟ್ರು ಹೆಂಡತಿ ತೂಕ ಇಳಿಸದ ಡಾಕ್ಟರ್, ರೊಚ್ಚಿಗೆದ್ದ ಗಂಡ ಏನ್ಮಾಡಿದ?

ಇದರಿಂದ ಶಂಕಿತರಾದ ರಮೇಶ್‌, ಪೂರೈಕೆದಾರನಿಗೆ ಕರೆ ಮಾಡಿ ಪ್ರಶ್ನಿಸಿದಾಗ ಮಲೇಷ್ಯಾದಿಂದ ಬರಬೇಕಾಗಿದೆ ಎಂದಿದ್ದಾನೆ. ಇದರಿಂದ ಕೋಪಗೊಂಡ ಉದ್ಯಮಿ, ತನ್ನ ಹಣ ವಾಪಸ್‌ ಕೊಡುವಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಇತರ ಆರೋಪಿಗಳು ಮಧ್ಯಪ್ರವೇಶಿಸಿ, ಸ್ವಲ್ಪ ದಿನ ಸಮಯ ಕೊಡಿ. ನಿಮಗೆ ತಲುಪಬೇಕಾದ ಸರಕು ಕೈ ಸೇರಲಿದೆ ಎಂದು ಗ್ಲೌಸ್‌ ಇರುವ ವಿಡಿಯೋವನ್ನು ಕಳುಹಿಸಿದ್ದರು. ಸಂಧಾನಕ್ಕೆ ಸಮ್ಮಿತಿಸಿದ ರಮೇಶ್‌, ಕೆಲ ದಿನಗಳ ಕಾಲ ಸುಮ್ಮನಾಗಿದ್ದರು. ತಿಂಗಳು ಕಳೆದರೂ ಸರಕು ಮಾತ್ರ ಬರಲಿಲ್ಲ. ಅಷ್ಟರಲ್ಲಿ ಎಲ್ಲ ಆರೋಪಿಗಳ ಸಂಪರ್ಕ ಕಡಿತವಾಗಿದ್ದು, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಉದ್ಯಮಿ ರಮೇಶ್‌ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.