ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ   ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.

ಬೆಂಗಳೂರು (ಜೂ.14): ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಹಲಸೂರು ಗೇಟ್ ಠಾಣೆಯಲ್ಲಿ ಸೆಕ್ಷನ್ 420ಅಡಿ ಕೇಸ್ ದಾಖಲಾಗಿದೆ. ಉದ್ಯಮಿ ದೇವನಾತ್ ವೈಕ್ಯೆ ಸಂಬರ್ಗಿ ವಿರುದ್ಧ ದೂರು ನೀಡಿದ್ದರು. 2017ರ ಜುಲೈನಲ್ಲಿ ಸಂಬರ್ಗಿಯಿಂದ ದೇವನಾತ್ ಸಾಲ ಪಡೆದಿದ್ದರು. ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟು ದೇವನಾತ್ ಶ್ಯೂರಿಟಿ ನೀಡಿದ್ದರು. ಬಳಿಕ 2017ರ ಡಿಸೆಂಬರ್ ನಲ್ಲಿ ಅಷ್ಟೂ ಹಣವನ್ನು ದೂರುದಾರ ದೇವನಾತ್ ವಾಪಸ್ ಸಂಬರ್ಗಿಗೆ ನೀಡಿದ್ದರು.

ಆದ್ರೆ ಹೆಚ್ಚಿನ ಬಡ್ಡಿ ಹಣ ನೀಡಬೇಕೆಂದು ಮನೆ ದಾಖಲೆ‌ ನೀಡದೇ ಪ್ರಶಾಂತ್ ಸಂಬರ್ಗಿ ಸತಾಯಿಸಿದ್ದ, ಮಾತ್ರವಲ್ಲ ವಿವಿಧ ಪೊಲೀಸ್ ಠಾಣೆಯಲ್ಲಿ ದೇವನಾತ್ ವಿರುದ್ಧ ಸಂಬರ್ಗಿ ಸುಳ್ಳು ದೂರು ನೀಡಿದ್ದ. ಸದ್ಯ ಸುಳ್ಳು ದೂರು ಹಿನ್ನೆಲೆ ಸಂಬರ್ಗಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಳೆದ ಎಪ್ರಿಲ್ ನಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್‌ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಕುರಿತು ಅವಹೇಳನಕಾರಿ ಪೋಸ್ಟ್‌ ವಿವಾದ ಸಂಬಂಧ ಉತ್ತರ ವಿಭಾಗದ ಡಿಸಿಪಿ ಮುಂದೆ 2 ಲಕ್ಷ ರು.ಬಾಂಡ್‌ ಹಾಗೂ ಮುಚ್ಚಳಿಕೆ ಬರೆದುಕೊಟ್ಟು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಕ್ಷಮೆ ಕೋರಿದ್ದಾರೆ.