ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗುತ್ತಿದ್ದಂತೆಯೇ ಫೇಲಾದ ನಾಲ್ವರು ವಿದ್ಯಾರ್ಥಿನಿಯರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಬೆಂಗಳೂರು (ಏ.09): ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗುತ್ತಿದ್ದಂತೆಯೇ ಫೇಲಾದ ನಾಲ್ವರು ವಿದ್ಯಾರ್ಥಿನಿಯರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ಐಶ್ವರ್ಯ(17) ಕಲಾಮಂದಿರ ಅಪಾರ್ಟ್‌ ಮೆಂಟ್‌ನಲ್ಲಿ (ಪಿಡಬ್ಲ್ಯೂಡಿ ವಸತಿ ಗೃಹ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಲೋಕೋಪಯೋಗಿ ಇಲಾಖೆಯ ಡಿ ಗ್ರೂಪ್ ನೌಕರರಾದ ಮಂಜುಳಾ ಅವರ ಪುತ್ರಿ ಐಶ್ವರ್ಯ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಓದಿ ಪರೀಕ್ಷೆ ಬರೆದಿದ್ದರು. ರಸಾಯನಶಾಸ್ತ್ರ ವಿಷಯದಲ್ಲಿ ಫೇಲಾದ ಕಾರಣ ಮನನೊಂದು ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ಮಲ್ಲಯ್ಯ- ನಾಗರತ್ನಾ ದಂಪತಿ ಪುತ್ರಿ ವಿಜಯಲಕ್ಷ್ಮಿ ಸಿರುಗಪ್ಪದ ವಿಕೆಜೆ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಳು. 

ಸಮಾಜಶಾಸ್ತ್ರದಲ್ಲಿ ಕೇವಲ 15 ಅಂಕ ಪಡೆದು ಅನುತ್ತೀರ್ಣಗೊಂಡ ಕಾರಣ ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕುಡಿನೀರಕಟ್ಟೆಯ ಚಂದ್ರಶೇಖರಪ್ಪ - ವೀಣಾ ದಂಪತಿ ಪುತ್ರಿ ಕೃಪಾ(18) ದಾವಣಗೆರೆ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಎರಡು ವಿಷಯದಲ್ಲಿ ಫೇಲ್‌ ಆದ ವಿಷಯ ತಿಳಿದಿದೆ. ಇದರಿಂದ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೂಲಗಳು ತಿಳಿಸಿವೆ.

ಕಿತ್ತುತಿನ್ನುವ ಬಡತನದಲ್ಲೂ ಪಾರ್ಟ್‌ಟೈಮ್ ಕೆಲಸ ಮಾಡಿ ಪಿಯುಸಿಯಲ್ಲಿ 6ನೇ ರ್ಯಾಂಕ್‌ ಗಳಿಸಿದ ನಾಗವೇಣಿ!

ವಿದ್ಯಾರ್ಥಿನಿ ಆತ್ಮಹತ್ಯೆ: ತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಬೇಸರಗೊಂಡು ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ತಾಂಡಾದ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾವ್ಯ ಬಸಪ್ಪ ಲಮಾಣಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕಾವ್ಯ ನಾಲ್ಕು ವಿಷಯದಲ್ಲಿ ಫೇಲ್ ಆಗಿದ್ದಳು. ಇದರಿಂದ ಬೇಸರಗೊಂಡು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌ ಎಂದು ಪೊಲೀಸರು ತಿಳಿಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.