ಬಂಧಿತ ಆರೋಪಿಯಿಂದ ಸುಮಾರು 2 ಕೋಟಿ ಮೌಲ್ಯದ 1.02 ಕೇಜಿ ತೂಕದ ಎಂಡಿಎಂಎ ಮಾದಕವಸ್ತು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನ, ಮೊಬೈಲ್‌ ಫೋನ್‌ ಜಪ್ತಿ 

ಬೆಂಗಳೂರು(ಜು.25): ಗ್ರಾಹಕರ ಸೋಗಿನಲ್ಲಿ ನೈಜೀರಿಯಾ ಮೂಲದ ಡ್ರಗ್ಸ್‌ ಪೆಡ್ಲರ್‌ನೊಬ್ಬನನ್ನು ವಿಶ್ವೇಶ್ವರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ.ನಗರ ನಿವಾಸಿ ಜಾನ್‌(30) ಬಂಧಿತ ಡ್ರಗ್ಸ್‌ ಪೆಡ್ಲರ್‌. ಆರೋಪಿಯಿಂದ ಸುಮಾರು 2 ಕೋಟಿ ಮೌಲ್ಯದ 1.02 ಕೇಜಿ ತೂಕದ ಎಂಡಿಎಂಎ ಮಾದಕವಸ್ತು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನ, ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಆರೋಪಿಯು ಗೋವಾದಿಂದ ಮಾದಕವಸ್ತು ತಂದು ನಗರದಲ್ಲಿ ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರೇ ಗ್ರಾಹಕರ ಸೋಗಿನಲ್ಲಿ ಆರೋಪಿಯನ್ನು ಸಂಪರ್ಕಿಸಿದ್ದಾರೆ. ಮಾತುಕತೆಯಂತೆ ನಿಗದಿತ ಸ್ಥಳಕ್ಕೆ ಮಾದಕವಸ್ತು ಮಾರಾಟಕ್ಕೆ ಬಂದಾಗ ಆತನನ್ನು ಮಾಲು ಸಹಿತ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೈಬರ್‌ಕ್ರೈಂ ಮೂಲಕ 700 ಕೋಟಿ ವಂಚನೆ ಪತ್ತೆಹಚ್ಚಿದ ಪೊಲೀಸರು: ಉಗ್ರರು, ಚೀನಾ ಪಾಲಾಗ್ತಿದ್ದ ಹಣ

ಆರೋಪಿ ಜಾನ್‌ ಮೂರು ವರ್ಷದ ಹಿಂದೆ ಬಿಜಿನೆಸ್‌ ವೀಸಾ ಪಡೆದು ನಗರಕ್ಕೆ ಬಂದಿದ್ದ. ವೀಸಾ ಅವಧಿ ಮುಗಿದು ಒಂದು ವರ್ಷ ಕಳೆದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ. ಗೋವಾದಿಂದ ಪರಿಚಿತ ಡ್ರಗ್ಸ್‌ ಪೆಡ್ಲರ್‌ಗಳ ಮುಖಾಂತರ ಕಡಿಮೆ ಬೆಲೆಗೆ ಎಂಡಿಎಂಎ ಮಾದಕವಸ್ತು ಖರೀದಿಸಿ ನಗರಕ್ಕೆ ತರುತ್ತಿದ್ದ. ನಗರದಲ್ಲಿ ನಡೆಯುವ ಪಾರ್ಟಿ, ಮೋ-ಮಸ್ತಿ ಕೂಟಗಳಿಗೆ ಬರುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಡ್ರಗ್ಸ್‌ ಶೌಚಾಲಯಕ್ಕೆ ಎಸೆದು ಜಾನ್‌ ಪರಾರಿ

ಆರೋಪಿಯ ಬಂಧನದ ಬಳಿಕ ಆತ ವಾಸವಿದ್ದ ಬಾಡಿಗೆ ಮನೆಯ ತಪಾಸಣೆಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ನೈಜೀರಿಯಾ ಮೂಲದ ಮತ್ತೊಬ್ಬ ವ್ಯಕ್ತಿ ಎಂಡಿಎಂಎ ಹಾಗೂ ಇತರೆ ಮಾದಕವಸ್ತುವನ್ನು ಶೌಚಾಲಯಕ್ಕೆ ಎಸೆದು ಕಿಟಕಿ ಮೂಲಕ ಹೊರಗೆ ಬಂದು ಸ್ಯಾನಿಟರಿ ಪೈಪ್‌ ಹಿಡಿದು ಎರಡನೇ ಮಹಡಿಯಿಂದ ಕೆಳಗೆ ಇಳಿದು ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಶ್ವೇಶ್ವರ ಪುರ ಠಾಣೆ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯನ್ನು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮತ್ತು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್‌ ಆಯುಕ್ತ ಎನ್‌.ಸತೀಶ್‌ ಕುಮಾರ್‌ ಶ್ಲಾಘಿಸಿದ್ದಾರೆ.