ಹಾಸನ(ಫೆ.22): ಮುಖ್ಯಮಂತ್ರಿ ಆಗಿದ್ದಾಗ ಐಎಎಂ ಹಗರಣದ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸುವಂತೆ ನಾನೇ ಸೂಚನೆ ನೀಡಿದ್ದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

"

ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಪವನಪುತ್ರ ರೆಸಾರ್ಟ್‌ನಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಪುತ್ರನ ಮದುವೆಗೆಂದು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಹೆಸರಲ್ಲಿ ಹಣ ಕೊಡಲಾಗಿದೆ ಎಂದು ಆರೋಪಿಸಲಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಐಎಂಎ ಪ್ರಕರಣವನ್ನು ಆರ್‌ಬಿಐ ಬ್ಯಾಂಕ್‌ ಮಾಹಿತಿ ಮೇರೆಗೆ ಅಂದಿನ ಪೊಲೀಸ್‌ ಮಹಾನಿರ್ದೇಶಕರನ್ನು ಕರೆದು ತನಿಖೆ ಮಾಡಲು ಆದೇಶ ಮಾಡಿದ್ದೆ ಎಂದು ತಿಳಿಸಿದರು.

IMA ಪ್ರಕರಣದಲ್ಲಿ ಇಬ್ಬರು ಮಾಜಿ ಸಿಎಂ ಹೆಸರು; ವಂಚನೆ ಪ್ರಕರಣದಲ್ಲಿ ಚುನಾವಣೆ ಘಾಟು!

ಐಎಂಎ ಹಗರಣದ ಅರೋಪಿಗಳು ನನಗೆ ಪರಿಚಯವಿಲ್ಲ. ಮನ್ಸೂರ್‌ ಖಾನ್‌ನನ್ನು ಬಂಧಿಸಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವಿಚಾರದಲ್ಲಿ ಯಾರು ಬೇಕಾದರೂ ತನಿಖೆ ಮಾಡಲಿ ನನಗೆ ಸಮಸ್ಯೆ ಇಲ್ಲ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಾಂಗ್ರೆಸ್‌ ಶಾಸಕರು ಇಫ್ತಿಯಾರ್‌ ಕೂಟಕ್ಕೆ ನೀವು ಬರಲೇಬೇಕು ಎಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದರು. ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಶಾಲೆಗಳ ಅಭಿವೃದ್ಧಿ ಮಾಡಿರುವುದಾಗಿ ಮತ್ತು ದೊಡ್ಡ ದಾನಿಗಳು ಎಂದು ಮನ್ಸೂರ್‌ ಖಾನ್‌ನನ್ನು ಪರಿಚಯ ಮಾಡಿಸಿದ್ದರು. ಐಎಂಎ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೊ ಇದೆ. ಪ್ರಧಾನಿಯವರೆ ಈ ಸಂಸ್ಥೆಯ ಬಗ್ಗೆ ದೇಶದಲ್ಲಿಯೆ ಉತ್ತಮ ತೆರಿಗೆ ಕಟ್ಟುತ್ತಿರುವುದಾಗಿ ಪ್ರಮಾಣ ಪತ್ರ ನೀಡಿದ್ದಾರೆ. ಇನ್ನು ಕಾಂಗ್ರೆಸ್‌ ಶಾಸಕರಾಗಿದ್ದ ರೋಷನ್‌ ಬೇಗ್‌ ಮುಖ್ಯಮಂತ್ರಿಗೆ ಹಣ ನೀಡಬೇಕು ಎಂದು ಹಣ ವಸೂಲಿ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಕುಮಾರಸ್ವಾಮಿಗೆ ಯಾವುದೇ ಐಎಂಎ ಹಣ ತಲುಪಿಲ್ಲ ಎಂಬ ಮಾಹಿತಿ ತನಿಖೆಯಿಂದ ಹೊರಬಂದಿದೆ ಎಂದು ತಿಳಿಸಿದರು.

ಮೀಸಲಾತಿ ವಿಚಾರದಲ್ಲಿ ಹಲವಾರು ಸಮಾಜದವರು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದು, ಮೀಸಲಾತಿ ವಿಷಯದಲ್ಲಿ ಸರ್ಕಾರ ಸಮಾಜದಲ್ಲಿ ಸಂಘರ್ಷಕ್ಕೆ ಅವಕಾಶ ಕಲ್ಪಿಸಬಾರದು. ಸ್ವಾತಂತ್ರ್ಯ ಬಂದಾಗಿನಿಂದ ಸಮಾಜದಲ್ಲಿ ಯಾವುದೇ ಅನುಕೂಲ ಪಡೆಯದ ವರ್ಗಗಳಿಗೆ ಮೀಸಲಾತಿ ನೀಡಬೇಕು. ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಯಾವುದೇ ರಾಜಕೀಯ ಮಾಡದೆ ಮೀಸಲಾತಿಯನ್ನು ಒದಗಿಸಬೇಕು. ಮಠಾಧೀಶರು ಪಾದಯಾತ್ರೆ ನಡೆಸುವುದಕ್ಕೆ ಮೊದಲು ಸರ್ಕಾರ ಸುಪ್ರೀಂಕೋರ್ಟ್‌ ಆದೇಶ, ರಾಜ್ಯ ಸರ್ಕಾರದ ಪರಿಸ್ಥಿತಿ, ವಾಸ್ತವ ಪರಿಸ್ಥಿತಿ ಬಗ್ಗೆ ಮಠಾಧೀಶರಿಗೆ ಮಾಹಿತಿ ಕೊಡಬೇಕಿತ್ತು. ಈ ಮಟ್ಟಕ್ಕೆ ಪರಿಸ್ಥಿತಿ ಬಾರದಂತೆ ಸರ್ಕಾರ ತಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಸರ್ಕಾರ ಮಠಾಧಿ​ಶರನ್ನು ಲಘುವಾಗಿ ತೆಗೆದುಕೊಂಡಿದ್ದು, ಸರ್ಕಾರದಲ್ಲಿರುವಂತವರು ಮೊದಲ ಹಂತದಲ್ಲಿ ಈ ಬಗ್ಗೆ ಜವಾಬ್ದಾರಿ ವಹಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದರು.

ಇದೇ ವೇಳೆ ಪತ್ನಿ ಅನಿತಾ ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ಶಾಸಕ ಲಿಂಗೇಶ್‌, ಇತರರು ಇದ್ದರು.