11 ವರ್ಷದ ಬಾಲಕಿ ಮೇಲೆ ಐವರು ಯುವಕರಿಂದ ಅತ್ಯಾಚಾರ ಯತ್ನ: ವೀಡಿಯೊ ಹರಿಬಿಟ್ಟ ದುರುಳರು
Latest Crime News: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವರದಿಯಾದ ಭೀಕರ ಘಟನೆಯೊಂದರಲ್ಲಿ, 11 ವರ್ಷದ ಬಾಲಕಿಯನ್ನು ಐವರು ಯುವಕರು ಒತ್ತೆಯಾಳಾಗಿ ಇಟ್ಟುಕೊಂಡು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ
ಉತ್ತರಪ್ರದೇಶ (ಜು. 09): ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ (Meerut) ವರದಿಯಾದ ಭೀಕರ ಘಟನೆಯೊಂದರಲ್ಲಿ, 11 ವರ್ಷದ ಬಾಲಕಿಯನ್ನು ಐವರು ಯುವಕರು ಒತ್ತೆಯಾಳಾಗಿ ಇಟ್ಟುಕೊಂಡು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾವನಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳು ಅಪ್ರಾಪ್ತ ಬಾಲಕಿಯನ್ನು ಆಕ್ಷೇಪಾರ್ಹ ಸ್ಥಿತಿಯಲ್ಲಿ ಚಿತ್ರೀಕರಿಸಿ ಬುಧವಾರ ವಿಡಿಯೋ ವೈರಲ್ ಮಾಡಿದ್ದಾರೆ.
ವಿಡಿಯೋ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಕುಟುಂಬ ಇದೀಗ ದೂರು ದಾಖಲಿಸಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹಿಂದಿ ದೈನಿಕ ಹಿಂದೂಸ್ತಾನ್ ವರದಿ ಮಾಡಿದೆ. ಜುಲೈ 4 ರಂದು ಬಾಲಕಿ ಕಾಡಿಗೆ ಹೋಗಿದ್ದ ವೇಳೆ ಆರೋಪಿಗಳು ಆಕೆಯನ್ನು ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದರು. ಆರೋಪಿಗಳು ಬಾಲಕಿಯ ವಿಡಿಯೋ ಕೂಡ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಗೃಹ ಸಚಿವರ ತವರು ಕ್ಷೇತ್ರದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಯತ್ನ!
ಬಾಲಕಿ ಕಿರುಚಲು ಯತ್ನಿಸಿದಾಗ ಆರೋಪಿಗಳು ಆಕೆಗೆ ಥಳಿಸಿದ್ದಾರೆ. ನಂತರ ಮನೆಗೆ ಬಂದ ಬಾಲಕಿ ತನ್ನ ತಾಯಿಗೆ ತನಗಾದ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಬಳಿಕ ಆಕೆಯ ತಾಯಿ ಈ ವಿಷಯವನ್ನು ಪತಿಗೆ ತಿಳಿಸಿದ್ದು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬಾಲಕಿಯ ಕುಟುಂಬದವರ ಪ್ರಕಾರ ಆರೋಪಿ ಜುಲೈ 6ರಂದು ವಿಡಿಯೋ ವೈರಲ್ ಮಾಡಿದ್ದಾನೆ.
ವೀಡಿಯೊ ವೈರಲ್ ಆದ ನಂತರ, ಪೊಲೀಸರು ವೀಡಿಯೊವನ್ನು ಗುರುತಿಸಿದ್ದಾರೆ. ಈ ಬಳಿಕ ಕೂಡಲೇ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಬುಧವಾರ ರಾತ್ರಿ ಪೊಲೀಸರು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಗುರುವಾರ ಬಾಲಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಯ ಹೇಳಿಕೆ ದಾಖಲಿಸಲಾಗಿದೆ.