Bengaluru: ಅಡ್ಡಾದಿಡ್ಡಿ ಚಲಿಸಿದ ಕಾರು: 5 ವರ್ಷದ ಮಗು ಸಾವು
ಕಾರೊಂದು ಅತಿವೇಗ ಹಾಗೂ ಅಡ್ಡಾದಿಡ್ಡಿ ಚಲಿಸಿ ಸಂಭವಿಸಿದ ಅಪಘಾತದಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗು ಮೃತಪಟ್ಟು ಮತ್ತೊಂದು ಮಗು ಗಾಯಗೊಂಡಿರುವ ದಾರುಣ ಘಟನೆ ಜೀವನಬಿಮಾನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಮೇ.13): ಕಾರೊಂದು ಅತಿವೇಗ ಹಾಗೂ ಅಡ್ಡಾದಿಡ್ಡಿ ಚಲಿಸಿ ಸಂಭವಿಸಿದ ಅಪಘಾತದಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗು ಮೃತಪಟ್ಟು ಮತ್ತೊಂದು ಮಗು ಗಾಯಗೊಂಡಿರುವ ದಾರುಣ ಘಟನೆ ಜೀವನಬಿಮಾನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುರುಗೇಶ್‌ಪಾಳ್ಯದ ಕಾಳಪ್ಪ ಲೇಔಟ್ ನಿವಾಸಿ ತಾಮರೆ ಕಣ್ಣನ್ ಪುತ್ರ ಆರವ್ (5) ಮೃತ ಮಗು. ಘಟನೆಯಲ್ಲಿ ಮತ್ತೊಂದು ಮಗು ಧನರಾಜ್‌ಗೆ (5) ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅಪಘಾತ ಸಂಬಂಧ ಕಾರು ಚಾಲಕ ದೇವರಾಜ್(18) ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಚಾಲಕ ದೇವರಾಜ್ ತಂದೆ ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಲು ಸ್ನೇಹಿತಯೊಬ್ಬರ ಕಾರು ತಂದಿದ್ದರು. ಮನೆಯಲ್ಲಿ ಎಲ್ಲರೂ ಹೊರಡಲು ಸಿದ್ಧವಾಗುತ್ತಿದ್ದರು. ಈ ವೇಳೆ ಕಾರು ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ. ಅದರಂತೆ ದೇವರಾಜ್ ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಕಾರನ್ನು ತೊಳೆದು ಬಳಿಕ ಕಾರಿನ ವೈಪರ್ ಸ್ವಚ್ಛಗೊಳಿಸುವ ಸಲುವಾಗಿ ಕಾರನ್ನು ಸ್ಟಾರ್ಟ್ ಮಾಡಿದ್ದಾನೆ.
Bengaluru: ರಿಯಲ್ ಎಸ್ಟೇಟ್ ಉದ್ಯಮಿಯ ನಡು ರಸ್ತೆಯಲ್ಲಿ ಅಟ್ಟಾಡಿಸಿ ಹತ್ಯೆ
ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ!: ಈ ವೇಳೆ ಕಾರು ಏಕಾಏಕಿ ಮುಂದೆ ಚಲಿಸಿದ ಪರಿಣಾಮ ಬ್ರೇಕ್ ತುಳಿಯುವ ಬದಲು ಎಕ್ಸಿಲೇಟರ್ ತುಳಿದಿದ್ದಾನೆ. ಇದರಿಂದ ವೇಗವಾಗಿ ಅಡ್ಡಾದಿಡ್ಡಿ ಚಲಿಸಿದ ಕಾರು ಮನೆ ಎದುರಿನ ರಸ್ತೆಯಲ್ಲಿ ಆಟವಾಡುತ್ತಿದ್ದ ಆರವ್ ಮತ್ತು ಧನರಾಜ್‌ಗೆ ಡಿಕ್ಕಿ ಹೊಡೆದಿದೆ. ಅಂತೆಯೇ ಮುಂದೆ ಸಾಗಿ ಮನೆಗಳ ಎದುರು ನಿಲುಗಡೆ ಮಾಡಿದ್ದ ಐದಾರು ದ್ವಿಚಕ್ರ ವಾಹನಗಳಿಗೂ ಡಿಕ್ಕಿಯಾಗಿ ನಿಂತಿದೆ. ಡಿಕ್ಕಿಯ ರಭಸಕ್ಕೆ ಆರವ್ ತಲೆಗೆ ಗಂಭೀರವಾಗಿ ಪೆಟ್ಟು ತೀವ್ರ ರಕ್ತಸ್ರಾವವಾಗಿದೆ. ಧನರಾಜ್ ಕೈ-ಕಾಲುಗಳಿಗೆ ಗಾಯವಾಗಿದೆ. ಕೂಡಲೇ ಆ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ವೇಳೆ ಆರವ್ ಚಿಕಿತ್ಸೆ ಫಲಿಸದೆ ಮಧ್ಯಾಹ್ನ 12 ಗಂಟೆ ವೇಳೆಗೆ ಮೃತಪಟ್ಟಿದ್ದಾನೆ. ಧನರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಬಳಿಕ ಘಟನೆಗೆ ಕಾರಣವಾದ ಕಾರನ್ನು ಜಪ್ತಿ ಮಾಡಿದ್ದಾರೆ. ಅಂತೆಯೇ ಅಪಘಾತ ಎಸೆಗಿದ ಚಾಲಕ ದೇವರಾಜ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಜೀವನಬಿಮಾನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲವ್ ಜಿಹಾದ್ ಆರೋಪಿಗೆ ಹುಬ್ಬಳ್ಳಿ ಪೊಲೀಸರಿಂದ ಗುಂಡೇಟು!
ಮಗನ ರಕ್ಷಿಸಲು ಚಾಲಕನ ಕಾರಿನ ಸೀಟು ಏರಿದ ತಂದೆ: ಅಪಘಾತ ಎಸೆಗಿದ ಬಳಿಕ ಚಾಲಕ ದೇವರಾಜ್ ಗಾಬರಿಗೊಂಡು ಕಾರಿನಿಂದ ಇಳಿದು ಮನೆಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದ. ಇದರ ಬೆನ್ನಲ್ಲೇ ದೇವರಾಜ್‌ನ ತಂದೆ ಕಾರಿನ ಚಾಲಕನ ಸೀಟಿನಲ್ಲಿ ಕುಳಿತು ತಾನೇ ಕಾರು ಚಾಲನೆ ಮಾಡುತ್ತಿದ್ದಾಗಿ ಬಿಂಬಿಸಲು ಪ್ರಯತ್ನಿಸಿದ್ದಾರೆ. ಆಗ ಗಾಯಾಳು ಮಕ್ಕಳ ಪೋಷಕರು ಹಾಗೂ ದೇವರಾಜ್ ತಂದೆ ನಡುವೆ ಕೆಲ ಕಾಲ ವಾಗ್ವಾದವೂ ನಡೆದಿದೆ. ಈ ನಡುವೆ ಅಪಘಾತದ ಬಳಿಕ ದೇವರಾಜ್ ಕಾರಿನಿಂದ ಇಳಿದು ಓಡುವುದನ್ನು ಸ್ಥಳೀಯರು ನೋಡಿದ್ದರಿಂದ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಮನೆಯೊಳಗೆ ಬಚ್ಚಿಟ್ಟುಕೊಂಡಿದ್ದ ದೇವರಾಜ್‌ನ ಮನವೊಲಿಸಿ ಬಾಗಿಲು ತೆಗೆಸಿ ವಶಕ್ಕೆ ಪಡೆದಿದ್ದಾರೆ.