ಮಂಗಳೂರು(ಡಿ.22): ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರಿನ ಮೀನುಗಾರರು ಕೇರಳ ಪೊಲೀಸರಿಗೆ ದಿಗ್ಬಂಧನ ವಿಧಿಸಿ ಅಪಹರಿಸಿದ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದ ಘಟನೆ ಸೋಮವಾರ ನಡೆದಿದೆ.

ಮಂಗಳೂರಿನ ಮೀನುಗಾರಿಕಾ ಬೋಟು ಕೇರಳ ಸರಹದ್ದಿನ ಕುಂಬಳೆ ಪ್ರದೇಶದಲ್ಲಿ ಗಡಿದಾಟಿ ಮೀನುಗಾರಿಕೆ ನಡೆಸುತ್ತಿತ್ತು. ಈ ವೇಳೆ ಸಮುದ್ರದಲ್ಲಿ ಪಹರೆ ನಡೆಸುತ್ತಿದ್ದ ಕೇರಳ ಕರಾವಳಿ ಕಾವಲು ಪೊಲೀಸರು ಸಮುದ್ರದಲ್ಲೇ ಮಂಗಳೂರು ಬೋಟ್‌ನ್ನು ಅಡ್ಡಗಟ್ಟಿದ್ದರು. ಬಳಿಕ ಪೊಲೀಸ್‌ ಸಿಬ್ಬಂದಿ ರಘು ಮತ್ತು ಸುಧೀಶ್‌ ಎಂಬವರು ಮಂಗಳೂರು ಬೋಟ್‌ನ್ನು ಪ್ರವೇಶಿಸಿದ್ದರು.

ಮಂಗಳೂರು ಬೋಟ್‌ನಲ್ಲಿ 19 ಮಂದಿ ಮೀನುಗಾರರಿದ್ದರು. ಬೋಟ್‌ ಹಾಗೂ ಮೀನುಗಾರರ ತಪಾಸಣೆಗೆ ಮುಂದಾದಾಗ ಈ ಇಬ್ಬರು ಕೇರಳ ಪೊಲೀಸರಿಗೆ ಮಂಗಳೂರು ಬೋಟಿನ ಮೀನುಗಾರರು ಸಮುದ್ರ ಮಧ್ಯದಲ್ಲೇ ದಿಗ್ಭಂಧನ ವಿಧಿಸಿದ್ದಾರೆ. ಬಳಿಕ ಅದೇ ಸ್ಥಿತಿಯಲ್ಲಿ ಕೇರಳ ಪೊಲೀಸ್‌ ಸಿಬ್ಬಂದಿಯನ್ನು ಮಂಗಳೂರು ಬಂದರಿಗೆ ಕರೆತಂದಿದ್ದಾರೆ. ಬಳಿಕ ಬಂದರಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಕೇರಳ ಗಡಿಭಾಗದಲ್ಲಿ ಅನಾಥ ಸ್ಥಿತಿಯಲ್ಲಿ ಗಸ್ತು ಬೋಟ್‌ ಕಂಡ ಇನ್ನೊಂದು ಗಸ್ತು ಬೋಟ್‌ನ ಪೊಲೀಸರು, ಮೀನುಗಾರರು ಅಪಹರಿಸಿರುವುದನ್ನು ಪತ್ತೆಮಾಡಿದ್ದಾರೆ. ಬಳಿಕ ಕೇರಳ ಪೊಲೀಸರು ಮಂಗಳೂರಿಗೆ ಆಗಮಿಸಿ ಬಿಡುಗಡೆಗೊಂಡ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿದ್ದಾರೆ. ಮಂಗಳೂರು ಬೋಟ್‌ಗೆ ಪರವಾನಗಿ ಇರಲಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಬೋಟ್‌ ವಶಕ್ಕೆ ಪಡೆಯುವ ಭೀತಿಯಲ್ಲಿ ಮೀನುಗಾರರು ಪೊಲೀಸರನ್ನೇ ಅಪಹರಿಸಿದ್ದರು. ಕಾಸರಗೋಡು ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರಿನ ಉದ್ಯಮಿ ಪುತ್ರ ಕಿಡ್ನಾಪ್, ಕೋಲಾರದಲ್ಲಿ ಪತ್ತೆ, ಕಿಡ್ನಾಪರ್ಸ್ ಅರೆಸ್ಟ್!

ಭಾರಿ ದಂಡಕ್ಕೆ ಹೆದರಿ ಕೃತ್ಯ?

ಆಳಸಮುದ್ರ ಮೀನುಗಾರಿಕೆ ನಡೆಸಿ ಹಿಂದಿರುಗುವಾಗ ಮಂಜೇಶ್ವರ ಮೂಲಕ ಬರಬೇಕಾಗುತ್ತದೆ. ಆಗ ಕೆಲವೊಮ್ಮೆ ಗಡಿಯಲ್ಲೇ ಬರುವುದಿದೆ, ಆದರೆ ಅದನ್ನೇ ಉಲ್ಲಂಘನೆ ಎಂದುಕೊಂಡು ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಮಂಗಳೂರಿನ ಮೀನುಗಾರರು ಹೇಳುತ್ತಾರೆ.

ಮಂಗಳೂರಿನ ಬೋಳೂರು ಚಂದ್ರಹಾಸ್‌ ಎಂಬವರಿಗೆ ಸೇರಿದ ಪರ್ಸಿನ್‌ ದೋಣಿ ಮಂಜೇಶ್ವರ ಬಳಿ ಬರುತ್ತಿದ್ದಾಗ ಕಾಸರಗೋಡಿನ ಕೋಸ್ಟಲ್‌ ಪೊಲೀಸ್‌ ಸಿಬ್ಬಂದಿ ಬೋಟ್‌ಗೆ ಬಂದು ಮಂಜೇಶ್ವರ ದಕ್ಕೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಮೀನುಗಾರರ ಪ್ರಕಾರ ಅಲ್ಲಿಗೆ ಕೊಂಡೊಯ್ದರೆ ದೊಡ್ಡ ಮೊತ್ತದ ಪೆನಾಲ್ಟಿ ತೆರಬೇಕಾಗುತ್ತದೆ ಅಲ್ಲದೆ ಅಲ್ಲಿ ಆಳ ಕಡಿಮೆ ಇರುವ ಕಾರಣ ಕೊಂಡೊಯ್ಯಲಾಗುತ್ತಿಲ್ಲ ಎಂದು ಮೀನುಗಾರರು ಇಬ್ಬರು ಪೊಲೀಸರೊಂದಿಗೆ ಮಂಗಳೂರು ಬಂದರಿಗೆ ತಂದು ಬಿಟ್ಟಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಪೊಲೀಸರು, ಮೀನುಗಾರರ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಿದ್ದಾರೆ. ಮೀನುಗಾರ ಮುಖಂಡರು ಇದನ್ನು ಕಾಸರಗೋಡು ಎಸ್ಪಿಯವರಲ್ಲಿ ಚರ್ಚಿಸಿದ್ದು, ಅವರೂ ಈ ಪ್ರಕರಣ ತನ್ನ ಕೈಲಿಲ್ಲ, ಡಿಜಿಪಿ ವರೆಗೂ ತಲುಪಿದ್ದರಿಂದ ಏನೂ ಮಾಡಲಾಗದು ಎಂದು ತಿಳಿಸಿದ್ದಾರೆ.