ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು: ರೌಡಿಶೀಟರ್ ಫ್ರೂಟ್ ಇರ್ಫಾನ್ ಮೇಲೆ ಫೈರಿಂಗ್
ರೌಡಿಶೀಟರ್ ಫ್ರೂಟ್ ಇರ್ಫಾನ್ ಮೇಲೆ ಕೊಲೆ ಯತ್ನ| ಐದಾರು ಜನರಿದ್ದ ತಂಡದಿಂದ ಕೃತ್ಯ| ಕಾರ್ ಹತ್ತಬೇಕು ಎನ್ನುವಷ್ಟರಲ್ಲಿ ಗುಂಡಿನ ಮೊರೆತ| ಈಚೆಗೆ ಇರ್ಫಾನ್‌ನ ದಂಧೆ ಮತ್ತು ಅಕ್ರಮ ಚಟುವಟಿಕೆಗಳು ಹೆಚ್ಚಾಗಿತ್ತು| ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು|
ಹುಬ್ಬಳ್ಳಿ(ಆ.07): ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊರೆತಿದೆ! ರೌಡಿಗಳ ಗುಂಪೊಂದು ಸ್ಕೆಚ್ ಹಾಕಿ, ಮಗನ ಮದುವೆ ರಿಸೆಪ್ಶನ್ ಸಂದರ್ಭದಲ್ಲೇ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ಆತ ಮೃತನಾಗಿದ್ದಾನೆ ಎಂದು ಹೇಳಲಾಗಿದ್ದರೂ ಪೊಲೀಸರು ಖಚಿತಪಡಿಸಿಲ್ಲ.
ಕೊರೋನಾ ಲಾಕ್‌ಡೌನ್‌ನಲ್ಲಿ ಒಂದಿಷ್ಟು ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ಶುರುವಾಗಿದೆ. ಧಾರವಾಡದ ಮೂಲದ ರೌಡಿಶೀಟರ್ ಫ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಅಲ್ಲಾಭಕ್ಷ ಸಯ್ಯದ್ (45) ದಾಳಿಗೊಳಗಾಗಿದ್ದು, ಘಟನೆ ನಗರದಲ್ಲಿ ತಲ್ಲಣವನ್ನುಂಟು ಮಾಡಿದೆ. ಕೊಲೆಗೆ ಹಳೆ ದ್ವೇಷವೇ ಕಾರಣ ಎನ್ನಲಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಚುರುಕಿನ ತನಿಖೆ ಕೈಗೊಂಡಿದ್ದಾರೆ.
ಇಲ್ಲಿನ ದೇವರಗುಡಿಹಾಳ ರಸ್ತೆಯ ಅಲ್‌ತಾಜ್ ಹೋಟೆಲ್‌ನಲ್ಲಿ ಗುರುವಾರ ಈತನ ಮಗನ ಮದುವೆ ಇತ್ತು. ಮದುವೆ ರಿಸೆಫ್ಶನ್ ಮುಗಿಸಿ ಹೋಟೆಲ್ ಕೆಳಗೆ ಕಾರ್ ಏರುತ್ತಿರುವ ವೇಳೆ ಈ ಘಟನೆ ನಡೆದಿದೆ. ಸಂಬಂಧಿಯೊಬ್ಬನ ಕೈ ಕುಲುಕಿ ಇನ್ನೇನು ಕಾರ್ ಹತ್ತಬೇಕು ಎನ್ನುವಷ್ಟರಲ್ಲಿ ರೌಡಿಗಳ ಗುಂಪು ದಾಳಿ ನಡೆಸಿದೆ. ಬೈಕ್‌ನಲ್ಲಿ ಐದಾರು ರೌಡಿಗಳು ಬಂದಿದ್ದಾರೆ. ಕಪ್ಪು ಷರ್ಟ್ ಧರಿಸಿ ಮಾಸ್ಕ್ ಧರಿಸಿದ್ದ ಒಬ್ಬ ನಡೆದು ಬಂದು ಇರ್ಫಾನ್‌ಗೆ ಗುಂಡು ಹಾರಿಸಿ ಮುಂದೆ ಹೋಗಿ ಬೈಕ್‌ವೊಂದರಲ್ಲಿ ತೆರಳಿದ್ದಾನೆ. ಅಲ್ಲೇ ಕಾದಿದ್ದ ಇನ್ನೋರ್ವನೂ ಇರ್ಫಾನ್ ಮೇಲೆ ಸಮೀಪದಿಂದ ಗುಂಡು ಹಾರಿಸಿದ್ದಾನೆ. ಇದರ ಹಿಂದೆಯೇ ಮತ್ತೊಂದು ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಸಹ ಸವಾರನೊಬ್ಬ ಕೂಡ ಗುಂಡು ಹಾರಿಸಿದ್ದಾನೆ. ಕೊನೆಗೆ ಮೂವರು ಒಂದೇ ಬೈಕ್‌ನಲ್ಲಿ ಪರಾರಿಯಾಗಿದ್ದು, ಒಟ್ಟಾರೆ ಮೂರ್ನಾಲ್ಕು ಸುತ್ತಿನ ಗುಂಡು ಹಾರಿಸಲಾಗಿದೆ.
ನವಲಗುಂದದಲ್ಲಿ ಮನಬಂದಂತೆ ಗುಂಡಿನ ದಾಳಿ: ಬೆಚ್ಚಿಬಿದ್ದ ಜನತೆ
ಫ್ರೂಟ್ ಇರ್ಫಾನ್ ತಲೆ, ತೊಡೆಗೆ ಗುಂಡು ಬಿದ್ದಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಆತನನ್ನು ಸಂಬಂಧಿಕರು, ಸ್ನೇಹಿತರು ತಕ್ಷಣ ಸುಚಿರಾಯು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆತನ ಸ್ಥಿತಿ ಗಂಭೀರವಾಗಿತ್ತು. ಸ್ಥಳದಲ್ಲಿ ಒಂದು ಸಜೀವ ಗುಂಡು, ಇನ್ನೊಂದು ಕಾಡತೂಸು ದೊರೆತಿದೆ. ಸಂಜೆವರೆಗೂ ಜನಜಂಗುಳಿ ಅಲ್ಲಿ ಸೇರಿತ್ತು.
ಸಿಸಿ ಕ್ಯಾಮೆರಾದಲ್ಲಿ ಸೆರೆ:
ಈ ನಡುವೆ ಫ್ರೂಟ್ ಇರ್ಫಾನ್ ಮೇಲೆ ದಾಳಿ ನಡೆಸುವ ದೃಶ್ಯಗಳೆಲ್ಲ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಡಿಸಿಪಿ ಆರ್.ಬಿ. ಬಸರಗಿ, ಹಳೆ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಸೇರಿದಂತೆ ವಿಶೇಷ ಅಪರಾಧ ಪತ್ತೆ ತಂಡವು ಕೂಡ ಭೇಟಿ ನೀಡಿ ತಡರಾತ್ರಿವರೆಗೂ ಪರಿಶೀಲನೆ ನಡೆಸಿದೆ. ಆದರೆ ಯಾರು ಕೂಡ ಅಧಿಕೃತ ಹೇಳಿಕೆ ನೀಡಿಲ್ಲ.
ಪೂರ್ವಯೋಜಿತ:
ಘಟನೆ ಏಕಾಏಕಿ ನಡೆದಿದ್ದಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ರೌಡಿಗಳು ಸ್ಕೆಚ್ ಹಾಕಿ ಫ್ರೂಟ್ ಇರ್ಫಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾಗಿ ಮೂಲಗಳು ತಿಳಿಸಿವೆ. ಇದಕ್ಕೆ ಸಾಕ್ಷಿಯೆಂಬಂತೆ ದಾಳಿಗೆ ಬಂದವರಲ್ಲಿ ಒಬ್ಬ ಕೆಲ ಹೊತ್ತಿನಿಂದ ಸ್ಥಳದಲ್ಲೇ ನಿಂತಿದ್ದು ಹಾಗೂ ನಡೆದು ಬಂದು ಇರ್ಫಾನ್ ಮೇಲೆ ಗುಂಡು ಹಾರಿಸಿದ್ದು, ತಪ್ಪಿಸಿಕೊಳ್ಳಲು ಮೊದಲೇ ಪ್ಲಾನ್ ಮಾಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಕ್ಕೆ ಹಳೆ ದ್ವೇಷ, ರಿಯಲ್ ಎಸ್ಟೆಟ್ ಲಿಂಕ್ ಇದೆ ಎನ್ನಲಾಗುತ್ತಿದ್ದು, ನಿಖರ ಕಾರಣ ತನಿಖೆಯಿಂದಲೆ ಹೊರಬರಬೇಕಿದೆ.
ತಲ್ಲಣಗೊಂಡ ನಗರ:
ಘಟನೆಯಿಂದಾಗಿ ಹುಬ್ಬಳ್ಳಿ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಈಚೆಗೆ ಯುವಕನೊಬ್ಬನನ್ನು ಆತನ ಸ್ನೇಹಿತರೇ ಸೇರಿ ಕೊಲೆ ಮಾಡಿದ ಘಟನೆ ಇಲ್ಲಿನ ವಿಶ್ವೇಶ್ವರನಗರದ ಕೃಷ್ಣ ಕಲ್ಯಾಣ ಮಂಟಪದ ಬಳಿ ನಡೆದಿತ್ತು. ಇದಾಗಿ 10 ದಿನ ಕಳೆಯುವಷ್ಟರಲ್ಲೇ ಗುಂಡಿನ ಸದ್ದು ಮೊರೆತಿದೆ. ಲಾಕ್‌ಡೌನ್ ಘೋಷಣೆಯಾದ ಬಳಿಕ ರೌಡಿಗಳು ಕೂಡ ತಣ್ಣಗಾಗಿದ್ದರು. ಆದರೆ, ತೆರವಾಗುತ್ತಲೆ ಮತ್ತೆ ಬಾಲ ಬಿಚ್ಚುತ್ತಿದ್ದಾರೆ. ಕಳೆದ ವರ್ಷ ಗೋಕುಲ ರಸ್ತೆಯಲ್ಲಿ ನಡೆದಿದ್ದ ಪರ್ವೇಶ ಸಿಂಗ್ ಕೊಲೆ, ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣಗಳು ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಅಷ್ಟರೊಳಗೆ ರೌಡಿಶೀಟರ್ ಮೇಲೆ ಹಾಡಹಗಲೇ ಅದು ಕೂಡ ಜನನಿ ಬೀಡ ಪ್ರದೇಶದಲ್ಲಿ ಶೂಟೌಟ್ ನಡೆದಿರುವುದು ಅಕ್ಷರಶಃ ನಗರವನ್ನು ತಲ್ಲಣಗೊಳಿಸಿದೆ.
ಯಾರೀತ ಫ್ರೂಟ್ ಇರ್ಫಾನ್?
ಈತ ಪೊಲೀಸರಿಗೆ ಒಂದರ್ಥದಲ್ಲಿ ತೀರಾ ತಲೆನೋವು ತಂದಿಟ್ಟವನು. ಧಾರವಾಡ ಮತ್ತು ಉತ್ತರ ಕನ್ನಡದ ಮುಂಡಗೋಡದಲ್ಲೂ ಮನೆ ಹೊಂದಿದ್ದ. ಧಾರವಾಡದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಈತ, ಅಲ್ಲಿಯೇ ಕುಖ್ಯಾತಿಯನ್ನೂ ಗಳಿಸಿದ್ದ. ಜತೆಗೆ ಒಂದಿಷ್ಟು ಹುಡುಗರನ್ನಿಟ್ಟು ಹಣ್ಣು ಮಾರಾಟಕ್ಕೆ ತಳ್ಳುವ ಗಾಡಿಗಳನ್ನು ಬಿಡುತ್ತಿದ್ದ. ಮಾರುಕಟ್ಟೆಯ ಎಲ್ಲ ವಿಚಾರದಲ್ಲಿ ಮುಂದಾಳತ್ವ ವಹಿಸುತ್ತಾ ಹುಡುಗರ ಗುಂಪಿಗೆ ಲೀಡರ್ ಆಗಿದ್ದ. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಪೈಪೋಟಿ ಇತ್ತು. ಈ ಹಿನ್ನೆಲೆಯಲ್ಲಿ ಪೈಪೋಟಿದಾರನನ್ನು ಧಾರವಾಡದ ಜನ್ನತ ನಗರದಲ್ಲಿ ಕೊಲೆ ಮಾಡಿದ ಆರೋಪವೂ ಈತನ ಮೇಲಿತ್ತು. ಈ ಪ್ರಕರಣದಿಂದ ಮತ್ತಷ್ಟುಹೆಸರು ಮಾಡಿಕೊಂಡು ರೌಡಿಶೀಟರ್ ಪಟ್ಟಕಟ್ಟಿಕೊಂಡಿದ್ದ. ಬಳಿಕ ರಿಯಲ್ ಎಸ್ಟೇಟ್, ಲ್ಯಾಂಡ್ ಡೀಲಿಂಗ್, ಬಡ್ಡಿ ವ್ಯವಹಾರ ಸೇರಿ ಅನೇಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಿಕೊಂಡು ಹು-ಧಾ ಮಹಾನಗರದಲ್ಲಿ ಫ್ರೂಟ್ ಇರ್ಫಾನ್ ಎಂಬ ಹೆಸರು ಪಡೆದಿದ್ದ.
ಇದಲ್ಲದೆ ಧಾರವಾಡದಲ್ಲಿ ನಡೆಯುತ್ತಿದ್ದ ಬಹುತೇಕ ಇಸ್ಪೀಟ್ ಅಡ್ಡೆಗಳಿಗೆ ಫ್ರೂಟ್ ಇರ್ಫಾನ್ ಪೈನಾಸ್ಸ್ ಮಾಡುತ್ತಿದ್ದ ಎಂಬ ಆರೋಪವೂ ಇತ್ತು. ದಿನದ ಬಡ್ಡಿ ವ್ಯವಹಾರದಲ್ಲಿ ತೊಡಗಿ ಹಲವರನ್ನು ಹೆದರಿಸಿ ಬೆದರಿಸಿ ಸುಲಿಗೆ ಮಾಡಿದ್ದ ಆರೋಪವಿದೆ. ಈ ಸಂಬಂಧ ಮತ್ತು ಕೊಲೆ ಸೇರಿದಂತೆ ಧಾರವಾಡದ ಶಹರ, ವಿದ್ಯಾಗಿರಿ, ಉಪನಗರ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ಸಹ ದಾಖಲಾಗಿವೆ.
ಎರಡು ಬಾರಿ ಗಡಿಪಾರು:
ಈಚೆಗೆ ಇರ್ಫಾನ್‌ನ ದಂಧೆ ಮತ್ತು ಅಕ್ರಮ ಚಟುವಟಿಕೆಗಳು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದಿನ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ್ ಸೇರಿದಂತೆ ಹಾಲಿ ಕಮಿಷನರ್ ಆರ್. ದಿಲೀಪ್ ಅವರ ರೌಡಿಶೀಟರ್ ಫ್ರೂಟ್ ಇರ್ಫಾನ್‌ನನ್ನು ಗಡಿಪಾರು ಮಾಡಿದ್ದರು. ಆದರೆ, ಈತ ಹೆಚ್ಚಿನ ಪಾಲು ನಗರದಲ್ಲೇ ಇರುತ್ತಿದ್ದ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತನಿಖೆಗಾಗಿ ಡಿಸಿಪಿ ಆರ್.ಬಿ. ಬಸರಗಿ ಅವರ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ನಿಶ್ಚಿತ ಜವಾಬ್ದಾರಿ ನೀಡಲಾಗಿದೆ. ಆದಷ್ಟು ಬೇಗ ಪ್ರಕರಣವನ್ನು ಪತ್ತೆ ಹಚ್ಚಲಿದ್ದೇವೆ ಎಂದು ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರು ತಿಳಿಸಿದ್ದಾರೆ.