ಬ್ರಾಹ್ಮಣ ಸಮುದಾಯದ ಮುಖಂಡೆ ಹಾಗೂ ಶಿವ ವಿಷ್ಣು ದೇವಸ್ಥಾನ ಟ್ರಸ್ಟಿಯೂ ಆಗಿರುವ ಹಾಗೂ ಹೆಬ್ಬಾಳದ ಎಚ್‌ಎಂಟಿ ಲೇಔಟ್‌ ನಿವಾಸಿ ರಾಣಿ ವೆಂಕಟರಾಮನ್‌ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಈ ಎಫ್‌ಐಆರ್‌ ದಾಖಲು. 

ಬೆಂಗಳೂರು(ಏ.26): ಚುನಾವಣಾ ಕಾವು ಹೆಚ್ಚಾಗುತ್ತಿರುವಂತೆಯೇ ಬೆದರಿಕೆ, ಹಲ್ಲೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದರು ಎಂಬ ಕಾರಣಕ್ಕಾಗಿ ಮಹಿಳೆಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದು, ಈ ಪ್ರಕರಣದಲ್ಲಿ ಬಿಜೆಪಿ ಹುರಿಯಾಳು ಕಟ್ಟಾ ಜಗದೀಶ್‌ ಅವರ ತಂದೆಯೂ ಆದ ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಸೇರಿ ಮೂವರ ವಿರುದ್ಧ ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸ್ಥಳೀಯ ಬ್ರಾಹ್ಮಣ ಸಮುದಾಯದ ಮುಖಂಡೆ ಹಾಗೂ ಶಿವ ವಿಷ್ಣು ದೇವಸ್ಥಾನ ಟ್ರಸ್ಟಿಯೂ ಆಗಿರುವ ಹಾಗೂ ಹೆಬ್ಬಾಳದ ಎಚ್‌ಎಂಟಿ ಲೇಔಟ್‌ ನಿವಾಸಿ ರಾಣಿ ವೆಂಕಟರಾಮನ್‌ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಈ ಎಫ್‌ಐಆರ್‌ ದಾಖಲಾಗಿದೆ. ವೀಣಾ ಅವರು ಹೆಬ್ಬಾಳ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಸ್‌.ಸುರೇಶ್‌ (ಬೈರತಿ ಸುರೇಶ್‌) ಬೆಂಬಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಅಕ್ರೋಶಿತರಾಗಿ ಕಟ್ಟಾಸುಬ್ರಮಣ್ಯ ನಾಯ್ತು ಹಾಗೂ ಅವರು ಬೆಂಬಲಿಗರಾದ ಅಭಯ ರಾಜು ಮತ್ತು ಪುನೀತ್‌ ಎಂಬುವರು ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿದಿದ್ದಾರೆ.

ಬ್ಯಾನರ್ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ: ಕಟ್ಟಾ ನಾಯ್ಡು ಪುತ್ರನ ವಿರುದ್ಧ ದೂರು

ಬಿಜೆಪಿಯ ಕಟ್ಟಾಸುಬ್ರಹ್ಮಣ್ಯ ನಾಯ್ಡು ಹಾಗೂ ಬೆಂಬಲಿಗರು ರಾಣಿ ವೆಂಕಟರಾಮನ್‌ ಅವರಿಗೆ ದೂರವಾಣಿ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಬಿಜೆಪಿ ಅಭ್ಯರ್ಥಿ ಕಟ್ಟಾಜಗದೀಶ್‌ ನಾಯ್ಡು ಅವರನ್ನು ಬೆಂಬಲಿಸುವಂತೆ ಆಗ್ರಹಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮತ್ತು ಅವರ ಬೆಂಬಲಿಗರಾದ ಅಭಯ್‌ ರಾಜು, ಪುನೀತ್‌ ಅವರು ತಮ್ಮ ನಿವಾಸಕ್ಕೆ ಅಕ್ರಮ ಪ್ರವೇಶ ಮಾಡಿ ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿಗೆ ಬೆಂಬಲಿಸಬೇಕು ಹಾಗೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಣಿ ವೆಂಕಟರಾಮನ್‌ ಅವರು ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.