ಬೆಂಗಳೂರು(ಜೂ.09): ಪ್ರಿಯತಮನಿಂದ ದೂರು ಮಾಡುತ್ತಾರೆ ಎಂಬ ಕಾರಣಕ್ಕೆ ವಿಷ ಸೇವಿಸಿದ್ದ ಯುವತಿಯೊಬ್ಬಳು ಠಾಣೆ ಎದುರು ಅಸ್ವಸ್ಥಗೊಂಡಿರುವ ಘಟನೆ ಅಶೋಕನಗರ ಠಾಣೆ ಬಳಿ ನಡೆದಿದೆ.

ಆಂಧ್ರಪ್ರದೇಶ ಕಡಪಾ ಜಿಲ್ಲೆಯ ಅರುಣಾ ಆತ್ಮಹತ್ಯೆಗೆ ಯತ್ನಿಸಿದವರು. ಯುವತಿ ಆರೋಗ್ಯ ಚೆನ್ನಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ರಾಜ್‌ ಎಂಬ ಯುವಕನನ್ನು ಅರುಣಾ ಪ್ರೀತಿಸುತ್ತಿದ್ದರು. ಇದಕ್ಕೆ ಎರಡು ಕುಟುಂಬದಿಂದ ವಿರೋಧ ಇತ್ತು. ರಾಜ್‌ಗೆ ಬೆಂಗಳೂರಿನ ಉಮಾ ಎಂಬುವರ ಪರಿಚಯ ಇತ್ತು. ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಆಂಧ್ರಪ್ರದೇಶದಿಂದ ಜೂ.6ರಂದು ನಗರಕ್ಕೆ ಬಂದಿದ್ದರು.

ಇಬ್ಬರೂ ವಿವಾಹಿತರೇ, ಆದ್ರೂ ಬಿಡದ ಅನೈತಿಕ ಸಂಬಂಧ: ವಿಷ ಸೇವಿಸಿ ಪ್ರಿಯಕರ ಸಾವು

ರಾಜ್‌ ಮಹದೇವಪುರ ಬಸ್‌ ನಿಲ್ದಾಣದಿಂದ ಪರಿಚಯಸ್ಥ ಉಮಾ ಅವರಿಗೆ ಕರೆ ಮಾಡಿ ಪ್ರಿಯತಮೆಯ ಜೊತೆ ಬಂದಿರುವ ವಿಷಯ ತಿಳಿಸಿ, ಒಂದು ದಿನ ಉಳಿದುಕೊಳ್ಳಲು ಅವಕಾಶ ಮಾಡಿಕೊಡುವಂತೆ ಕೇಳಿದ್ದ. ಈ ವೇಳೆ ಪೋಷಕರಿಂದ ಇರುವ ಬೆದರಿಕೆ ಬಗ್ಗೆ ಉಮಾ ಬಳಿ ಹೇಳಿಕೊಂಡಿದ್ದರು. ಉಮಾ ಅವರ ಸೂಚನೆಯಂತೆ ಪೊಲೀಸರನ್ನು ಸಂಪರ್ಕ ಮಾಡಿದ್ದರು. ಅಶೋಕ ನಗರ ಪೊಲೀಸರು ಪೋಷಕರನ್ನು ಸಂಪರ್ಕಿಸಿದಾಗ ಕಡಪಾ ಜಿಲ್ಲೆಯಲ್ಲಿ ಅರುಣಾ ನಾಪತ್ತೆ ದೂರು ದಾಖಲಾಗಿರುವ ಮಾಹಿತಿ ತಿಳಿಯುತ್ತದೆ.

ಪುತ್ರಿ ಬೆಂಗಳೂರಿನಲ್ಲಿ ಇರುವ ವಿಷಯವನ್ನು ಪೊಲೀಸರಿಂದ ತಿಳಿದ ಪೋಷಕರು ಬೆಂಗಳೂರಿನತ್ತ ಹೊರಟಿದ್ದರು. ಪೋಷಕರು ಬೆಂಗಳೂರಿಗೆ ಬಂದರೆ ತನ್ನನ್ನು ರಾಜ್‌ನಿಂದ ಬೇರ್ಪಡಿಸಿ ಕರೆದೊಯ್ಯುತ್ತಾರೆ ಎಂಬ ಆತಂಕದಿಂದ ಅರುಣಾ ಮೊದಲೇ ವಿಷ ಸೇವಿಸಿ ಬಂದಿದ್ದರು. ಠಾಣೆಯ ಹೊರಗಡೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಕುಳಿತಿರುವಾಗಲೇ ಅರುಣಾ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವತಿ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.