ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಕಳ್ಳತನ, ಪೊಲೀಸರ ರಾತ್ರಿ ಗಸ್ತು ಇಲ್ಲದ್ದಕ್ಕೆ ಕಳ್ಳತನ ಪ್ರಕರಣ ಹೆಚ್ಚಳ

ಚಂದ್ರಶೇಖರ ಶಾರದಾಳ

ಕಲಾದಗಿ(ಮಾ.11):  ಕಲಾದಗಿ ಸುತ್ತಮುತ್ತಲಿನ ಹೊಲಗಳಲ್ಲಿ ಮೋಟಾರ್‌ ಕೇಬಲ್‌ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಮಾತ್ರವಲ್ಲ, ಕಳ್ಳರ ಹಾವಳಿಯನ್ನು ತಡೆಯುವಂತೆ ಪೊಲೀಸರಲ್ಲಿಯೂ ಮನವಿ ಮಾಡಿದ್ದಾರೆ. ಹೌದು, ಕಳೆದ ಎರಡು ತಿಂಗಳಿಂದ ಘಟಪ್ರಭಾ ನದಿ ದಂಡೆಯ ಮೇಲಿನ ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳತನವಾಗುತ್ತಿವೆ. ಮೊದಲೇ ಸಾಲ ಮಾಡಿ ನದಿಗೆ ಮೋಟಾರ್‌ ಕೂಡಿಸಿ, ಪೈಪ್‌ಲೈನ್‌ ಮಾಡಿ, ಬೆಳೆ ಬೆಳೆದು ಮಾಡಿದ ಸಾಲ ತೀರಿಸಿದರಾಯಿತು ಎಂಬ ಕನಸು ಹೊತ್ತು ಕುಳಿತ ರೈತರಿಗೆ ಇದೀಗ ಮೋಟಾರ್‌ ಕಳ್ಳರ ಹಾವಳಿ ಹೇಳತೀರದ್ದಾಗಿದೆ. ರೈತರು ರಾತ್ರಿ ಕಳೆದು ದಿನ ಬೆಳಗಾಗುವುದರೊಳಗೆ ತಮ್ಮ ಮೋಟಾರ್‌ ಪಂಪನ ಕೇಬಲ್‌ ಕಳ್ಳತನವಾಗಿ ಮತ್ತಷ್ಟುಹಾನಿಗೆ ಒಳಗಾಗುತ್ತಿದ್ದಾರೆ. ಬೆಲೆ ಬಾಳುವ ಕೇಬಲ್‌ ವೈರನ್ನೇ ಕಳ್ಳತನ ಮಾಡುತ್ತಿರುವುದರಿಂದ ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ. ಇದರಿಂದ ರೈತರು ದಿಕ್ಕು ತೋಚದಂತಾಗಿದ್ದಾರೆ.

ಅಂಕಲಗಿ ಗ್ರಾಮದ ರೈತರಾದ ಚಿನ್ನಪ್ಪ ಬಿಲಕೇರಿ ಅವರ 50 ಮೀಟರ್‌ ಕೇಬಲ್‌, ಗ್ರಾಮದ ಕುಡಿಯುವ ನೀರಿನ ಬೋರ್‌ವೆಲ್‌ ಕೇಬಲ್‌ ಎರಡು ಮೋಟಾರ್‌ದ್ದ ಕೂಡಿ 50 ಮೀಟರ್‌, ಭೀಮಶಿ ಪಟ್ಲೂರು 40 ಮೀಟರ್‌, ತೀಮಣ್ಣ ಬಿಲಕೇರಿ 60 ಮೀಟರ್‌, ಕುಮ್ಮಣ್ಣ ಮೂಲಿಮನಿ 50ಮೀಟರ್‌, ಯಲ್ಲಪ್ಪ ಪೂಜಾರಿ 40 ಮೀಟರ್‌ ಸೇರಿದಂತೆ ಇನ್ನೂ ಅನೇಕ ರೈತರ ಮೋಟಾರ್‌ ಕೇಬಲ್‌ ಕಳ್ಳತನವಾಗಿದೆ ಎಂದು ರೈತರು ತಿಳಿಸಿದ್ದಾರೆ.

ಒಂದೇ ತಟ್ಟೇಲಿ ಅನ್ನ ತಿಂದು, ಸ್ಕೆಚ್‌ ಹಾಕಿದ ಸ್ನೇಹಿತರು: ಪಾರ್ಟಿಗೆಂದು ಕರೆದೊಯ್ದು ಕೊಲೆ

ಪೊಲೀಸರು ರಾತ್ರಿ ಗಸ್ತು ತಿರುಗುತ್ತಿಲ್ಲ. ಇದರಿಂದ ಕಳ್ಳರು ರೈತರ ಹೊಲ ಗದ್ದೆಗಳಲ್ಲಿ ಇರದ ಸಮಯ ನೋಡಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಪೊಲೀಸರ ನೈಟ್‌ ಬಿಟ್‌ ತಿರುಗಾಡದೇ ಇರುವುದರಿಂದಲೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರೈತರು ಆರೋಪಿದ್ದಾರೆ. ಕಳೆದ ಮೂರು ವರ್ಷದಿಂದ ಇದೇ ರೀತಿ ಪಂಪ್‌ಸೆಟ್‌ ಮೋಟಾರು ಕೇಬಲ್‌ ಕಳ್ಳತನ ಪ್ರಕರಣ ನಡೆದಿದ್ದವು. ಆ ವೇಳೆ ಪೊಲೀಸರು ಗಸ್ತು ತಿರುಗಿ, ಕಳ್ಳತನ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಿದ್ದರು. ಈಗ ಮತ್ತೆ ಕಳೆದರಡು ತಿಂಗಳಿಂದ ಕೇಬಲ್‌ ಕಳ್ಳತನ ಪ್ರಕರಣಗಳು ಹೆಚ್ಚಿದ್ದು, ರೈತರನ್ನು ಆತಂಕಕ್ಕೆ ದೂಡಿದೆ. ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಲು ಮತ್ತು ಕಳ್ಳತನ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮವಹಿಸಬೇಕು ಎಂದು ರೈತ ಸಮುದಾಯ ಆಗ್ರಹಿಸಿದೆ.

ಅಂಕಲಗಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕಳ್ಳತನ ಘಟನೆಗಳು ನಡೆಯುತ್ತಿವೆ. ಊರುಗಾರಿಕೆಯ ಮೋಟಾರ್‌ ಕೇಬಲ್‌, ರೈತರ ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ಗಳು ಕಳ್ಳತನವಾಗುತ್ತಿದ್ದು, ಪೊಲೀಸರು ನೈಟ್‌ ಬೀಟ್‌ ತಿರುಗಿ ಕಳ್ಳತನ ನಡೆಯದಂತೆ ಕ್ರಮ ವಹಿಸಬೇಕು ಅಂತ ಅಂಕಲಗಿ ರೈತ ಮುದಿಯಪ್ಪ ಪೆಟ್ಲೂರು ತಿಳಿಸಿದ್ದಾರೆ.

ಪಂಪ್‌ಸೆಟ್‌ ಮೋಟಾರ್‌ ಕೇಬಲ್‌ ಕಳ್ಳತನವಾದ ಬಗ್ಗೆ ಪ್ರಕರಣ ದೂರು ದಾಖಲಾಗಿಲ್ಲ, ರೈತರು ಹೇಳಿದ ಮೇಲೆ ಒಂದಿಬ್ಬರನ್ನು ಅನುಮಾನದ ಮೇರೆಗೆ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಲಾಗಿದೆ. ಸದ್ಯ ರೈತರು ಕೇಬಲ್‌ ಕಳ್ಳತನ ಬಗ್ಗೆ ಹೇಳುತ್ತಿದ್ದು ವಿಚಾರಣೆ ಮಾಡಿ ಕಳ್ಳರ ಪತ್ತೆಗೆ ಕ್ರಮ ವಹಿಸಲಾಗುವುದು ಅಂತ ಕಲಾದಗಿ ಪಿಎಸೈ ಪ್ರಕಾಶ ಬಣಕಾರ ಹೇಳಿದ್ದಾರೆ.