ಚಿಕ್ಕಮಗಳೂರು: ಕೆರೆ ಒತ್ತುವರಿ ತೆರವಿನ ಆತಂಕ, ಕಾಫಿನಾಡಿನಲ್ಲಿ ಮೊದಲ ಬಲಿ!
ಒತ್ತುವರಿ ಸಂಬಂಧ ಕಂದಾಯ ಅಧಿಕಾರಿಗಳು ನೋಟೀಸ್ ಕೂಡ ನೀಡಿದ್ದರು. ಗ್ರಾಮದ ಅಕ್ಕಪಕ್ಕದವರಿಗೂ ನೋಟೀಸ್ ನೀಡಿದ್ದರು. ಕೆಲವರ ಒತ್ತುವರಿ ತೆರವಿಗೂ ಅಧಿಕಾರಿಗಳು ಮುಂದಾಗಿದ್ದರು. ನನಗೂ ನೋಟೀಸ್ ನೀಡಿದ್ದಾರೆ. ನನ್ನ ಜಮೀನನ್ನು ತೆರವು ಮಾಡ್ತಾರೆ. ಸಾಲ ತೀರಿಸೋದು ಹೇಗೆ. ಕಾಫಿ ಗಿಡ ಹಾಗೂ ಮೆಣಸಿನ ಬಳ್ಳಿಗಳು ನಾಶವಾಗುತ್ತವೆ ಎಂದು ಭಯದಿಂದ ಆತ್ಮಹತ್ಯೆಗೆ ಶರಣಾದ ರೈತ ಮಲ್ಲೇಶ್
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.05): ಕೆರೆ ಒತ್ತುವರಿ ತೆರೆವಿನ ಆತಂಕದಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಮೃತನನ್ನ ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಸಮೀಪದ ಕೆಂಚೇನಹಳ್ಳಿ ಗ್ರಾಮದ ಮಲ್ಲೇಶ್(38) ಎಂದು ಗುರುತಿಸಲಾಗಿದೆ. ಮೃತ ಮಲ್ಲೇಶ್ ಲಕ್ಷಗಟ್ಟಲೇ ಸಾಲ ಮಾಡಿಕೊಂಡಿದ್ದು ಸಾಲದ ಜೊತೆಗೆ ಒತ್ತುವರಿ ತೆರೆವಿನ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
14 ಗುಂಟೆ ಒತ್ತುವರಿ ಭೂಮಿ :
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆರೆ ಒತ್ತುವರಿ ತೆರವುಗೊಳಿಸಲು ಸರ್ವೇ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ವರದಿಯನ್ನು ತಯಾರು ಮಾಡಿ ನೋಟೀಸ್ ನೀಡಿದ್ದರು. ಈ ಹಿನ್ನೆಲೆ ಮಲ್ಲೇಶ್ ವಿಷ ಸೇವನೆ ಮಾಡಿದ್ದರು. ಆದರೆ ಮೃತ ಕುಟುಂಬಸ್ಥರು ಸಾಲದ ಜೊತೆ ಒತ್ತುವರಿ ಭಯಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದಿದ್ದಾರೆ. ಮೃತ ಮಲ್ಲೇಶ್ ಗ್ರಾಮದ ಕೆರೆ ಪಕ್ಕ 14 ಗುಂಟೆ ಒತ್ತುವರಿ ಮಾಡಿದ್ದರು ಎಂದು ಹೇಳಲಾಗಿದೆ.
ಓದಲು ಆಸಕ್ತಿ ಇಲ್ಲ, ಕೊಳಲು ನುಡಿಸುವ ಆಸೆ: ಬದುಕು ಅಂತ್ಯಗೊಳಿಸಿದ 10ನೇ ತರಗತಿ ವಿದ್ಯಾರ್ಥಿ!
ಜಮೀನನ್ನು ತೆರವು ಮಾಡ್ತಾರೆ, ಸಾಲ ತೀರಿಸೋದು ಹೇಗೆ?
ಒತ್ತುವರಿ ಸಂಬಂಧ ಕಂದಾಯ ಅಧಿಕಾರಿಗಳು ನೋಟೀಸ್ ಕೂಡ ನೀಡಿದ್ದರು. ಗ್ರಾಮದ ಅಕ್ಕಪಕ್ಕದವರಿಗೂ ನೋಟೀಸ್ ನೀಡಿದ್ದರು. ಕೆಲವರ ಒತ್ತುವರಿ ತೆರವಿಗೂ ಅಧಿಕಾರಿಗಳು ಮುಂದಾಗಿದ್ದರು. ನನಗೂ ನೋಟೀಸ್ ನೀಡಿದ್ದಾರೆ. ನನ್ನ ಜಮೀನನ್ನು ತೆರವು ಮಾಡ್ತಾರೆ. ಸಾಲ ತೀರಿಸೋದು ಹೇಗೆ. ಕಾಫಿ ಗಿಡ ಹಾಗೂ ಮೆಣಸಿನ ಬಳ್ಳಿಗಳು ನಾಶವಾಗುತ್ತವೆ ಎಂದು ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಮಲ್ಲೇಶ್ ತನ್ನ ಸಕ್ರಮ ಜಮೀನಿನ ಜೊತೆ ಒತ್ತುವರಿ ಮಾಡಿ ಕಾಫಿ-ಮೆಣಸು ಬೆಳೆದಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ನೋಟೀಸ್ ನೀಡುತ್ತಿದ್ದಂತೆ ಭಯಗೊಂಡು ಕಾಫಿಗೆ ಸಿಂಪಡಿಸಲು ತಂದಿದ್ದ ಕಳೆನಾಶಕವನ್ನೇ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 2 ದಿನಗಳ ಹಿಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಲ್ಲೇಶ್ 2 ದಿನಗಳಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.