ಸಿಎಂ ಮಾತಿಗೂ ಬೆಲೆ ಕೊಡ್ತಿಲ್ವಾ ಬ್ಯಾಂಕು? ಸಾಲಬಾಧೆಗೆ ಮತ್ತೊಬ್ಬ ರೈತ ಆತ್ಮಹತ್ಯೆ!
ಬೆಳೆನಷ್ಟ, ಕುಸಿದ ಬೆಲೆ, ಬ್ಯಾಂಕ್ ಸಾಲ ಹಲವು ಕಾರಣಗಳಿಂದ ಸಂಕಷ್ಟಕ್ಕೀಡಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಬಿ.ಯದ್ಲಾಪುರ ಗ್ರಾಮದಲ್ಲಿ ನಡೆದಿದೆ. ರೈತ ನಾಗಪ್ಪ(52) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ
ರಾಯಚೂರು (ಡಿ.6) : ಬೆಳೆನಷ್ಟ, ಕುಸಿದ ಬೆಲೆ, ಬ್ಯಾಂಕ್ ಸಾಲ ಹಲವು ಕಾರಣಗಳಿಂದ ಸಂಕಷ್ಟಕ್ಕೀಡಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಬಿ.ಯದ್ಲಾಪುರ ಗ್ರಾಮದಲ್ಲಿ ನಡೆದಿದೆ.
ರೈತ ನಾಗಪ್ಪ(52) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ನಾಗಪ್ಪನಿಗೆ ಮೂವರು ಮಕ್ಕಳಿದ್ದು, ಆ ಪೈಕಿ ಇಬ್ಬರು ಗಂಡುಮಕ್ಕಳು ಒಬ್ಬಳು ಮಗಳು. ಮೂವರು ಮಕ್ಕಳಲ್ಲಿ ಹಿರಿಮಗ ಶಿವಕುಮಾರ ಕೂಡ ಕಳೆದ ವರ್ಷ ಬೆಳೆನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗ ಮೃತಪಟ್ಟು ಒಂದು ವರ್ಷದೊಳಗೇ ತಂದೆ ನಾಗಪ್ಪ ಸಾಲಬಾಧೆಗೆ ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬ ಅನಾಥವಾದಂತಾಗಿದೆ. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಬ್ಯಾಂಕ್ ಸಾಲ ನೋಟಿಸ್: ಬಾವಿಗೆ ಹಾರಿ ರೈತ ಆತ್ಮಹತ್ಯೆ
ಬೆಳೆ ನಷ್ಟ; ಸಾಲ ಮಾಡಿಕೊಂಡಿದ್ದ ರೈತ:
ಮಳೆಯ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತ ಜಿಲ್ಲೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದುಕೊಂಡಿದ್ದರು. ಆದರೆ ಅಂದುಕೊಂಡಂತೆ ಬೆಳೆ ಕೈಹಿಡಿಯದ ಕಾರಣ ನಷ್ಟ ಅನುಭವಿಸಿ ಸಂಕಷ್ಟಕ್ಕೀಡಾಗಿದ್ದ ರೈತ, ಯಾವುದೇ ಆದಾಯವಿಲ್ಲದ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಈ ವೇಳೆ ಬ್ಯಾಂಕ್‌ನವರ ಕಿರುಕುಳ ಕೊಡ್ತಿದ್ದಾರೆಂದು ನೊಂದಿದ್ದ ನಾಗಪ್ಪ. ಕಿರುಕುಳ ತಾಳದೆ ಹತ್ತಿಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ನಾಗಪ್ಪನ ಸಾವಿಗೆ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿಎಂ ಮಾತಿಗೂ ಬ್ಯಾಂಕ್‌ಗಳು ಬೆಲೆ ಕೊಡುತ್ತಿಲ್ಲ!
ರೈತರು ಸಾಲ ಮರುಪಾವತಿಸಲು ವಿಳಂಬವಾದರೆ ಬ್ಯಾಂಕ್‌ಗಳು ರೈತರ ಆಸ್ತಿ ಜಪ್ತಿ ಮಾಡುವುದು, ಕಿರುಕುಳ ಕೊಡುವುದು ಮಾಡಬಾರದು ಎಂದು ಬ್ಯಾಂಕ್‌ಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದರು. ಅಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಬ್ಯಾಂಕ್‌ಗಳು ಆಸ್ತಿ ಜಪ್ತಿ, ಕಿರುಕುಳ ನೀಡುವುದನ್ನು ನಿಷೇಧಿಸಲಾಗುವುದು ಎಂದು ಚಿತ್ರದುರ್ಗ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಸಾಲ, ಕಿರುಕುಳದಂಥ ಸಮಸ್ಯೆಗಳಿಂದ ರೈತರನ್ನ ರಕ್ಷಿಸಲು ಸರ್ಕಾರ ಕಾನೂನಿನಲ್ಲಿ ತಿದ್ದುಪಡಿ ತಂದು ಸಾಲ ಮರುಪಾವತಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದರು. ಹೇಳಿಕೆ ನೀಡಿ ತಿಂಗಳು ಕಳೆದಿಲ್ಲ. ಇದೀಗ ರೈತ ನಾಗಪ್ಪ ಸಾಲಬಾಧೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೀಗಾಗಿ ಸಿಎಂ ಸೂಚನೆಗೆ ಬ್ಯಾಂಕ್‌ಗಳು ಕವಡೆಕಾಸಿನ ಕಿಮ್ಮತ್ತು ಕೊಡುತ್ತಿಲ್ಲವೆ ಎಂಬ ಸಂದೇಹ ಮೂಡಿಸಿದೆ.
ಸಾಲ ಬಾಧೆ ತಾಳಲಾರದೇ ಹಾವೇರಿ ರೈತ ಆತ್ಮಹತ್ಯೆ
ಮೃತ ನಾಗಪ್ಪ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ:
ಬೆಳೆ ನಷ್ಟ, ಬ್ಯಾಂಕ್ ಸಾಲಕ್ಕೆ ನೊಂದು ಮೃತಪಟ್ಟಿರುವ ರೈತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಈಗಾಗಲೇ ನಾಗಪ್ಪನ ಹಿರಿಮಗ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ತಂದೆ ನಾಗಪ್ಪ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದ ಕುಟುಂಬ ಸಂಕಷ್ಟದಲ್ಲಿದೆ. ಹೀಗಾಗಿ ಮೃತ ರೈತನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸದ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.