ವೆಡ್ಡಿಂಗ್‌ ಕಾರ್ಡ್ ಬಂತೆಂದು ಲಿಂಕ್‌ ಓಪನ್‌ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆ ಖಾಲಿ! ಏನಿದು  ಫೇಕ್‌ ವೆಡ್ಡಿಂಗ್‌ ಕಾರ್ಡ್ ಹಗರಣ?   

ತಂತ್ರಜ್ಞಾನ ಮುಂದುವರೆದಂತೆಲ್ಲಾ ವಂಚನೆಗಳು ಅಷ್ಟೇ ಶರವೇಗದಲ್ಲಿ ಮುಂದುವರೆಯುತ್ತಿದೆ. ಯಾವ್ಯಾವುದೋ ಲಿಂಕ್‌ ಕಳುಹಿಸಿ, ಅದನ್ನು ಕ್ಲಿಕ್ ಮಾಡುವಂತೆ ಹೇಳುವ ಮೂಲಕ ಇದಾಗಲೇ ಹಲವರು ದುಡ್ಡನ್ನು ಕಳೆದುಕೊಂಡಿದ್ದಾರೆ. ಇತ್ತೀಚಿಗೆ ನಿಮ್ಮ ಫೋನ್ ಎರಡು ಗಂಟೆಯಲ್ಲಿ ಬಂದ್‌ ಆಗುತ್ತದೆ, ನಿಮ್ಮ ಫೋನ್‌ ಮಿಸ್‌ಯೂಸ್‌ ಆಗುತ್ತಿರುವ ಮಾಹಿತಿ ಬಂದಿದೆ, ನಾವು ಟೆಲಿಫೋನ್‌ ಇಲಾಖೆಯಲ್ಲಿ ಕರೆ ಮಾಡ್ತಿರೋದು ಎನ್ನುವ ಹೊಸ ಕಳ್ಳಾಟವನ್ನೂ ಶುರು ಮಾಡಿಕೊಂಡಿದ್ದಾರೆ. ಅದನ್ನು ಒತ್ತಿ ಇದನ್ನು ಒತ್ತಿ ಎಂದು ಹೇಳಿ ಕೊನೆಗೆ ಬ್ಯಾಂಕ್‌ ಖಾತೆ ಖಾಲಿ ಮಾಡಿರುವ ಪ್ಲ್ಯಾನ್‌ ಇದು. ಇದಾಗಲೇ ಹಲವರ ಮೊಬೈಲ್‌ ಫೋನ್‌ಗೆ ಕರೆಗಳು ಬರುತ್ತಿವೆ. ಈಗ ಇವೆಲ್ಲಕ್ಕಿಂತಲೂ ಹೊಸದಾಗಿ ಮತ್ತೊಂದು ವಂಚನೆ ಶುರುವಾಗಿದೆ. ಅದೇ ಫೇಕ್ ವೆಡ್ಡಿಂಗ್ ಕಾರ್ಡ್ ಸ್ಕ್ಯಾಮ್ (Fake Wedding Card Scam)!

ಹೌದು. ಈಗಂತೂ ಮದುವೆ ಸೀಸನ್‌. ಎಷ್ಟೋ ಮಂದಿ whatsapp ಮತ್ತು ಮೇಲ್‌ಗಳಿಗೆ ಮದುವೆ ಆಮಂತ್ರಣ ಪತ್ರಿಕೆ ಕಳುಹಿಸುತ್ತಾರೆ. ಅವರಲ್ಲಿ ಕೆಲವರು ನಮಗೆ ಪರಿಚಯವೇ ಇರುವುದಿಲ್ಲ. ಅವರ ಮೊಬೈಲ್ ನಂಬರ್‍‌ ನಮ್ಮ ಫೋನ್‌ನಲ್ಲಿ ಸೇವ್‌ ಆಗಿರುವುದಿಲ್ಲ. ಆದರೂ ಯಾರೋ ಪಾಪ ಪರಿಚಯದವರೋ ಇಲ್ಲವೇ ಸ್ನೇಹಿತರೋ ಇರಬಹುದು ಎಂದು ನಂಬಿಬಿಡುತ್ತೇವೆ. ಅದರಲ್ಲಿಯೂ ಮದುವೆ ಆಮಂತ್ರಣ ಪತ್ರಿಕೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಹಾಗಿದ್ದ ಮೇಲೆ ಯಾರಿಗಾದರೂ ಸಹಜವಾಗಿ ಯಾರೋ ಮದುವೆಗೆ ಕರೆದಿದ್ದಾರೆ ಎಂದು ಎನಿಸದೇ ಇರಲಾರದು. ಮದುವೆಗೆ ಹೋಗಲು ಆಗದಿದ್ದರೂ ಕೊನೆಯ ಪಕ್ಷ ನಮ್ಮ ನೆನಪು ಮಾಡಿಕೊಂಡು ಯಾರೋ ಕರೆದಿದ್ದಾರೆ ಎಂದುಕೊಂಡು ಎಂಥವರಾದರೂ ಅದನ್ನು ಓಪನ್‌ ಮಾಡಿಯೇ ಮಾಡುತ್ತೇವೆ.

ನನಗೆ ಮತ್ತು ಪತ್ನಿಗೆ ನಾವು ಸಾಯುವ ದಿನ ಗೊತ್ತು: ಆರ್ಯವರ್ಧನ್‌ ಗುರೂಜಿ ಶಾಕಿಂಗ್‌ ರಹಸ್ಯ!

ಇದನ್ನೇ ಬಂಡವಾಳವಾಗಿಸಿಕೊಂಡಿರುವ ಸ್ಕ್ಯಾಮರ್‍‌ಗಳು, ಬ್ಯಾಂಕ್‌ ಖಾತೆಯನ್ನು ಲೂಟಿ ಮಾಡುವ ಪ್ಲ್ಯಾನ್‌ ಮಾಡಿದ್ದಾರೆ. ಇದೇ ಫೇಕ್ ವೆಡ್ಡಿಂಗ್ ಕಾರ್ಡ್ ಸ್ಕ್ಯಾಮ್. ಇದು ಶುರುವಾಗುವುದು ನಮ್ಮ ಮೇಲ್‌ ಇಲ್ಲವೇ ವಾಟ್ಸಾಪ್‌ಗೆ ವೆಡ್ಡಿಂಗ್ ಕಾರ್ಡ್ ಕಳುಹಿಸುವ ಮೂಲಕ. ಮೇಲ್ನೋಟಕ್ಕೆ ಇದು ಮದುವೆ ಆಮಂತ್ರಣ ಪತ್ರಿಕೆ ಎನ್ನುವುದು ತಿಳಿಯುತ್ತದೆ. ಇದು ಯಾರದ್ದಿರಬಹುದು ಎಂದು ಓಪನ್‌ ಮಾಡಲು ಮುಂದಾಗುತ್ತೇವೆ. ಸಾಮಾನ್ಯವಾಗಿ ಆಮಂತ್ರಣ ಪತ್ರಿಕೆಗಳು ಪಿಡಿಎಫ್‌ ಇಲ್ಲವೇ ಜೆಪಿಗ್‌ Format ನಲ್ಲಿ ಬರುತ್ತದೆ. ಇದು ಕೂಡ ನೋಡಿದಾಗ ಪಿಡಿಎಫ್ ರೀತಿಯಲ್ಲಿಯೇ ಕಾಣಿಸುತ್ತದೆ.

ಒಂದು ವೇಳೆ ಅದನ್ನು ಓಪನ್‌ ಮಾಡಿದಾಗ ಅದು ಎಪಿಕೆ (APK)ಫೈಲ್ ಎಂದು ತಿಳಿದರೆ ಕೂಡಲೇ ಹಿಂದುಮುಂದು ನೋಡದೇ ಅದನ್ನು ಡಿಲೀಟ್‌ ಮಾಡಿಬಿಡಿ. ಒಂದು ವೇಳೆ ಅದು ಪಿಡಿಎಫ್‌ ಫೈಲ್‌ ಆಗಿದ್ದರೂ ಕೂಡ, ಅದರಲ್ಲಿ ಏನಾದರೂ ಲಿಂಕ್‌ ಕಂಡುಬಂದರೆ, ಕೂಡಲೇ ಡಿಲೀಟ್‌ ಮಾಡಿಬಿಡಿ. ಸಾಮಾನ್ಯವಾಗಿ ಇಂದು ಮದುವೆಗಳಲ್ಲಿ ಗೂಗಲ್ ಮ್ಯಾಪ್ ಲಿಂಕ್ ಅಥವಾ ಸ್ಕ್ಯಾನ್ ಕೋಡ್ ಇರುವುದು ಮಾಮೂಲು. ಅದೇ ರೀತಿ ಕಾಣಿಸುವಂತೆ ಇದರಲ್ಲಿ ಲಿಂಕ್‌ ಇರುತ್ತದೆ. ಆದರೆ ಅದು ಎಪಿಕೆ ಫೈಲ್ ಆಗಿರುತ್ತದೆ. ಒಂದು ವೇಳೆ ನೀವೇನಾದರೂ ಅದನ್ನು ಕ್ಲಿಕ್‌ ಮಾಡಿಬಿಟ್ಟರೆ ಈ ಲಿಂಕ್‌ ಓಪನ್‌ ಆಗಿ ನಿಮ್ಮ ಮೊಬೈಲ್ ‌ನಲ್ಲಿ ಇನ್‌ಸ್ಟಾಲ್‌ ಆಗುತ್ತದೆ. ಒಮ್ಮೆ ಲಿಂಕ್‌ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಯಿತು ಎಂದರೆ, ನಿಮ್ಮ ಮೊಬೈಲ್ ಹ್ಯಾಕ್ ಆದಂತೆಯೇ ಸರಿ! ಬಳಿಕ ನಿಮ್ಮ ಮೊಬೈಲ್‌ನಲ್ಲಿ ಇರುವ ಎಲ್ಲಾ ಮಾಹಿತಿಯನ್ನು ಕಳ್ಳರು ಕದ್ದು, ಬ್ಯಾಂಕ್‌ ಖಾತೆಯನ್ನು ಕಬಳಿಸುತ್ತಾರೆ ಎಚ್ಚರ. ಇದಾಗಲೇ ಕೆಲವು ಕಡೆಗಳಲ್ಲಿ ಈ ಹೊಸ ಆಟ ಶುರುವಿಟ್ಟುಕೊಂಡಿದ್ದಾರೆ ಕಳ್ಳರು. 

ನೀಲಿ ಚಿತ್ರದ ಮಧ್ಯೆ ಶಿಲ್ಪಾ ಶೆಟ್ಟಿಯನ್ನು ಎಳೆದು ತರಬೇಡಿ ಪ್ಲೀಸ್‌: ಉದ್ಯಮಿ ರಾಜ್‌ ಕುಂದ್ರಾ ಕಣ್ಣೀರು!