* ಕೃಷಿ ಕಾರ್ಮಿಕರಿಗೆ ಜೆರ್ಸಿ ತೊಡಿಸಿ ಪಂದ್ಯಾವಳಿ* ಗುಜರಾತಲ್ಲಿ ನಕಲಿ ಐಪಿಎಲ್: ರಷ್ಯಾ ಪಂಟರ್ಸ್ಗೆ ಟೋಪಿ! * ಲಕ್ಷಾಂತರ ರು. ಗಳಿಸಿದ್ದ ತಂಡ ಪೊಲೀಸ್ ಬಲೆಗೆ* ಪ್ರತಿ ಪಂದ್ಯಕ್ಕೆ ಕಾರ್ಮಿಕರಿಗೆ ತಲಾ 400 ರುಪಾಯಿ ಕೂಲಿ* ಇಂಟರ್ನೆಟ್‌ನಿಂದ ಚಪ್ಪಾಳೆ, ಕಿರುಚಾಟ ಡೌನ್‌ಲೋಡ್
ಅಹಮದಾಬಾದ್(ಜು.12): ನೀವು ಇಂತಹದ್ದೊಂದು ವಂಚನೆಯನ್ನು ಹಿಂದೆ ಕೇಳಿರಲಾರಿರಿ. ಭಾರತದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮೇಲೆ ಬೆಟ್ಟಿಂಗ್ ನಡೆಸುವ ರಷ್ಯಾದ ಬುಕಿಗಳಿಗೆ ಟೋಪಿ ಹಾಕಲು ಗುಜರಾತ್‌ನ ಗದ್ದೆಯಲ್ಲಿ ನಕಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಿ ಲಕ್ಷಾಂತರ ರು. ಗಳಿಸಿದ್ದ ವಂಚಕರ ತಂಡವೊಂದನ್ನು ಪೊಲೀಸರು ಬಂಧಿಸಿದ್ದಾರೆ.
ಅಚ್ಚರಿಯೆಂಬಂತೆ ಇಲ್ಲಿ ಗದ್ದೆ ಕೆಲಸಗಾರರಿಗೆ ಐಪಿಎಲ್ ತಂಡಗಳ ಜೆರ್ಸಿ ತೊಡಿಸಿ, ಒಂದು ಪಂದ್ಯಕ್ಕೆ 400 ರು. ಕೂಲಿ ನೀಡಿ ಕ್ರಿಕೆಟ್ ಆಡಿಸಲಾಗುತ್ತಿತ್ತು. ಅದಕ್ಕೆ ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ಚಪ್ಪಾಳೆ ಹಾಗೂ ಪ್ರೇಕ್ಷಕರ ಕಿರುಚಾಟಗಳನ್ನು ಜೋಡಿಸಿ, ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆಯ ನಕಲಿ ಧ್ವನಿಯಲ್ಲಿ ಕಮೆಂಟರಿ ಹೇಳಿಸಿ ಯೂಟ್ಯೂಬ್‌ನಲ್ಲಿ ಲೈವ್ ಪ್ರಸಾರ ಮಾಡಲಾಗುತ್ತಿತ್ತು. ಅದನ್ನು ನೋಡಿ ರಷ್ಯಾದ ವಿವಿಧ ನಗರಗಳ ಬುಕಿಗಳು ಭಾರತದಲ್ಲಿ ನಿಜವಾಗಿಯೂ ಐಪಿಎಲ್ ಪಂದ್ಯಗಳು ನಡೆಯುತ್ತಿವೆ ಎಂದು ಭಾವಿಸಿ ಬೆಟ್ ಕಟ್ಟುತ್ತಿದ್ದರು. ನಕಲಿ ಐಪಿಎಲ್ ಪಂದ್ಯಾವಳಿ ‘ನಾಕೌಟ್ ಕ್ವಾರ್ಟರ್‌ಫೈನಲ್’ ಹಂತಕ್ಕೆ ಬಂದು, ಆಯೋಜಕರು 3 ಲಕ್ಷ ರು.ಗಿಂತ ಅಧಿಕ ಹಣವನ್ನು ರಷ್ಯಾದ ರೂಬಲ್‌ನಲ್ಲಿ ಗಳಿಸಿದ ವೇಳೆ ಪೊಲೀಸರು ದಾಳಿ ನಡೆಸಿ ಮೆಗಾ ವಂಚನೆಯನ್ನು ಬಯಲಿಗೆಳೆದಿದ್ದಾರೆ. ವಿಶೇಷವೆಂದರೆ ನಿಜವಾದ ಐಪಿಎಲ್ ಪಂದ್ಯಾವಳಿಗಳು ಮುಗಿದ ಬಳಿಕವೂ ಈ ನಕಲಿ ಐಪಿಎಲ್ ಆಯೋಜಿಸಿ ರಷ್ಯಾ ಬುಕಿಗಳಿಗೆ ಮಂಕು ಬೂದಿ ಎರಚಲಾಗಿದೆ.
ರಷ್ಯಾದಿಂದ ಬಂದವನ ಕರಾಮತ್ತು:
ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೋಲಿಪುರ ಎಂಬ ಹಳ್ಳಿಯ ಗದ್ದೆಯಲ್ಲಿ ಈ ನಕಲಿ ಐಪಿಎಲ್ ಪಂದ್ಯ ನಡೆಸಲಾಗುತ್ತಿತ್ತು. ಕೆಲ ತಿಂಗಳ ಕಾಲ ರಷ್ಯಾದ ಪಬ್ ಒಂದರಲ್ಲಿ ಕೆಲಸ ಮಾಡಿ, ಅಲ್ಲಿನ ಬೆಟ್ಟಿಂಗ್ ದಂಧೆಯನ್ನು ನೋಡಿಕೊಂಡು ಬಂದಿದ್ದ ಶೋಯೆಬ್ ದಾವಡಾ ಎಂಬುವನೇ ಇದರ ಸೂತ್ರಧಾರ. ಈತ ಗುಲಾಂ ಮಸಿ ಎಂಬಲ್ಲಿ ಗದ್ದೆಯೊಂದನ್ನು ಬಾಡಿಗೆಗೆ ಪಡೆದು, ಅಲ್ಲಿ ಹಾಲೋಜಿನ್ ಲೈಟುಗಳನ್ನು ಅಳವಡಿಸಿ, ಕ್ಯಾಮೆರಾದಲ್ಲಿ ಅವು ಫ್ಲಡ್‌ಲೈಟ್ ರೀತಿ ಕಾಣುವಂತೆ ಮಾಡಿದ್ದ. ನಂತರ 21 ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು, ಅವರಿಗೆ ಚೆನ್ನೈ ಸೂಪರ್‌ಕಿಂಗ್‌್ಸ, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ಆಟಗಾರರ ಜರ್ಸಿಗಳನ್ನು ತೊಡಿಸಿ ಆಟ ಆಡಿಸುತ್ತಿದ್ದ. ಪ್ರತಿ ಮ್ಯಾಚ್‌ಗೆ ಅವರಿಗೆ 400 ರು. ಕೂಲಿ ನೀಡುತ್ತಿದ್ದ.
ಎಚ್‌ಡಿ ಕ್ಯಾಮೆರಾ, ನಕಲಿ ಧ್ವನಿ:
ಈ ಪಂದ್ಯಗಳನ್ನು ನೇರ ಪ್ರಸಾರ ಮಾಡಲು ಶೋಯೆಬ್ ದಾವಡೆ ಐದು ಎಚ್‌ಡಿ ಕ್ಯಾಮೆರಾಗಳನ್ನು ಬಳಸುತ್ತಿದ್ದ. ನಕಲಿ ಅಂಪೈರ್‌ಗಳು ವಾಕಿಟಾಕಿಗಳನ್ನು ಹಿಡಿದು ಅವುಗಳ ಮುಂದೆ ಓಡಾಡುತ್ತಿದ್ದರು. ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ಪ್ರೇಕ್ಷಕರ ಚಪ್ಪಾಳೆ ಹಾಗೂ ಕೂಗಾಟಗಳನ್ನು ಪಂದ್ಯದ ವಿಡಿಯೋಕ್ಕೆ ಅಳವಡಿಸಿ, ಹರ್ಷ ಬೋಗ್ಲೆಯ ಧ್ವನಿಯನ್ನು ಮಿಮಿಕ್ ಮಾಡುವ ಕಲಾವಿದನಿಂದ ಕಾಮೆಂಟ್ರಿ ಹೇಳಿಸುತ್ತಿದ್ದ. ಅದನ್ನು ಯೂಟ್ಯೂಬ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಿಸುತ್ತಿದ್ದ. ರಷ್ಯಾದ ಟ್ವೆರ್, ವೋರೊನೆಜ್ ಹಾಗೂ ಮಾಸ್ಕೋದಲ್ಲಿ ಕುಳಿತ ಬುಕಿಗಳು ಅದನ್ನು ನೋಡಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಬೆಟ್ಟಿಂಗ್‌ನಿಂದ ಈವರೆಗೆ ಶೋಯೆಬ್ ಗ್ಯಾಂಗ್‌ಗೆ ಟೆಲಿಗ್ರಾಂ ಆ್ಯಪ್ ಮೂಲಕ 3.21 ಲಕ್ಷ ರು. ಹಣ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ. ಶೋಯೆಬ್‌ನ ಜೊತೆ ಸಾದಿಕ್ ದಾವಡಾ, ಸೈಫಿ ಹಾಗೂ ಮೊಹಮ್ಮದ್ ಕೋಲು ಎಂಬುವನನ್ನೂ ಬಂಧಿಸಲಾಗಿದೆ.
ಆನಂದ್ ಮಹಿಂದ್ರಾ ಮೆಚ್ಚುಗೆ!
ನಕಲಿ ಐಪಿಎಲ್ ಆಯೋಜಕರ ಸೃಜನಶೀಲ ಚಾಲಾಕಿತನವನ್ನು ಟ್ವೀಟರ್‌ನಲ್ಲಿ ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ‘ನಿಜಕ್ಕೂ ಅದ್ಭುತ’ ಎಂದು ಬಣ್ಣಿಸಿದ್ದಾರೆ. ಮೋಸ ಮಾಡುವುದರ ಬದಲು ಇವರು ಈ ಪಂದ್ಯವನ್ನೇ ‘ಮೆಟಾವರ್ಸ್ ಐಪಿಎಲ್’ ಎಂದು ಕರೆದಿದ್ದರೆ ನೂರಾರು ಕೋಟಿ ರು. ಗಳಿಸಬಹುದಿತ್ತು ಎಂದೂ ಹೇಳಿದ್ದಾರೆ.