ಬೆಂಗಳೂರು(ಏ.02): ರಾಮಮೂರ್ತಿ ನಗರ ಸಮೀಪ ಸ್ಟೇಷನರಿ ಅಂಗಡಿ ಮಾಲಿಕ ಹಾಗೂ ಗ್ರಾಹಕನಿಗೆ ಸಿಸಿಬಿ ಪೊಲೀಸರೆಂದು ಹೇಳಿ ಡ್ರಗ್ಸ್‌ ಕೇಸ್‌ ದಾಖಲಿಸುತ್ತೇವೆ ಎಂದು ಬೆದರಿಸಿ ಬುಧವಾರ ಸುಲಿಗೆ ಮಾಡಿದ್ದ ಎಂಟು ಮಂದಿ ನಕಲಿ ಪೊಲೀಸರು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಕೆ.ಆರ್‌.ಪುರದ ಅಪ್ರೋಜ್‌ ಖಾನ್‌, ರೂಹಿದ್‌, ಸಾದೀಕ್‌, ಮನ್ಸೂರ್‌, ಕುರಮ್‌, ಶೇಖ್‌ ಸಲ್ಮಾನ್‌, ಸಂಚುಕೋರರಾದ ರುದ್ರೇಶ್‌ ಹಾಗೂ ಮುಸ್ತಾಫರ್‌ ಆಲಿ (39) ಬಂಧಿತರಾಗಿದ್ದು, ಆರೋಪಿಗಳಿಂದ 9 ಮೊಬೈಲ್‌, 2 ಬೈಕ್‌, ನಕಲಿ ಪೊಲೀಸ್‌ ಐಡಿ ಕಾರ್ಡ್‌ ಹಾಗೂ ಕಾರು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ರಾಮಮೂರ್ತಿ ನಗರದ ಕಲ್ಕೆರೆ ಮುಖ್ಯರಸ್ತೆಯಲ್ಲಿರುವ ಸ್ಟೇಷನರಿ ಮಳಿಗೆ ಮೇಲೆ ಸಿಸಿಬಿ ಸೋಗಿನಲ್ಲಿ ಆರೋಪಗಳು ದಾಳಿ ನಡೆಸಿದ್ದರು. ಈ ಬಗ್ಗೆ ಅಂಗಡಿ ಮಾಲಿಕ ನೀಡಿದ ದೂರಿನ ಮೇರೆಗೆ ಕೃತ್ಯ ನಡೆದ ಕೆಲವೇ ತಾಸಿನಲ್ಲಿ ನಕಲಿ ಪೊಲೀಸರ ತಂಡವನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಟಕಿ ಪಕ್ಕ ಮಲಗುವಾಗ ಹುಷಾರ್‌..!

ಹಣ ಸಂಪಾದನೆಗೆ ನಾನಾ ವೇಷ

ಅಪರಾಧ ಹಿನ್ನಲೆಯುಳ್ಳ ಅಪ್ರೋಜ್‌ ಖಾನ್‌ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸುಲಭವಾಗಿ ಹಣ ಸಂಪಾದನೆಗೆ ಸಾಮಾಜಿಕ ಹೋರಾಟಗಾರ ವೇಷ ಧರಿಸಿದ್ದ ಆತ, ಟಿ.ಸಿ.ಪಾಳ್ಯ ಸಮೀಪ ‘ಮಾನವ ಹಕ್ಕುಗಳ ರಕ್ಷಣಾ ಸಮಿತಿ’ ಹೆಸರಿನ ಸಂಘಟನೆ ಕಚೇರಿ ಆರಂಭಿಸಿದ್ದ. ಅಲ್ಲದೆ, ‘ಪೊಲೀಸ್‌ ಐ’ ಪತ್ರಿಕೆ ನಡೆಸುವುದಾಗಿ ಸಹ ಹೇಳಿಕೊಂಡಿದ್ದ. ಜನರಿಗೆ ಮಾಧ್ಯಮ ಹಾಗೂ ಪೊಲೀಸರ ಹೆಸರಿನಲ್ಲಿ ಬೆದರಿಸಿ ಅಪ್ರೋಜ್‌ ತಂಡ ಸುಲಿಗೆ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತೆಯೇ ರಾಮಮೂರ್ತಿನಗರ ಕಲ್ಕೆರೆ ಮುಖ್ಯರಸ್ತೆ ಸಮೀಪದ ಸ್ಟೇಷನರಿ ಅಂಗಡಿಗೆ ಬುಧವಾರ ಮಧ್ಯಾಹ್ನ 3 ಗಂಟೆಯಲ್ಲಿ ಕಾರು ಮತ್ತು ಬೈಕ್‌ಗಳಲ್ಲಿ ಅಫೆä್ರೕಜ್‌ ಖಾನ್‌ ತಂಡ ತೆರಳಿದೆ. ಆಗ ಅಂಗಡಿ ಮಾಲಿಕ ನಿಹಾಲ್‌ ಸಿಂಗ್‌ಗೆ ತಮ್ಮನ್ನು ಸಿಸಿಬಿ ಪೊಲೀಸರು ಎಂದು ಪರಿಚಯಿಸಿಕೊಂಡ ಆರೋಪಿಗಳು, ನಿಮ್ಮ ಅಂಗಡಿಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ನಾವು ಅಂಗಡಿ ಪರಿಶೀಲನೆ ನಡೆಸಬೇಕು ಎಂದಿದ್ದಾರೆ. ಈ ಮಾತಿಗೆ ನಿಹಾಲ್‌ ಸಿಂಗ್‌ ಭಯಭೀತಿಗೊಂಡಿದ್ದಾರೆ. ಇದನ್ನು ಗಮನಿಸಿದ ನಕಲಿ ಪೊಲೀಸರು, ನಮಗೆ .3 ಲಕ್ಷ ಕೊಟ್ಟರೆ ಸುಮ್ಮನೆ ಬಿಡುತ್ತೇವೆ. ಇಲ್ಲ ಅಂಗಡಿಯಲ್ಲಿ ನಾವೇ ಡ್ರಗ್ಸ್‌ ಇಟ್ಟು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುತ್ತೇವೆ ಎಂದು ಮತ್ತೆ ಧಮ್ಕಿ ಹಾಕಿದ್ದಾರೆ.

ಅತ್ತೆ ಆಧಾರ್‌ ಕಾರ್ಡ್ ಬಳಸಿ ಚಿನ್ನಾಭರಣ ಪಡೆದುಕೊಂಡ ಸೊಸೆ!

ಈ ಮಾತು ಕೇಳಿ ಅಂಗಡಿ ಮಾಲಿಕ ಓಡಿ ಹೋಗಿದ್ದಾರೆ. ಅದೇ ವೇಳೆ ಅಂಗಡಿಗೆ ಬಂದ ಸಾದೀಕ್‌ ಎಂಬಾತನಿಗೆ ಡ್ರ್ಯಾಗರ್‌ ತೋರಿಸಿ ಮೊಬೈಲ್‌, ಬೈಕ್‌ ಹಾಗೂ 2 ಸಾವಿರ ಹಣ ಕಸಿದುಕೊಂಡ ಆರೋಪಿಗಳು, ಏನಾದರೂ ಮಾತನಾಡಿದರೆ ಡ್ರಗ್ಸ್‌ ಖರೀದಿಗೆ ಬಂದಿದ್ದ ಗಿರಾಕಿ ಎಂದು ನಿನ್ನ ಮೇಲೂ ಕೇಸ್‌ ದಾಖಲಿಸುವುದಾಗಿ ಹೆದರಿಸಿ ಕಾಲ್ಕಿತ್ತಿದ್ದರು. ಈ ಘಟನೆ ಬಳಿಕ ಕೂಡಲೇ ಕೆ.ಆರ್‌.ಪುರ ಠಾಣೆ ಪೊಲೀಸರಿಗೆ ನೊಂದ ಅಂಗಡಿ ಮಾಲಿಕ ನಿಹಾಲ್‌ ಸಿಂಗ್‌ ದೂರು ಸಲ್ಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಅಂಬರೀಷ್‌ ನೇತೃತ್ವದ ತಂಡ, ಮೊಬೈಲ್‌ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ನಕಲಿ ಸಿಸಿಬಿ ಪೊಲೀಸರನ್ನು ರಾತ್ರೋರಾತ್ರಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.