ಸೈಬರ್ ವಂಚನೆಗೊಳಗಾದ ಜನರಿಗೆ ಆನ್‌ ಲೈನ್‌ ಮೂಲಕ ಕಾನೂನು ಸೇವೆ ಒದಗಿಸುವುದಾಗಿ ನಂಬಿಸಿ ಹಣ ದೋಚುತ್ತಿದ್ದ ಎಂಜಿನಿಯರಿಂಗ್ ಪದವೀಧರನೊಬ್ಬನನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಸೈಬರ್ ವಂಚನೆಗೊಳಗಾದ ಜನರಿಗೆ ಆನ್‌ ಲೈನ್‌ ಮೂಲಕ ಕಾನೂನು ಸೇವೆ ಒದಗಿಸುವುದಾಗಿ ನಂಬಿಸಿ ಹಣ ದೋಚುತ್ತಿದ್ದ ಎಂಜಿನಿಯರಿಂಗ್ ಪದವೀಧರನೊಬ್ಬನನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊತ್ತನೂರು ಸಮೀಪದ ಬಿಡಿಎಸ್ ಗಾರ್ಡನ್‌ ನಿವಾಸಿ ತುಫೈಲ್ ಅಹಮ್ಮದ್‌ ಅಲಿಯಾಸ್ ಚೋಟಾ ಅಹಮ್ಮದ್ ಮುಬಾರಕ್ ಬಂಧಿತನಾಗಿದ್ದು, ಆರೋಪಿಯಿಂದ 10 ಹಾರ್ಡ್‌ ಡಿಸ್ಕ್‌ಗಳು,7 ನಕಲಿ ಕಂಪನಿಗಳ ಸೀಲ್‌ಗಳು, ಬಾಡಿಗೆ ಒಪ್ಪಂದ ಪತ್ರಗಳು, ಚೆಕ್‌ಬುಕ್‌, ಮೊಬೈಲ್ ಹಾಗೂ 11 ಸಿಮ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಂಚನೆ ಹೇಗೆ?:

ಕಳೆದ ಫೆಬ್ರವರಿಯಲ್ಲಿ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್ ಮಾಹಿತಿ ಆಧರಿಸಿ ಕಾನೂನು ಸೇವೆ ಹೆಸರಿನ ವಂಚನೆ ಬಗ್ಗೆ ಎಫ್‌ಐಆರ್ ದಾಖಲಾಯಿತು. ಬಳಿಕ ಹೆಚ್ಚಿನ ತನಿಖೆಗೆ ಸಿಸಿಬಿ ಸೈಬರ್‌ ಕ್ರೈಂ ಠಾಣೆಗೆ ವರ್ಗಾವಣೆಯಾಯಿತು. ಸೋಲಾರ್ ಫ್ಲಾಂಟ್‌ ಅಳವಡಿಸುವುದಾಗಿ ಆಮಿಷವೊಡ್ಡಿ ₹1.5 ಕೋಟಿ ಸಂತ್ರಸ್ತರಿಗೆ ವಂಚಿಸಿದ್ದಾಗಿ ಹೇಳಲಾಗಿತ್ತು. ಆಗ ಈ ಮೋಸದ ಹಣವನ್ನು ಮರಳಿ ಪಡೆಯಲು ಆನ್‌ಲೈನ್‌ನಲ್ಲಿ ಕಾನೂನು ನೆರವು ಹುಡುಕುತ್ತಿರುವಾಗ ಕ್ವಿಕ್‌ ಮೋಟೊ ಲೀಗಲ್‌ ಸರ್ವಿಸ್‌ (quickmoto legal service) ಹೆಸರಿನ ವೆಬ್‌ ಸೈಟ್ ಸಿಕ್ಕಿದೆ.

ತರುವಾಯ ಕಾನೂನು ಸೇವೆಯನ್ನು ಪಡೆಯಲು ಆ ಸಂಸ್ಥೆಯನ್ನು ದೂರುದಾರರು ಸಂಪರ್ಕಿಸಿದರು. ಆಗ ಟೆಲಿಕಾಲರ್‌ಗಳ ನಾಜೂಕಿನ ಮಾತಿಗೆ ಮರುಳಾದ ಸಂತ್ರಸ್ತರಿಂದ ಹಂತ ಹಂತವಾಗಿ 13.5 ಲಕ್ಷ ರು. ವಸೂಲಿ ಮಾಡಿದ್ದರು. ಹಣ ಕಳೆದುಕೊಂಡ ಬಳಿಕ ಆ ಲೀಗಲ್ ಸರ್ವಿಸ್ ಸಂಸ್ಥೆ ಬಗ್ಗೆ ವಿಚಾರಿಸಿದಾಗ ಅದೂ ಸಹ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಸೈಬರ್ ಪೋರ್ಟಲ್‌ನಲ್ಲಿ ಅವರು ದೂರು ಸಲ್ಲಿಸಿದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಂಚನೆಗೆ ಕಾಲ್ ಸೆಂಟರ್‌:

ಈ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕಸ್ತೂರಿನಗರದಲ್ಲಿದ್ದ ಕಂಪನಿಯ ಕಾಲ್ ಸೆಂಟರ್ ಪತ್ತೆ ಹಚ್ಚಿದ್ದಾರೆ. ತಮಿಳುನಾಡು ಮೂಲದ ಚೋಟಾ ಅಹಮ್ಮದ್‌, ಕಾನೂನು ಸೇವೆ ಒದಗಿಸುವ ನೆಪದಲ್ಲಿ ಜನರಿಗೆ ವಂಚಿಸಿ ಹಣ ದೋಚಲು ಕಾಲ್‌ಸೆಂಟರ್ ಸ್ಥಾಪಿಸಿದ್ದ. ಇದಕ್ಕಾಗಿ 12 ಮಂದಿ ಟೆಲಿಕಾಲರ್‌ಗಳನ್ನು ಆತ ನೇಮಿಸಿಕೊಂಡಿದ್ದ. ಅಲ್ಲದೆ Zoiper-5 ಹೆಸರಿನ (Voice over Internet Protocol) ಆ್ಯಪ್‌ ಅನ್ನು ಬಳಸಿ ಸೈಬರ್‌ ವಂಚನೆಗೆ ಬಲಿಯಾಗಿದ್ದ ನಾಗರಿಕರಿಗೆ ಆರೋಪಿಗಳು ಕರೆ ಮಾಡಿ ಮತ್ತೆ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ದುಬೈನಲ್ಲಿ ಆರೋಪಿ ಸೋದರ:

ಈ ವಂಚನೆ ಜಾಲಕ್ಕೆ ದುಬೈನಲ್ಲಿ ನೆಲೆಸಿರುವ ಚೋಟಾ ಅಹಮ್ಮದ್‌ ಸೋದರ ಮಾಸ್ಟರ್‌ ಮೈಂಡ್‌ ಆಗಿದ್ದು, ದುಬೈನಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನಕಲಿ ಕಂಪನಿಗಳನ್ನು ಸ್ಥಾಪಿಸಿ ಆತ ಜನರಿಗೆ ವಂಚಿಸಿ ಹಣ ದೋಚುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋಟ್ಯಂತರ ವಂಚನೆ ಶಂಕೆ:ಆರೋಪಿಗಳು ಕೋಟ್ಯಂತರ ರು. ವಂಚಿಸಿರುವ ಬಗ್ಗೆ ಶಂಕೆ ಇದೆ. ಇದುವರೆಗೆ ದೇಶ ವ್ಯಾಪ್ತಿ ದಾಖಲಾಗಿದ್ದ 29 ಪ್ರಕರಣಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.