ಬುದ್ಧಿ ಹೇಳಿದಕ್ಕೆ ಹೆತ್ತ ಅಪ್ಪನ ಹೆಣ ಉರುಳಿಸಿದ ಪಾಪಿ ಪುತ್ರ..!
* ಕೋಳಿ ಕಟ್ ಮಾಡೋ ಚೂರಿಯಿಂದ ಹೆತ್ತ ತಂದೆಗೆ ಚುಚ್ಚಿದ..!
* ಬುದ್ಧಿ ಹೇಳಿದಕ್ಕೆ ಹೆತ್ತ ಅಪ್ಪನ ಹೆಣ ಉರುಳಿಸಿದ ಪಾಪಿ ಪುತ್ರ..!
* ಕುಡಿತದ ಅಮಲಿನಲ್ಲಿ ಚೂರಿಯಿಂದ ಇರಿದು ಹತ್ಯೆ
ವರದಿ: ಗಿರೀಶ್ ಕುಮಾರ್
ಗದಗ, (ಮೇ.15): ಬೆಂಕಿ.. ದೇಹವನ್ನ ಸುಟ್ಟರೆ.. ಕುಡಿತದ ಚಟ ಸಂಸಾರವನ್ನೇ ಸುಡುತ್ತೆ ಅನ್ನೋ ಮಾತಿದೆ.. ನಾವು ಹೇಳುವ ಸ್ಟೋರಿಯಲ್ಲೂ ಅದೇ ಆಗಿದ್ದು, ವಿಪರೀತ ಕುಡಿತದ ದಾಸನಾಗಿದ್ದ ಆ ವ್ಯಕ್ತಿ, ಅಮಲಿನಲ್ಲಿ ಹೆತ್ತ ತಂದೆಯನ್ನೇ ಹತ್ಯೆ ಮಾಡಿದ್ದಾನೆ.. ಸರಿಯಾಗಿ ಜೀವನ ನಡೆಸು ಅಂತಾ ಬುದ್ಧಿ ಹೇಳಿದ್ದಕ್ಕೆ ಉಸಿರು ನೀಡಿದ ತಂದೆಯ ಒಡಲು ಬಗೆದಿದ್ದಾನೆ..
ಹೌದು....ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಹತ್ಯೆಯೊಂದು ಮಗನೇ ತಂದೆಯನ್ನು ಹತ್ಯೆ ಮಾಡಿದ್ದಾನೆ. 55 ವರ್ಷದ ಭರಮಪ್ಪ ದೊಡ್ಡಮನೆ ಅನ್ನೋರ ಕೊಲೆಯಾಗಿದೆ. ಕೊಲೆ ಮಾಡಿದ್ದು, ಭರಮಪ್ಪನ ಪುತ್ರ ಸುರೇಶ್ ದೊಡ್ಡಮನೆ. ಹೆತ್ತ ತಂದೆಯನ್ನೇ ಚೂರಿಯಿಂದ ಇರುದು ಸುರೇಶ್ ಹತ್ಯೆ ಮಾಡಿದ್ದಾನೆ.. ಸದ್ಯ ತಲೆ ಮರಿಸಿಕೊಂಡಿರೋ ಸುರೇಶನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.. ಇತ್ತ, ಸಂಸಾರದ ಆಧಾರಕಳೆದುಕೊಂಡಿರೋ ಕುಟುಂಬಸ್ಥರು ಆಕ್ರಂದನೆ ಮುಗಿಲು ಮುಟ್ಟಿದೆ.
ಕುಡಿತದ ಅಮಲಿನಲ್ಲಿ ಚೂರಿಯಿಂದ ಇರಿದು ಹತ್ಯೆ..
ಹಾತಲಗೇರಿ ಗ್ರಾಮ ದೇವತೆಯ ಜಾತ್ರೆ ಸಮೀಪಿಸ್ತಿದೆ.. ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಊರಿಗೆ ಊರು ಸಿಂಗಾರಗೊಳ್ತಿದೆ.. ಮನೆಗೆ ಸುಣ್ಣ ಬಣ್ಣ ಹಚ್ಚುವ ಮೂಲಕ ಊರಿನ ಜನ ಜಾತ್ರೆ ಸಿದ್ಧತೆಯಲ್ಲಿ ತೊಡಗಿದ್ದಾರೆ.. ಭರಮಪ್ಪನೂ ಏಕಾಂಗಿಯಾಗಿ ಮನೆಗೆ ಬಣ್ಣ ಹಚ್ತಿದ್ದ.. ಸೊಸೆಗೂ ಮನೆಗೆ ಬಣ್ಣ ಬಳೆಯಲು ಸಹಾಯ ಮಾಡು ಅಂತಾ ಕೇಳಿಕೊಂಡಿದ್ದ.. ಆದ್ರೆ, ಆಸ್ಪತ್ರೆಗೆ ಹೋಗಿ ಬರೋದಾಗಿ ಹೇಳಿ ಸೊಸೆ ತವರು ಮನೆಗೆ ಹೋಗಿದ್ಲು.. ರಾತ್ರಿವರೆಗೂ ಕೆಲಸ ಮಾಡಿ ಭರಮಪ್ಪ ಸುಸ್ತಾಗಿದೆ..ಆದ್ರೆ, ಪುತ್ರ ಸುರೇಶ ಎಂದಿನಂತೆ ಕಠಮಟ್ಟಕ್ಕೆ ಕುಡಿದು ಮನೆ ಹತ್ರ ಬಂದಿದ್ದ.. ಕುಡಿದು ಕಲಾಟೆ ಮಾಡ್ಬೇಡ ಅಂತಾ ತಂದೆ ತಾಯಿ ಬುದ್ಧಿ ಹೇಳಿದ್ರು.. ಗಲಾಟೆ ಮಾಡಿದ್ರೆ ಅಕ್ಕ ಪಕ್ಕದ ಮನೆಯವ್ರನ್ನ ಸೇರಿಸ್ತೀನಿ ಅಂತಾ ತಾಯಿ ಹೊರ ನಡೆದ್ರು.. ಇದೇ ವೇಳೆಗೆ ಭರಮಪ್ಪ ಮೇಲೆ ಸುರೇಶ್ ಚಾಕುವಿನಿಂದ ಹಲ್ಲೆ ಮಾಡಿದ್ದ..
ಕೋಳಿ ಕಟ್ ಮಾಡಲು ಇಟ್ಟಿದ್ದ ಚಾಕುವಿನಿಂದ ತಂದೆ ಹತ್ಯೆ..!
ತಾಯಿ ಜನ ಸೇರಿಸಲು ಹೊರಗೆ ಹೋಗಿದ್ಲು.. ದಿನದ ಜಗಳ ಅಂತಾ ಕೇರ್ ಮಾಡ್ದೆ ಭರಮಪ್ಪ ಗೊಣಗಿಕೊಂಡೇ ಊಟಕ್ಕೆ ಮಿರ್ಚಿ ಭಜ್ಜಿ ತರೋದಕ್ಕೆ ಹೋಗಿದ್ದ.. ಇದೇ ವೇಳೆ ಮನೆಯಲ್ಲಿದ್ದ ಚೂರು ಎತ್ತಿಟ್ಟುಕೊಂಡಿದ್ದ ಸುರೇಶ್ ತಂದೆ ಮನೆಗೆ ಬರ್ತಿದ್ದಂತೆ ಏಕಾ ಏಕಿ ಅಟ್ಯಾಕ್ ಮಾಡಿದ್ದ.. ಹೊಟ್ಟಿಯ ಭಾಗಕ್ಕೆ ಚುಚ್ಚಿ ಗಾಯಗೊಳಿಸಿದ್ದ.. ಕ್ಷಣಾರ್ಧದಲ್ಲೇ ಭರಮಪ್ಪ ಪ್ರಾಣ ಚೆಲ್ಲಿದ್ದ..
ಜೀವನ ಪಾಠ ಹೇಳಿದ್ದಕ್ಕೆ ಅಪ್ಪನ ಹತ್ಯೆ..!
ಮದ್ವೆಯಾದಾಗಿನಿಂದ ಸುರೇಶ ಕುಡಿತದ ದಾಸ ಆಗಿದ್ದ.. ಯಾರು ಕುಡಿಸುತ್ತಾರೋ ಅವರ ಬಳಿ ಕೆಲಸಕ್ಕೆ ಹೋಗ್ತಿದ್ದ.. ಸಂಜೆಯಾಗ್ತಿದ್ದಂತೆ ಫುಲ್ ಟೈಟಾಗಿರ್ತಿದ್ದ.. ಊರಿನ ಹಬ್ಬಕ್ಕಾದ್ರೂ ಮನೆ ಕೆಲಸ ಮಾಡಿ.. ಬಣ್ಣ ಹಚ್ಚಿ ಮನೆ ಶುದ್ಧ ಮಾಡ್ಕೊಳಿ ಅಂತಾ ಸಹಜವಾಗೇ ಭರಮಪ್ಪ ಬುದ್ಧಿ ಹೇಳಿದ್ದ.. ಹೆಂಡತಿ ಊರಿಗೆ ಹೇಳಿ ಹೋಗಿಲ್ಲ.. ನನಗೆ ಯಾಕೆ ತಿಳಿಸಿಲ್ಲ ಅಂತಾ ಕಿರಿಕ್ ತೆಗೆದಿದ್ದ ಸುರೇಶ ಮನೆ ಮಂದಿ ಜೊತೆ ಜಗಳ ಆರಂಭಿಸಿದ್ದ.. ಬುದ್ಧಿ ಹೇಳಿ ತುಸು ಗದರಿದ ತಂದೆಯ ಮೇಲೆ ಯಮನಂತೆ ಎರಗಿದ್ದ..
ಭರಮಪ್ಪನಿಗೆ ನಾಲ್ವರು ಮಕ್ಕಳು.. ಆದ್ರೆ, ಹಿರಿಯ ಮಗ ಸುರೇಶನೊಂದಿಗೆ ಭರಮಪ್ಪ ಇದೇ ಮನೆಯಲ್ಲಿ ವಾಸವಾಗಿದ್ದ.. ಸುರೇಶನಿಗೆ ಮೂವರು ಮಕ್ಕಳು ಇದ್ದಿದ್ರಿಂದ ಜವಾಬ್ದಾರಿಯಿಂದ ನಡ್ಕೊ ಅಂತಾ ಅಪ್ಪ ಬುದ್ಧಿ ಹೇಳ್ತಿದ್ದ.. ಇದ್ದ ತುಂಡು ಜಮೀನಲ್ಲಿ ಕೆಲಸ ಮಾಡಿ ಭರಮಪ್ಪ ಕುಟುಂಬ ನಿರ್ವಹಿಸುತ್ತಿದ್ದ.. ಗಂಡನಿಗೆ ಸಾಥ್ ನೀಡಿದ್ದ ಹೆಂಡತಿ ಮಲ್ಲವ್ವ ತರಕಾರಿ ಮಾರಿ ಜೀವನ ನಡೆಸ್ತಿದ್ಲು.. ಆದ್ರೆ ಮಗ ಮಾತ್ರ ಉಂಡಾಡಿ ಗುಂಡನಂತೆ ಊರು ಸುತ್ತುತ್ತಿದ್ದ.. ಮಗ ಸರಿಹೋಗ್ಬೇಕು ಅಂತಾ ಬುದ್ಧಿ ಹೇಳಿದ್ದೇ ಭರಮಪ್ಪನಿಗೆ ಕಂಟಕವಾಗಿದೆ..
ಸದ್ಯ ಕುಟುಂಬಕ್ಕೆ ಆಧಾರ ಇಲ್ಲದಂತಾಗಿದೆ.. ಗಂಡನನ್ನ ಕಳೆದುಕೊಂಡ ದುಖಃದಲ್ಲಿರೋ ಮಲ್ಲವ್ವ, ಹಂತಕ ಮಗನಿಗೆ ಶಿಕ್ಷೆಯಾಗಲಿ ಅಂತಿದಾಳೆ.. ಸುರೇಶ ಜೈಲು ಸೇರೋದು ಗ್ಯಾರಂಟಿ.. ಮಕ್ಕಳು ಹಾಗೂ ಕುಟುಂಬದ ಬಗ್ಗೆ ಯೋಚಿಸಿದ್ರೆ ಸುರೇಶ್ ಕುಡಿತದ ದಾಸ ಆಗ್ತಿರಲಿಲ್ಲ.. ತಂದೆಯ ಹಂತಕ ಅನ್ನೋ ಹಣೆ ಪಟ್ಟಿ ಕಟ್ಟಿಕೊಳ್ತಿರಲಿಲ್ಲ..