ಪಬ್ಬೊಂದರ ಮುಂದೆ ಕುಡಿದ ಮತ್ತಿನಲ್ಲಿ ಯುವಕನಿಗೆ ಥಳಿಸಿದ ಯುವತಿಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವೈರಲ್ ಆಗಿತ್ತು.
ಲಕ್ನೋ: ಪಬ್ಬೊಂದರ ಮುಂದೆ ಕುಡಿದ ಮತ್ತಿನಲ್ಲಿ ಯುವಕನಿಗೆ ಥಳಿಸಿದ ಯುವತಿಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವೈರಲ್ ಆಗಿತ್ತು. ಇದಾದ ಬಳಿಕ ಲಕ್ನೋ ಪೊಲೀಸರು ಇಬ್ಬರು ಯುವತಿಯರನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. ಉತ್ತರಪ್ರದೇಶದ ಲಕ್ನೋದಲ್ಲಿರುವ ಅನ್‌ಪ್ಲಗ್‌ಡ್ ಕೆಫೆಯಲ್ಲಿ ಗುರುವಾರ ರಾತ್ರಿ(ಜು.23) ರಾತ್ರಿ ಈ ಘಟನೆ ನಡೆದಿತ್ತು. ವಿಡಿಯೋದಲ್ಲಿ ಎಳೆಯ ಯುವತಿಯರಿಬ್ಬರು ಯುವಕನೊರ್ವನೊಂದಿಗೆ ಕಿರಿಕ್ ಮಾಡಿಕೊಂಡು ಆತನಿಗೆ ಸರಿಯಾಗಿ ಥಳಿಸಿದ್ದರು.
ಇತ್ತೀಚೆಗೆ ಯುವತಿಯರು ಕೂಡ ಹುಡುಗರಂತೆ ಗ್ಯಾಂಗ್ ಕಟ್ಟಿಕೊಂಡು ಬೀದಿಯಲ್ಲಿ ರಂಪಾಟ ಮಾಡುವುದು ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದೆ ಯುವತಿಯ ಎರಡು ಗ್ಯಾಂಗ್ ನಡುರಸ್ತೆಯಲ್ಲಿ ಕಲ್ಲು ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದರು. ಇದು ಕೂಡ ಉತ್ತರಪ್ರದೇಶದ ಲಕ್ನೋದಲ್ಲಿಯೇ ನಡೆದಿತ್ತು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಪಬ್ ಮುಂದೆ ಯುವತಿಯರ ಈ ದಾಂಧಲೆಯ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಯುವತಿಯರಿಬ್ಬರು ಯುವಕನೋರ್ವನಿಗೆ ಸರಿಯಾಗಿ ಬಾರಿಸುತ್ತಿದ್ದು, ಈ ವೇಳೆ ಅಲ್ಲೇ ಇದ್ದ ಇತರ ಯುವಕರು ಈ ಜಗಳವನ್ನು ಬಿಡಿಸಲು ನೋಡುತ್ತಾರೆ. ಆದರೆ ಸಾಧ್ಯವಾಗುವುದಿಲ್ಲ. ಯುವತಿಯರು ಹೂಕುಂಡದಿಂದ ಹಾಗೂ ಚಪ್ಪಲಿಯಿಂದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯನ್ನು ಅಲ್ಲಿದ್ದ ಅನೇಕರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಲಕ್ನೋದ ವಿಭೂತಿ ಖಂಡ್ ಪೊಲೀಸ್ ಠಾಣೆಯ ಸಮಿತ್ ಕಟ್ಟಡದ 15ನೇ ಮಹಡಿಯಲ್ಲಿದ್ದ ಪಬ್‌ನ ಹೊರಭಾಗದಲ್ಲಿ ಈ ಘಟನೆ ನಡೆದಿತ್ತು. ಇನ್ನು ಯುವತಿಯರ ಈ ಜಗಳ ಬಿಡಿಸಲು ಪಬ್‌ನ ಬೌನ್ಸರ್‌ಗಳೇ ಬರಬೇಕಾಯಿತು ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ದೃಶ್ಯಾವಳಿಗಳನ್ನು ಗಮನಿಸಿ ಹಲ್ಲೆ ಮಾಡಿದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಯುವತಿಯರಿಂದ ಹಲ್ಲೆಗೊಳಗಾದ ಯುವಕ ಎಫ್‌ಐಆರ್ ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.