ಪ್ರತ್ಯೇಕವಾಗಿ ಜಯನಗರ, ವಿವಿ.ಪುರ ಠಾಣಾ ಪೊಲೀಸರ ಭರ್ಜರಿ ಕಾರಾರಯಚರಣೆ, ಐವರು ನೈಜೀರಿಯಾದ ಪೆಡ್ಲರ್‌ಗಳ ಬಂಧನ, ಶೈಕ್ಷಣಿಕ, ಉದ್ಯೋಗದ ವೀಸಾದಡಿ ಬಂದು ಡ್ರಗ್ಸ್ ದಂಧೆ, ಈ ಹಿಂದೆಯೂ ಡ್ರಗ್ಸ್ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ಆರೋಪಿಗಳು.
ಬೆಂಗಳೂರು(ಏ.11): ರಾಜಧಾನಿಯಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ ಜಯನಗರ ಹಾಗೂ ವಿ.ವಿ.ಪುರ ಠಾಣೆ ಪೊಲೀಸರು, ಈ ಸಂಬಂಧ ಪ್ರತ್ಯೇಕವಾಗಿ ಐವರು ವಿದೇಶಿ ಪೆಡ್ಲರ್‌ಗಳನ್ನು ಸೆರೆ ಹಿಡಿದು .8.52 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಪ್ರಜೆಗಳಾದ ಲಾರೆನ್ಸ್ ಅಲಿಯಾಸ್ ಪೀಟರ್, ಬ್ರೈಟ್, ಹ್ಯಾಸ್ಲಿ, ಫ್ರಾಂಕ್ ಅಲಿಯಾಸ್ ಸಂಡೆ ಹಾಗೂ ಇಮ್ಯಾನುಯಲ್ ನಾಜಿ ಬಂಧಿತರಾಗಿದ್ದು, ಆರೋಪಿಗಳಿಂದ ಕೊಕೇನ್, ಎಂಡಿಎಂಎ ಹಾಗೂ ಕ್ರಿಸ್ಟಲ್ ಸೇರಿ .8.52 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲದಿಂದ ಡ್ರಗ್ಸ್ ತಂದು ನಗರದಲ್ಲಿ ಆರೋಪಿಗಳು ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಡ್ರಗ್ಸ್ ಮುಕ್ತ ಭಾರತಕ್ಕೆಅಮಿತ್ ಶಾ ಪಣ: ಕಾಂಗ್ರೆಸ್ ಸರ್ಕಾರಕ್ಕೂ ಪರೋಕ್ಷ ಚಾಟಿ ಬೀಸಿದ ಕೇಂದ್ರ ಗೃಹ ಸಚಿವ
ನ್ಯಾಷನಲ್ ಕಾಲೇಜು ಬಳಿ 7.2 ಕೋಟಿ ಡ್ರಗ್ಸ್ ಜಪ್ತಿ:
ಮೂರು ವರ್ಷಗಳ ಹಿಂದೆ ಶೈಕ್ಷಣಿಕ ವೀಸಾದಡಿ ಭಾರತಕ್ಕೆ ಬಂದ ನೈಜೀರಿಯಾದ ಲಾರೆನ್ಸ್, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದ. ಪ್ರಸುತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬಿದರಹಳ್ಳಿಯ ಮ್ಯಾಂಗೋ ಲೇಔಟ್‌ನಲ್ಲಿ ಆತ ನೆಲೆಸಿದ್ದ. ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗೆ ಇಳಿದ ಲಾರೆನ್ಸ್, ಗೋವಾದ ಪೆಡ್ಲರ್‌ಗಳಿಂದ ಎಂಡಿಎಂಎ ಸೇರಿದಂತೆ ಇತರೆ ಡ್ರಗ್ಸ್ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದ. ಆತನಿಗೆ ಮತ್ತೊಬ್ಬ ವಿದೇಶಿ ಪ್ರಜೆ ಬ್ರೈಟ್ ಸಾಥ್ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
2022ರಲ್ಲಿ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಲಾರೆನ್ಸ್‌ನನ್ನು ಬಂಧಿಸಿ ತಲಘಟ್ಟಪುರ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದು ಮತ್ತೆ ತನ್ನ ಚಾಳಿಯನ್ನು ಆತ ಮುಂದುವರೆಸಿದ್ದ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್ ಸಮೀಪ ಭಾನುವಾರ ತನ್ನ ಸಹಚರ ಬ್ರೈಟ್ ಜತೆ ಡ್ರಗ್‌್ಸ ಮಾರಾಟಕ್ಕೆ ಲಾರೆನ್ಸ್ ಸಜ್ಜಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಬಂಧಿಸಲಾಗಿದೆ. ಬಳಿಕ ಆತನ ಮನೆ ಮೇಲೂ ದಾಳಿ ನಡೆಸಿದಾಗ ಮತ್ತಷ್ಟು ಡ್ರಗ್ಸ್ ಪತ್ತೆಯಾಯಿತು.
ಉತ್ತರ ಕನ್ನಡ: ₹10 ಲಕ್ಷ ಮೊತ್ತದ ಚರಸ್ ಮಾರಾಟಕ್ಕೆ ಯತ್ನ, ಮೂವರ ಬಂಧನ
ಒಟ್ಟು ಆರೋಪಿಗಳಿಂದ 7.12 ಕೋಟಿ ಮೌಲ್ಯದ 1.350 ಕೇಜಿ ಎಂಡಿಎಂ ಸೇರಿದಂತೆ ಇತರೆ ಡ್ರಗ್ಸ್ ಜಪ್ತಿ ಮಾಡಲಾಗಿದೆ. ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿಗಳು, ವೀಸಾ ಅವಧಿ ಮುಗಿದ ಬಳಿಕವು ಮೂರು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದರು ಎಂದು ವಿ.ವಿ.ಪುರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೊಂದು ತಂಡದಿಂದ 1.5 ಕೋಟಿ ಡ್ರಗ್ಸ್ ಪತ್ತೆ
ಜಯನಗರ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮೂವರು ನೈಜೀರಿಯಾ ಪ್ರಜೆಗಳು ಬಲೆ ಬಿದ್ದಿದ್ದಾರೆ. ಬಾಣಸವಾಡಿ ಸಮೀಪದ ಕಮ್ಮನಹಳ್ಳಿಯಲ್ಲಿ ನೆಲೆಸಿದ್ದ ಹ್ಯಾಸ್ಲಿ, ಫ್ರಾಂಕ್ ಅಲಿಯಾಸ್ ಸಂಡೆ ಹಾಗೂ ಇಮ್ಯಾನುಯಲ್ ನಾಜಿ, ನಾಲ್ಕು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ನಗರಕ್ಕೆ ಬಂದಿದ್ದರು. ಬಳಿಕ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿಗಳು, ಐಷಾರಾಮಿ ಜೀವನ ನಡೆಸಲು ಡ್ರಗ್ಸ್ ಮಾರಾಟ ಶುರು ಮಾಡಿದ್ದರು. ಮೂರು ವರ್ಷಗಳ ಹಿಂದೆ ಆರೋಪಿಗಳನ್ನು ಡ್ರಗ್‌್ಸ ಮಾರಾಟ ಪ್ರಕರಣದಲ್ಲಿ ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಆನಂತರ ಜಾಮೀನಿನ ಮೇರೆಗೆ ಜೈಲಿನಿಂದ ಹೊರ ಬಂದ ನೈಜೀರಿಯಾ ಗ್ಯಾಂಗ್, ಮತ್ತೆ ನಗರದಲ್ಲಿ ಡ್ರಗ್ಸ್ ಮಾರಾಟ ಮುಂದುವರೆಸಿದ್ದರು. ಇತ್ತೀಚಿನ ಈ ತಂಡದ ಚಟುವಟಿಕೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಡ್ರಗ್ಸ್ ಖರೀದಿಸುವ ನೆಪದಲ್ಲಿ ಜಯನಗರಕ್ಕೆ ಕರೆಸಿ ಖೆಡ್ಡಾಕ್ಕೆ ಬೀಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
