ಬೆಂಗಳೂರು(ಸೆ.05): ನಟಿ ಸಂಜನಾ ಗಲ್ರಾನಿ ಹಾಗೂ ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಪ್ರಶಾಂತ್‌ ಸಂಬರಗಿ ನಡುವೆ ಡ್ರಗ್‌ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ವಾಕ್ಸಮರ ಮುಂದುವರಿದಿದೆ.

ಶುಕ್ರವಾರ ಮಾತನಾಡಿದ ಸಂಬರಗಿ, ‘ಸಂಜನಾ ಮತ್ತು ಜಮೀರ್‌ ಅಹಮದ್‌ ಖಾನ್‌ ಮಧ್ಯೆ ಇರುವ ಸಂಬಂಧ ಏನು ಎಂಬುದು ಮೊದಲು ತನಿಖೆ ಆಗಬೇಕು’ ಎಂದು ಹೇಳಿ ಹೊಸ ಬಾಂಬ್‌ ಸಿಡಿಸಿದ್ದಾರೆ.

‘ಜಮೀರ್‌ ಜತೆ ಸಂಜನಾ ಶ್ರೀಲಂಕಾಗೆ ಹೋಗಿದ್ದು ಯಾಕೆ? ಅಲ್ಲಿ ಕ್ಯಾಸಿನೋದಲ್ಲಿ ನಡೆದ ಪಾರ್ಟಿಯಲ್ಲಿ ಯಾರೆಲ್ಲ ಇದ್ದರು ಎಂದು ತಿಳಿಯಬೇಕು’ ಎಂದು ಸಂಬರಗಿ ಆಗ್ರಹಿಸಿದ್ದಾರೆ.

"

ಸಂಬರಗಿ ಹಂದಿ- ಸಂಜನಾ; ನಾನು ವಿಷ್ಣುವಿನ ಅವತಾರ- ಸಂಬರಗಿ:

ಇದಕ್ಕೂ ಮೊದಲು ಸಂಬರಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಜನಾ, ‘ಸಂಬರಗಿ ಹಂದಿ. ಬೀದಿ ನಾಯಿಗೆ ಕೊಡೋ ಗೌರವ ನಾನು ಪ್ರಶಾಂತ್‌ ಸಂಬರಗಿಗೆ ಕೊಡಲ್ಲ’ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್‌ ಸಂಬರಗಿ, ‘ಸಂಜನಾ ನನ್ನನ್ನು ಹಂದಿ, ನಾಯಿಗೆ ಹೋಲಿಸಿದ್ದಾರೆ. ಹೌದು, ನಾನು ವರಾಹ, ವಿಷ್ಣುವಿನ ಅವತಾರ’ ಎಂದು ತಿರುಗೇಟು ನೀಡಿದ್ದಾರೆ.

ಪ್ರಶಾಂತ್‌ ಸಂಬರಗಿ ವಿರುದ್ಧ ಕಿಡಿ ಕಾರಿರುವ ಸಂಜನಾ, ‘ಈ ಪ್ರಶಾಂತ್‌ ಸಂಬರಗಿ ಯಾರು? ಆತನನ್ನು ಚಲನಚಿತ್ರ ವಾಣಿಜ್ಯ ಮಂಡಳಿಯೇ ಉಗಿದು ದೂರ ಇಟ್ಟಿದೆ. ನಾನು ವಾಣಿಜ್ಯ ಮಂಡಳಿಗಿಂತ ದೊಡ್ಡವಳು ಅಲ್ಲ. ಆತ ನನ್ನ ಹೆಸರು ತೆಗೆದುಕೊಳ್ಳೋ ಯೋಗ್ಯತೆ ಇಲ್ಲ. ‘ಗಂಡ ಹೆಂಡತಿ’ ಚಿತ್ರದ ನಟಿ ಅಂತಿದ್ದಾರೆ. ಬೀದಿ ನಾಯಿಗೆ ನಾನು ಗೌರವ ಕೊಡ್ತೀನಿ, ಆದರೆ ಈ ಮನುಷ್ಯನಿಗೆ ಕೊಡಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಪ್ರಶಾಂತ್‌ ಸಂಬರಗಿ, ‘ಸಂಜನಾ ಗಲ್ರಾನಿ ಏನು ಎಂದು ಎಲ್ಲರಿಗೂ ಗೊತ್ತಿದೆ’ ಎಂದಿದ್ದಾರೆ.