ಬೆಂಗಳೂರು(ಸೆ.14): ಚಿತ್ರರಂಗದಲ್ಲಿನ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ಮಣಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಕೊನೆಗೂ ಸಿಸಿಬಿಯ ತನಿಖಾಧಿಕಾರಿಗಳಿಗೆ ಮಣಿದಿದ್ದು, ಖನ್ನಾನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಮಡಿವಾಳ ಸಾಂತ್ವನ ಕೇಂದ್ರದಲ್ಲಿ ಇಬ್ಬರೂ ಆರೋಪಿಗಳನ್ನು ಇನ್ಸ್‌ಪೆಕ್ಟರ್‌ ಶ್ರೀಧರ್‌ ಪೂಜಾರ್‌ ಮತ್ತು ಮೊಹಮ್ಮದ್‌ ಸಿರಾಜ್‌ ನೇತೃತ್ವದ ತಂಡ ಭಾನುವಾರ ಇಡೀ ದಿನ ವಿಚಾರಣೆಗೊಳಪಡಿಸಿತು. ಈ ವೇಳೆ ಪೇಜ್‌ ತ್ರಿ ಪಾರ್ಟಿಗಳ ಆಯೋಜಕ ಕಿಂಗ್‌ಪಿನ್‌ ದೆಹಲಿ ಮೂಲದ ವೀರೇನ್‌ ಖನ್ನಾ ಹಾಗೂ ರವಿಶಂಕರ್‌ ಆಪ್ತತೆಯ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಮೊದಲು ಎಂದಿನಂತೆ ತಮಗೂ ವೀರೇನ್‌ ಖನ್ನಾ ಹಾಗೂ ರವಿಶಂಕರ್‌ ಡ್ರಗ್ಸ್‌ ಪಾರ್ಟಿಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಟಿಯರು ವರ್ತಿಸಿದ್ದಾರೆ. ಆದರೆ ಪಾರ್ಟಿಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸಾಕ್ಷ್ಯವನ್ನು ಸಿಸಿಬಿ ಪೊಲೀಸರು ನಟಿಯರ ಮುಂದೆ ಇಟ್ಟಾಗ ತಬ್ಬಿಬ್ಬಾಗಿದ್ದು, ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಾರ್ಟಿಯೊಂದರಲ್ಲಿ ವೀರೇನ್‌ ಖನ್ನಾನ ಪರಿಚಯವಾಗಿತ್ತು. ಈ ಮೂಲಕ ಆತ ಆಹ್ವಾನಿಸಿದ ಕೆಲ ಪಾರ್ಟಿಗಳಲ್ಲಿ ಪಾಲ್ಗೊಂಡಿರುವುದು ನಿಜ. ವಿರೇನ್‌ ಖನ್ನಾ, ವೈಭವ್‌ ಜೈನ್‌ ಸೇರಿದಂತೆ ಕೆಲವರು ಪೇಜ್‌-3 ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು. ಪಾರ್ಟಿಯನ್ನು ಕೇವಲ ಮದ್ಯ ಮತ್ತು ಕುಣಿತಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದರು. ಡ್ರಗ್ಸ್‌ಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಈ ಪಾರ್ಟಿಯಲ್ಲಿಯೇ ರವಿಶಂಕರ್‌ ಪರಿಚಯವಾದ ಬಗ್ಗೆ ರಾಗಿಣಿ ಒಪ್ಪಿಕೊಂಡಿದ್ದಾಳೆ. ಆದರೆ ಡ್ರಗ್ಸ್‌ ಸೇವನೆ ಬಗ್ಗೆ ಇಬ್ಬರೂ ನಟಿಯರು ಬಾಯ್ಬಿಡುತ್ತಿಲ್ಲ. ಮಾದಕ ವಸ್ತು ಸೇವನೆ ಬಗ್ಗೆ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ದೃಢಪಡಲಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಣಸವಾಡಿ ಠಾಣಾ ಪೊಲೀಸರಿಂದ ಎರಡು ವರ್ಷಗಳ ಹಿಂದೆ ಡ್ರಗ್‌ ಪೆಡ್ಲರ್‌ ಪ್ರತೀಕ್‌ ಶೆಟ್ಟಿಬಂಧನಕ್ಕೆ ಒಳಗಾಗಿದ್ದ. ಈ ವೇಳೆ ವೀರೇನ್‌ ಖನ್ನಾ ಹಾಗೂ ಸಂಜನಾ ಹೆಸರು ಹೊರಗೆ ಬಂದಿತ್ತು. ಆದರೆ ಯಾವುದೇ ಸಾಕ್ಷ್ಯ ಇಲ್ಲದ ಕಾರಣ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ರಾಗಿಣಿ ಆಪ್ತ ರವಿಶಂಕರ್‌ ಬಂಧನದಿಂದಾಗಿ ರಾಗಿಣಿ ಹಾಗೂ ವೀರೇನ್‌ ಖನ್ನಾನನ್ನು ಬಂಧಿಸಲು ಸಾಧ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇಂದು ರಾಗಿಣಿ, ಸಂಜನಾಗೆ ಜಾಮೀನು ಸಿಗುತ್ತಾ?

ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಆರೋಪಿಗಳ ಪೊಲೀಸ್‌ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಲಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿಸಿಬಿ ಪೊಲೀಸರು ಆರೋಪಿಗಳನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. ರಾಗಿಣಿ ಸೇರಿ ಕೆಲವರ ಪೊಲೀಸ್‌ ಕಸ್ಟಡಿಗೆ 14 ದಿನ ಮುಗಿದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ಜಾಮೀನು ಅರ್ಜಿಗಳು ಕೂಡ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.