ಡ್ರಗ್ಸ್ ಖರೀದಿಗೆ ಬಂದಿದ್ದ ವಿದೇಶಿಗನ ಅಪಹರಿಸಿ ಸುಲಿಗೆ; ತಮಿಳುನಾಡಿನ ಆರು ಮಂದಿ ಅರೆಸ್ಟ್
ಚೌಕಾಸಿ ಮಾಡದೆ ಕೇಳಿದಷ್ಟು ಹಣ ಕೊಟ್ಟು ಗಾಂಜಾ ಖರೀದಿಸುತ್ತಿದ್ದ ಆಸ್ಟ್ರೇಲಿಯಾ ಪ್ರಜೆಯನ್ನು ಅಪಹರಿಸಿ ₹1.38 ಲಕ್ಷ ಸುಲಿಗೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ.26): ಚೌಕಾಸಿ ಮಾಡದೆ ಕೇಳಿದಷ್ಟು ಹಣ ಕೊಟ್ಟು ಗಾಂಜಾ ಖರೀದಿಸುತ್ತಿದ್ದ ಆಸ್ಟ್ರೇಲಿಯಾ ಪ್ರಜೆಯನ್ನು ಅಪಹರಿಸಿ ₹1.38 ಲಕ್ಷ ಸುಲಿಗೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಸಮೀಪದ ಚನ್ನಕೇಶವ ನಗರ ನಿವಾಸಿ ಮೋನಿಷ್ ಅಲಿಯಾಸ್ ಮನು (24), ಹೊಂಗಸಂದ್ರ ನಿವಾಸಿ ಲೋಕೇಶ್ (22), ಬೊಮ್ಮನಹಳ್ಳಿ ನಿವಾಸಿ ಕಿಶೋರ ಶಿವ (19), ಎಂ.ಆದಿ ಅಲಿಯಾಸ್ ರೂತ್ (21), ಜಯನಗರ ನಿವಾಸಿ ದಿಲೀಪ್ ಕುಮಾರ್ (26) ಮತ್ತು ತಿಲಕನಗರ ನಿವಾಸಿ ಸತೀಶ್ ಅಲಿಯಾಸ್ ಚಂದ್ರು(25) ಬಂಧಿತರು. ಆರೋಪಿಗಳಿಂದ ₹24 ಸಾವಿರ ನಗದು, ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಡಿ ಕ್ಯಾಮೆರಾ ಹಾಕಿದ್ರೂ ಬಿಡದ ಭ್ರಷ್ಟಾಚಾರ; ಡ್ರಂಕ್ ಆ್ಯಂಡ್ ಡ್ರೈವ್ ಎಂದು ಮಹಿಳೆಗೆ ಬೆದರಿಸಿ 5 ಸಾವಿರ ಲಂಚ ಪಡೆದ ಪೇದೆ!
ಆರೋಪಿಗಳು ಫೆ.5ರಂದು ಆಸ್ಟ್ರೇಲಿಯಾ ಪ್ರಜೆ ಅಲೋಕ್ ರಾಣಾ ಎಂಬುವವರನ್ನು ಅಪಹರಿಸಿ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಸಹೋದರ ಅಮಿತ್ ರಾಣಾ ಫೆ.20ರಂದು ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿ ಠಾಣಾ ಇನ್‌ಸ್ಪೆಕ್ಟರ್ ಎಂ.ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಸ್ನೇಹಿತರಾಗಿರುವ ತಮಿಳುನಾಡು ಮೂಲದ ಆರೋಪಿಗಳು ಮೂರ್ನಾಲ್ಕು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಆರೋಪಿಗಳ ಪೈಕಿ ಮೋನಿಷ್ ಕಾಲ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಿಡುವಿನ ಸಮಯದಲ್ಲಿ ಟ್ಯಾಟೂ ಹಾಕುವ ವೃತ್ತಿ ಮಾಡುತ್ತಿದ್ದ. ಸುಲಭವಾಗಿ ಹಣ ಗಳಿಸುವ ಆಸೆಗೆ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ.
ಚೌಕಾಸಿ ಮಾಡದೆ ಗಾಂಜಾ ಖರೀದಿ:
ಅಲೋಕ್ ರಾಣಾ ಆಸ್ಟ್ರೇಲಿಯಾದಲ್ಲಿ ಎಂಜಿನಿಯರ್ ಆಗಿದ್ದು, ಅಲ್ಲಿನ ಪೌರತ್ವ ಪಡೆದುಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ನಗರದ ಜೆ.ಪಿ.ನಗರದಲ್ಲಿ ವಾಸಿಸುವ ಸಹೋದರ ಉದ್ಯಮಿ ಅಮಿತ್ ರಾಣಾ ಮನೆಗೆ ಬಂದಿದ್ದರು. ಗಾಂಜಾ ಸೇವಿಸುವ ಚಟ ಇದ್ದಿದ್ದರಿಂದ ಸ್ಥಳೀಯರ ಮೂಲಕ ಪೆಡ್ಲರ್ ಮೋನಿಷ್ ಪರಿಚಯ ಮಾಡಿಕೊಂಡು ಆತ ಕೇಳಿದಷ್ಟು ಹಣ ನೀಡಿ ಹಲವು ಬಾರಿ ಗಾಂಜಾ ಖರೀದಿಸಿದ್ದರು.
ಗಾಂಜಾ ಖರೀದಿಸುವಾಗ ಚೌಕಾಸಿ ಮಾಡದ ಅಲೋಕ್ ರಾಣಾ ಬಳಿ ಹೆಚ್ಚಿನ ಹಣ ಇರಬಹುದು ಎಂದು ಭಾವಿಸಿ, ಆತನನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಆರೋಪಿಗಳು ಯೋಜನೆ ರೂಪಿಸಿದ್ದರು.
ಖರೀದಿಗೆ ಬಂದಾಗ ಅಪಹರಣ:
ಅಲೋಕ್ ರಾಣಾ ಫೆ.5ರಂದು ಮೋನಿಷ್‌ಗೆ ಕರೆ ಮಾಡಿ ಗಾಂಜಾ ಕೇಳಿದಾಗ ಆರೋಪಿಯು ಬೊಮ್ಮನಹಳ್ಳಿಯ ಲಾರ್ವೆನ್ಸ್ ಪಬ್ಲಿಕ್ ಶಾಲೆ ಹಿಂಭಾಗಕ್ಕೆ ಬರುವಂತೆ ಸೂಚಿಸಿದ್ದಾರೆ. ಅದರಂತೆ ಅಲೋಕ್ ರಾಣಾ ತನ್ನ ಕಾರಿನಲ್ಲಿ ಆ ಸ್ಥಳಕ್ಕೆ ಬಂದಿದ್ದಾರೆ. ಆಗ ಅವರದೇ ಕಾರಿನಲ್ಲಿ ಅಲೋಕ್ ರಾಣಾನನ್ನು ಅಪಹರಿಸಿ, ಆರೋಪಿ ಕಿಶೋರ ಶಿವನ ಬಾಡಿಗೆ ಮನೆಗೆ ಕರೆದೊಯ್ದು ಕೂಡಿಹಾಕಿ ಹಣ ಕೊಡುವಂತೆ ಹಲ್ಲೆ ಮಾಡಿದ್ದಾರೆ.
ನಂತರ ಅಲೋಕ್ ರಾಣಾ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮುಖಾಂತರ ಅರವಿಂದ ಎಂಬಾತನ ಖಾತೆಗೆ ₹78 ಸಾವಿರ ಮತ್ತು ಆದಿ ಖಾತೆಗೆ ₹20 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮತ್ತಷ್ಟು ಹಣ ನೀಡುವಂತೆ ಅಲೋಕ್ ರಾಣಾ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಅಲೋಕ್, ತನ್ನ ಸಹೋದರ ಅಮಿತ್ ರಾಣಾಗೆ ಕರೆ ಮಾಡಿ ಆನ್‌ಲೈನ್‌ನಲ್ಲಿ ₹40 ಸಾವಿರ ಹಾಕಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳು ಆ ₹40 ಸಾವಿರ ಹಣವನ್ನೂ ವರ್ಗಾಯಿಸಿಕೊಂಡಿದ್ದಾರೆ.
ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯ ಕೈ ಕಾಲು ಕತ್ತರಿಸಿ ಹತ್ಯೆ! ಇಬ್ಬರು ಪೊಲೀಸರ ವಶಕ್ಕೆ
ಕಾರಿನ ಜಿಪಿಎಸ್ ಆಧರಿಸಿ ಸ್ಥಳಕ್ಕೆ ಬಂದ ಸಹೋದರ:
ಇಷ್ಟಾದ ಮೇಲು ಸಹೋದರ ಅಮಿತ್ ರಾಣಾಗೆ ಕರೆ ಮಾಡಿಸಿ ಹಣ ಕೇಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಅಮಿತ್ ರಾಣಾ, ಅಲೋಕ್ ರಾಣಾನ ಕಾರಿನ ಜಿಪಿಎಸ್ ಆಧರಿಸಿ ಹುಡುಕಿಕೊಂಡು ಸ್ಥಳಕ್ಕೆ ಬಂದಾಗ, ಆರೋಪಿಗಳು ಅಲೋಕ್ ರಾಣಾನನ್ನು ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಲ್ಲಿ ಮೊಬೈಲ್ ಬಿಟ್ಟಿದ್ದ ಆರೋಪಿ!
ಅಲೋಕ್ ರಾಣಾನ ಅಪಹರಣದ ವೇಳೆ ಆರೋಪಿ ಮೋನಿಷ್ ತನ್ನ ಮೊಬೈಲ್‌ನನ್ನು ಕಾರಿನಲ್ಲಿ ಬಿಟ್ಟು ಹೋಗಿದ್ದ. ಈ ಮೊಬೈಲ್ ಫೋನ್ ವಶಕ್ಕೆ ಪಡೆದು ನೆಟ್ ವರ್ಕ್ ಆಧರಿಸಿ ಮೊದಲಿಗೆ ಮೋನಿಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.