ಡ್ರಗ್ಸ್‌: ಬಾಲಿವುಡ್‌ ನಟಿ ರಿಯಾಗೆ ಬಂಧನ ಭೀತಿ|  ನಟಿಯ ಸಹೋದರ ಶೋವಿಕ್‌, ಮ್ಯಾನೇಜರ್‌ ಸೆರೆ| ರಿಯಾಗಾಗಿ ಡ್ರಗ್ಸ್‌ ಖರೀದಿಸಿದ್ದಾಗಿ ಹೇಳಿದ ಶೋವಿಕ್‌

ಮುಂಬೈ(ಸೆ.05): ಮಾದಕ ದ್ರವ್ಯ ಬಳಕೆ ಆರೋಪದ ಮೇಲೆ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಬಂಧನವಾದ ಬೆನ್ನಲ್ಲೇ, ಇದೀಗ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಪ್ರೇಯಸಿ ರಿಯಾ ಚಕ್ರವರ್ತಿಗೂ ಬಂಧನದ ಭೀತಿ ಎದುರಾಗಿದೆ.

ಬಾಲಿವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿರುವ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಸಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್‌ ಚಕ್ರವರ್ತಿಯನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಶುಕ್ರವಾರ ಬಂಧಿಸಿದೆ. ಸಾವಿನ ಪ್ರಕರಣದ ಜೊತೆ ಥಳುಕು ಹಾಕಿಕೊಂಡಿರುವ ಡ್ರಗ್ಸ್‌ ಜಾಲಕ್ಕೆ ಸಂಬಂಧಿಸಿದಂತೆ ಬಂಧಿತ ಡ್ರಗ್‌ ಡೀಲರ್‌ ಅಬ್ದೆಲ್‌ ಬಸಿತ್‌ ಪರಿಹಾರ್‌ನಿಂದ ಮಾದಕ ದ್ರವ್ಯಗಳನ್ನು ಖರೀದಿಸಿದ್ದಾಗಿ ಶೋವಿಕ್‌ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ.

ಅಲ್ಲದೇ ತಾನು ಸಹೋದರಿ ರಿಯಾ ಚಕ್ರವರ್ತಿಗಾಗಿ ಡ್ರಗ್ಸ್‌ ಖರೀದಿಸಿದ್ದ ಸಂಗತಿಯನ್ನೂ ಶೋವಿಕ್‌ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧ ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ವಶಕ್ಕೆ ಪಡೆದು ಇಲ್ಲವೇ ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಈ ಮುನ್ನ ರಿಯಾ ತಾನು ಜೀವನದಲ್ಲಿ ಒಮ್ಮೆಯೂ ಡ್ರಗ್ಸ್‌ ಸೇವಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಸುಶಾಂತ್‌ ಸಿಂಗ್‌ಗಾಗಿ ಸಹೋದರ ಮೂಲಕ ರಿಯಾ ಡ್ರಗ್ಸ್‌ ಅನ್ನು ತರಿಸಿಕೊಂಡಿದ್ದರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಮಧ್ಯೆ ಸುಶಾಂತ್‌ ಮ್ಯಾನೇಜರ್‌ ಸ್ಯಾಮುಯೆಲ್‌ ಮಿರಾಂಡಾನನ್ನು ಕೂಡ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಳ್ಳಂಬೆಳಿಗ್ಗೆ ದಾಳಿ:

ಡ್ರಗ್ಸ್‌ ಡೀಲರ್‌ ಅಬ್ದೆಲ್‌ ಬಸಿತ್‌ ನೀಡಿದ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳ ತಂಡ ಶುಕ್ರವಾರ ಮುಂಜಾನೆ ರಿಯಾ ಸಹೋದರ ಶೋವಿಕ್‌ ಚಕ್ರವರ್ತಿ ಹಾಗೂ ಸುಶಾಂತ್‌ ಮ್ಯಾನೇಜರ್‌ ಸಾಮುವೇಲ್‌ ಮಿರಾಂಡಾ ಮನೆ ಮೇಲೆ ದಾಳಿ ನಡೆಸಿತ್ತು. ಇಬ್ಬರ ಮನೆಯನ್ನೂ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ಎನ್‌ಸಿಬಿ ವಶಪಡಿಸಿಕೊಂಡಿದೆ. ಪ್ರಕರಣ ಸಂಬಂಧ ಇಬ್ಬರನ್ನೂ ಎನ್‌ಸಿಬಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.