Asianet Suvarna News Asianet Suvarna News

ರಾಗಿಣಿ ಸೇರಿ ಮೂರು ಮಂದಿ ಸಿಕ್ಕಿಬಿದ್ದಿದ್ದು ಹೇಗೆ? ಡ್ರಗ್ಸ್‌ ಮಾಫಿಯಾ ಬಹಿರಂಗವಾಗಿದ್ದು ಹೀಗೆ!

ಮೂರು ಮಂದಿ ಸಿಕ್ಕಿಬಿದ್ದಿದ್ದು ಹೇಗೆ?| ಡ್ರಗ್ಸ್‌ ಮಾಫಿಯಾ ಬಹಿರಂಗಗೊಂಡಿದ್ದು ಹೇಗೆಂದು ವಿವರಿಸಿದ ಕಮಲ್‌ ಪಂತ್‌| ಹಳೇ ಕೇಸಿನ ತನಿಖೆ ವೇಳೆ ರವಿಶಂಕರ್‌ ಬಗ್ಗೆ ಸುಳಿವು| ರವಿಶಂಕರ್‌ ವಿಚಾರಣೆ ವೇಳೆ ರಾಗಿಣಿ ಪಾತ್ರ ಬೆಳಕಿಗೆ| ಡ್ರಗ್ಸ್‌ ಕೇಸು ಹೊರಬಂದಿದ್ದು ಹೇಗೆ ಎಂದು ವಿವರಿಸಿದ ಪಂತ್‌| ಈ ಜಾಲ ಬಹು ವಿಸ್ತಾರ ಹೊಂದಿದೆ| ಒತ್ತಡವಿಲ್ಲ, ಯಾರನ್ನೂ ಬಿಡುವುದಿಲ್ಲ: ಪೊಲೀಸ್‌ ಅಯುಕ್ತ

Drug Mafia Bengaluru Police Commissioner Kamal Pant Explains How Three People Arrested
Author
Bangalore, First Published Sep 5, 2020, 8:00 AM IST

ಬೆಂಗಳೂರು(ಸೆ.05): ಮಾದಕ ವಸ್ತು ಜಾಲದ ಪ್ರಕರಣದ ಸಿಸಿಬಿ ತನಿಖೆ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ. ಜಾಲ ಬಹು ವಿಸ್ತಾರವಾಗಿದ್ದು, ಈ ಜಾಲದಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನು ತನಿಖೆಗೊಳಪಡಿಸುತ್ತೇವೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಗುಡುಗಿದರು.

ನಗರದ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್‌ ಜಾಲದ ಸಮಗ್ರವಾಗಿ ನಡೆಯಲಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಪ್ರತಿಯೊಬ್ಬರ ತನಿಖೆಯೂ ಹಂತ ಹಂತ ಹಂತವಾಗ ನಡೆಯಲಿದೆ ಎಂದರು.

ಜಾಲ ಬಯಲಾಗಿದ್ದು ಹೇಗೆ?:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ, ರಾಹುಲ್‌ ಹಾಗೂ ಕಿಂಗ್‌ ಪಿನ್‌ ಎನ್ನಲಾದ ವಿರೇನ್‌ ಎಂಬಾತನನ್ನು ಬಂಧಿಸಲಾಗಿದೆ. ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಹಲವು ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಪ್ರಕರಣವೊಂದರ ತನಿಖೆ ವೇಳೆ ಮಾದಕ ವಸ್ತು ಜಾಲದಲ್ಲಿ ಸಾರಿಗೆ ಇಲಾಖೆ ನೌಕರನೊಬ್ಬ ಸಕ್ರಿಯವಾಗಿರುವ ಮಾಹಿತಿ ಸಿಕ್ಕಿತು. ಈ ಮಾಹಿತಿ ಕೆಲವರ ಚಲನವಲನಗಳ ಮೇಲೆ ನಿಗಾವಹಿಸಲಾಯಿತು. ಆಗ ಐಷಾರಾಮಿ ಪಾರ್ಟಿಗಳಲ್ಲಿ ಸಾರಿಗೆ ನೌಕರ ರವಿಶಂಕರ್‌ ಕಾಣಿಸಿಕೊಂಡಿರುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ರವಿಶಂಕರ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನ ಸಂಪರ್ಕದಲ್ಲಿದ್ದ ನಟಿ ರಾಗಿಣಿ ಸಂಗತಿ ಬೆಳಕಿಗೆ ಬಂತು ಎಂದು ಆಯುಕ್ತ ಕಮಲ್‌ ಪಂತ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಾರ್ಟಿಗಳಲ್ಲಿ ಡ್ರಗ್ಸ್‌ ಬಳಕೆಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಇನ್ನು ಆರೋಪಿಗಳಾದ ರವಿಶಂಕರ್‌ ಹಾಗೂ ರಾಹುಲ್‌ ಡ್ರಗ್ಸ್‌ ಖರೀದಿದಾರರು ಮಾತ್ರವಲ್ಲದೆ ವ್ಯಸನಿಗಳು ಕೂಡಾ ಆಗಿದ್ದಾರೆ. ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌, ಹೋಟೆಲ್‌ ಹಾಗೂ ಒಳಾಂಗಣದ ವಿನ್ಯಾಸ ಉದ್ಯಮವಿದೆ ಎಂದು ರಾಹುಲ್‌ ಹೇಳಿಕೊಂಡಿದ್ದು, ವಿದೇಶದಲ್ಲಿ ಸಹ ಆತ ಉದ್ದಿಮೆ ಹೊಂದಿರುವುದಾಗಿ ಹೇಳಿದ್ದಾನೆ. ವಿದೇಶಗಳಲ್ಲಿ ಕೂಡಾ ಆತ ಪಾರ್ಟಿಗಳನ್ನು ಆಯೋಜಿಸಿರುವ ಮಾಹಿತಿ ಇದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ವಿದೇಶದ ಪೆಡ್ಲರ್‌ನಿಂದ ಡ್ರಗ್ಸ್‌ ಖರೀದಿ?:

ರವಿಶಂಕರ್‌ನ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಹಲವು ಮಾಹಿತಿ ಸಿಕ್ಕಿವೆ. ಆಫ್ರಿಕಾ ಮೂಲದ ಪೆಡ್ಲರ್‌ಗಳಿಂದ ಆರೋಪಿಗಳು ಡ್ರಗ್ಸ್‌ ಖರೀದಿಸಿದ್ದಾರೆ. ಬಳಿಕ ಪಬ್‌, ಕ್ಲಬ್‌, ಹೋಟೆಲ್‌ ಹಾಗೂ ರೆಸಾರ್ಟ್‌ಗಳಲ್ಲಿ ತಾವು ಆಯೋಜಿಸಿದ್ದ ಪಾರ್ಟಿಗಳಿಗೆ ಡ್ರಗ್ಸ್‌ ಅನ್ನು ಅತಿಥಿಗಳಿಗೆ ಅವರು ನೀಡಿದ್ದಾರೆ. ತಾವು ಸಹ ಸೇವಿಸಿದ್ದಾರೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಪೇಜ್‌ ತ್ರಿ ಪಾರ್ಟಿ ಆಯೋಜನೆ ದಂಧೆಯಲ್ಲಿ ವಿರೇನ್‌ ಕಿಂಗ್‌ ಪಿನ್‌ ಆಗಿದ್ದ. ಈ ಪಾರ್ಟಿಗಳಿಗೆ ಯಥೇಚ್ಛವಾಗಿ ಮಾದಕ ವಸ್ತು ಪೂರೈಕೆಯಾಗಿರುವ ಮಾಹಿತಿ ತನಿಖೆಯಲ್ಲಿ ಸಿಕ್ಕಿತು. ಸಿಸಿಬಿ ತನಿಖೆ ಆರಂಭಿಸಿದ ಬಳಿಕ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ವಿರೇನ್‌ ಬಗ್ಗೆ ಮೇಲೆ ನಿಗಾವಹಿಸಿದ ಇನ್ಸ್‌ಪೆಕ್ಟರ್‌ಗಳಾದ ಶ್ರೀಧರ್‌ ಪೂಜಾರ್‌ ಹಾಗೂ ಲಕ್ಷ್ಮೇಕಾಂತಯ್ಯ ತಂಡವು, ಬೆಳಗ್ಗೆ ದೆಹಲಿಯಲ್ಲಿ ವಿರೇನ್‌ನನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.

ಮಾದಕ ವಸ್ತು ಜಾಲದ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಸಿಸಿಬಿ ಸ್ವಯಂ ಪ್ರೇರಿತ ಎಫ್‌ಐಆರ್‌ ದಾಖಲಿಸಿ ಸಿಸಿಬಿ ತನಿಖೆ ನಡೆಸುತ್ತಿದೆ. ಈ ಜಾಲವು ಬಹು ವಿಸ್ತಾರವಾಗಿದ್ದು, ದಂಧೆಯಲ್ಲಿ ಸಿಲುಕಿರುವ ಪ್ರತಿಯೊಬ್ಬರ ವಿರುದ್ಧ ಹಂತ ಹಂತವಾಗಿ ವಿಚಾರಣೆ ನಡೆಯಲಿದೆ. ಯಾರೊಬ್ಬರನ್ನು ಬಿಡುವುದಿಲ್ಲ. ಸಿಸಿಬಿ ತನಿಖೆಗೂ ಎನ್‌ಸಿಬಿ ತನಿಖೆಗೂ ಸಂಬಂಧವಿಲ್ಲ.

-ಕಮಲ್‌ ಪಂತ್‌, ಬೆಂಗಳೂರು ಪೊಲೀಸ್‌ ಆಯುಕ್ತ

Follow Us:
Download App:
  • android
  • ios