ಗುಟ್ಕಾ ಹಾಕಿಕೊಂಡು ಕಾರ್ ಓಡಿಸುವಾಗ ಮೈ ಎಲ್ಲ ಕಣ್ಣಾಗಿರ್ಲಿ. ಬಾಯಿ ತುಂಬಿದೆ ಅಂತ ಡೋರ್ ತೆಗೆದ್ರೆ ಜೀವ ಹೋಗ್ಬಹುದು. ಛತ್ತೀಸ್ಗಢದಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ

ಕಾರು (car) ಓಡಿಸೋವಾಗ ಸೀಟ್ ಬೆಲ್ಟ್ ಕಡ್ಡಾಯ, ಡ್ರೈವಿಂಗ್ ಲೈಸೆನ್ಸ್ (driving license) ಕಡ್ಡಾಯ ಎನ್ನುವಂತೆ ವಾಹನ ಓಡಿಸೋವಾಗ ಗುಟ್ಕಾ ಹಾಕ್ಬಾರದು ಎಂಬ ರೂಲ್ಸ್ ಬಂದ್ರೆ ಬೆಸ್ಟ್. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಕೂಡ ಇದೆ. ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಗುಟ್ಕಾ ಹಾಕಿಕೊಂಡು ವಾಹನ ಚಲಾಯಿಸೋರಿಗೆ ಎಚ್ಚರಿಕೆ ಗಂಟೆಯಾಗಿದೆ. ಗುಟ್ಕಾ ಬಾಯಿ ತುಂಬ್ಕೊಂಡು ವಾಹನ ಚಲಾಯಿಸುವ ಚಾಲಕರು, ವಾಹನದ ವೇಗ ಕಡಿಮೆ ಮಾಡದೆ ಗುಟ್ಕಾ ಉಗುಳ್ತಾರೆ. ಅತಿ ವೇಗದಲ್ಲಿರುವ ವಾಹನದ ಬಾಗಿಲು ತೆಗೆದಾಗ ವಾಹನ ನಿಯಂತ್ರಣ ತಪ್ಪೋದು ಸಹಜ. ಛತ್ತೀಸ್ಗಢದಲ್ಲೂ ಇದೇ ಆಗಿದೆ. ಕಾರು ಚಾಲಕ ಗುಟ್ಕಾ ಉಗುಳಲು ಕಾರ್ ಬಾಗಿಲು ತೆರೆದಿದ್ದಾನೆ. ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದವರೆಲ್ಲ ಚೆಲ್ಲಾಪಿಲ್ಲಿಯಾಗಿ ಹೊರಗೆ ಬಿದ್ದಿದ್ದಾರೆ. ನಿರ್ಲಕ್ಷ್ಯದಿಂದ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ರೆ ಮೂವರಿಗೆ ಗಂಭೀರ ಗಾಯಗಳಾಗಿವೆ.

ಘಟನೆ ನಡೆದಿದ್ದು ಬಿಲಾಸ್ಪುರದ ರಸ್ತೆಯಲ್ಲಿ. ಪಾರ್ಟಿ ಮುಗಿಸಿ ಬರ್ತಿದ್ದ ಮೂವರು ಸ್ನೇಹಿತರಲ್ಲಿ ಒಬ್ಬ ಬಲಿಯಾದ್ರೆ ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಮೃತನನ್ನು ಜವಳಿ ಉದ್ಯಮಿ ಜಾಕಿ ಎಂದು ಗುರುತಿಸಲಾಗಿದೆ. ಚಾಲಕ ಗುಟ್ಕಾ ಉಗುಳಲು ಕಾರಿನ ಬಾಗಿಲು ತೆರೆದಿದ್ದಾನೆ. ಇದರಿಂದಾಗಿ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಬಿಲಾಸ್ಪುರ-ರಾಯ್ಪುರ ರಸ್ತೆಯಲ್ಲಿರುವ ಗುರುನಾನಕ್ ಧಾಬಾ ಬಳಿ ತಡರಾತ್ರಿ 2 ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಚಕರ್ಭಟ ನಿವಾಸಿ ಪಂಕಜ್, ಜಾಕಿ ಮತ್ತು ಆಕಾಶ್ ಚಾಂದನಿ ಪಾರ್ಟಿಗಾಗಿ ಬಿಲಾಸ್ಪುರಕ್ಕೆ ಬಂದಿದ್ದರು. ತಡರಾತ್ರಿ ಪಾರ್ಟಿ ಮುಗಿಸಿ, ಮೂವರೂ ಇನ್ನೋವಾ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ದಾರಿಯಲ್ಲಿ, ಅವರ ಕಾರು ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಎಷ್ಟು ಪ್ರಬಲವಾಗಿತ್ತೆಂದರೆ ಇನ್ನೋವಾ ಸುಮಾರು 100 ರಿಂದ 200 ಅಡಿಗಳಷ್ಟು ದೂರ ಅನೇಕ ಬಾರಿ ಪಲ್ಟಿಯಾಗಿದೆ. ಕಾರಿನ ಎಲ್ಲ ಡೋರ್ ಓಪನ್ ಆಗಿದ್ದು, ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಬಿದ್ದಿದ್ದಾರೆ.

ಡಿವೈಡರ್ ಕಬ್ಬಿಣ ಮೇಲೆ ಜಾಕಿ ಬಿದ್ದಿದ್ದು ತಲೆ, ಎದೆ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರು ಓಡಿಸ್ತಿದ್ದ ಆಕಾಶ್ ಚಾಂದನಿ ಮತ್ತು ಹಿಂದೆ ಕುಳಿತಿದ್ದ ಪಂಕಜ್ ಛಾಬ್ರಾ ಕೂಡ ಗಂಭೀರ ಗಾಯಗೊಂಡಿದ್ದಾರೆ. ನಿಯಂತ್ರಣ ತಪ್ಪಿದ ಇನ್ನೋವಾ ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಛೋಟಾ ಹಾಥಿ ಎಂಬ ಲೋಡಿಂಗ್ ವಾಹನಕ್ಕೆ ಡಿಕ್ಕಿ ಹೊಡೆದು, ಹಲವಾರು ಬಾರಿ ಪಲ್ಟಿಯಾಗಿ, ಧಾಬಾದ ಹೊರಗೆ ನಿಲ್ಲಿಸಲಾಗಿದ್ದ ಹೊಸ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದಿದೆ. ಎರ್ಟಿಗಾ ಒಳಗೆ ಕುಳಿತಿದ್ದ ಚಾಲಕ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾನೆ. ಎರ್ಟಿಗಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಅಪಘಾತ ತುಂಬಾ ಭಯಾನಕವಾಗಿತ್ತು.

ಗುಟ್ಕಾದಿಂದ ಒಂದು ಜೀವ ಬಲಿಯಾದ್ರೆ ಇಬ್ಬರು ನರಳಾಡ್ತಿದ್ದಾರೆ. ಈ ಸುದ್ದಿ ವೈರಲ್ ಆಗ್ತಿದ್ದಂತೆ ಗುಟ್ಕಾ ಬ್ಯಾನ್ ಕೂಗು ಮತ್ತೆ ಕೇಳಿ ಬಂದಿದೆ. ಮುಂಬೈನಲ್ಲಿ ಇದು ಕಾಮನ್ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ. ಇದ್ರ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಬೇಕು ಅಂತ ಜನರು ಒತ್ತಾಯಿಸಿದ್ದಾರೆ. ಕ್ಯಾಬ್ ಡ್ರೈವರ್ ಗಳು ವಾಹನ ಚಲಿಸುತ್ತಿರುವಾಗ್ಲೇ ಗುಟ್ಕಾ ಉಗುಳ್ತಾರೆ. ಇದ್ರಿಂದ ವಾಹನ ಚಾಲಕರಿಗೆ, ವಾಹನದಲ್ಲಿರುವ ಪ್ರಯಾಣಿಕರಿಗೆ ಮಾತ್ರವಲ್ಲ, ಅಕ್ಕಪಕ್ಕದಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸುವವರಿಗೆ ಕೂಡ ಅಪಾಯ.