ಬೆಂಗಳೂರು(ಫೆ.11): ಇತ್ತೀಚೆಗೆ ರಾಜಾಜಿನಗರದ ನವರಂಗ್‌ ಸಮೀಪ ಸಮೀಪ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ತುಂಬಿಸಬೇಕಿದ್ದ 64 ಲಕ್ಷ ಹಣವನ್ನು ಕದ್ದು ತನ್ನ ಪ್ರಿಯತಮೆ ಜತೆ ಪರಾರಿಯಾಗಿದ್ದ ಖಾಸಗಿ ಏಜೆನ್ಸಿಯ ವಾಹನ ಚಾಲಕನನ್ನು ಭರ್ಜರಿ ಕಾರ್ಯಾಚರಣೆ ನಡೆಸಿ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿರುವ ಸೆಕ್ಯೂರ್‌ ಅಂಡ್‌ ವ್ಯಾಲ್ಯೂ ಏಜೆನ್ಸಿ ವಾಹನ ಚಾಲಕ ಯೋಗೇಶ್‌ ಸಿಕ್ಕಿಬಿದ್ದಿದ್ದು, ಫೆ.2ರಂದು ನವರಂಗ ಹತ್ತಿರದ ಆಕ್ಸಿಸ್‌ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಿಸಲು ಏಜೆನ್ಸಿ ಸಿಬ್ಬಂದಿ ಜತೆ ಆತ ಬಂದಿದ್ದಾಗ ಫೆ.2ರಂದು ಹಣ ಕದ್ದು ಪರಾರಿ ಆಗಿದ್ದ. ಕೃತ್ಯ ಎಸಗಿದ ಬಳಿಕ ಯೋಗೇಶ್‌, ತನ್ನ ಪ್ರಿಯತಮೆ ಜತೆ ನಗರ ತೊರೆದಿದ್ದ. ಮಂಡ್ಯ, ಹಾಸನ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಆರೋಪಿ ಪತ್ತೆಗೆ ಇನ್ಸ್‌ಪೆಕ್ಟರ್‌ ಸಂಜೀವೇಗೌಡ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಲತಾ ನೇತೃತ್ವ ತಂಡವು ತೀವ್ರ ಶೋಧ ನಡೆಸಿತ್ತು. ಕೊನೆಗೆ ಹೊರ ಜಿಲ್ಲೆಯಲ್ಲಿ ಆರೋಪಿಯನ್ನು ತನಿಖಾ ತಂಡವು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ಕದ್ದು ಪ್ರಿಯತಮೆಯೊಂದಿಗೆ ಚಾಲಕ ಪರಾರಿ..!

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಯಲಚೇನಹಳ್ಳಿ ಗ್ರಾಮದ ಯೋಗೇಶ್‌, ತನ್ನ ಪತ್ನಿ ಮತ್ತು ಮಕ್ಕಳ ಜತೆ ದೊಡ್ಡಬಿದರಕಲ್ಲಿನಲ್ಲಿ ನೆಲೆಸಿದ್ದ. ನಾಲ್ಕು ವರ್ಷಗಳಿಂದ ಸೆಕ್ಯೂರ್‌ ಅಂಡ್‌ ವ್ಯಾಲ್ಯೂ ಏಜೆನ್ಸಿಯಲ್ಲಿ ಆತ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಹಣದಾಸೆಗೆ ಬಿದ್ದು ಎಟಿಎಂ ಹಣವನ್ನು ಆತ ಕಳವು ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳ್ಳತನ ಕೃತ್ಯ ಎಸಗಿದ ಬಳಿಕ ಆತ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಆಶ್ರಯಕ್ಕಾಗಿ ಸ್ನೇಹಿತರನ್ನು ಆತ ಸಂಪರ್ಕಿಸಿದ್ದಾಗ ಸುಳಿವು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.