ಹಳೆ ಮನೆಯ ಕಟ್ಟಿಗೆಯ ಚಿತೆ ಮಾಡಿ ಸುಸೈಡ್‌ಗೆ ಶರಣಾದ ಹಿರಿಯ ಜೀವ
* ಸರ್ಕಾರದ ಅರ್ಥವಿಲ್ಲದ ನಿಯಮಕ್ಕೆ ಹಿರಿಯ ಜೀವ ಬಲಿ
* ಜಲಾಶಕ್ಕೆಂದು ಮನೆ ಜಾಗ ಬಿಟ್ಟುಕೊಟ್ಟಿದ್ದ ರೈತ
* ಈಗ ಮನೆ ಕೊಡಲ್ಲ ಎಂದ ಸರ್ಕಾರ
* ನೊಂದ ರೈತರಿಂದ ಕಠಿಣ ನಿರ್ಧಾರ
ತೆಲಂಗಾಣ(ಜೂ. 18) ಇದೊಂದು ದಾರುಣ ಕತೆ. ಸರ್ಕಾರ ಈ ರೈತನ ಮನೆಯನ್ನು ನೆಲಸಮ ಮಾಡಿತ್ತು. ತನ್ನ ಮನೆಯ ಮರದ ತುಂಡುಗಳನ್ನೇ ಚಿತೆ ಮಾಡಿಕೊಂಡು ರೈತ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 70 ವರ್ಷದ ರೈತನೊಬ್ಬ ಜೀವಂತ ದಹನವಾಗಿದ್ದಾರೆ. ಮೇಡಕ್ ಜಿಲ್ಲೆಯ ವೇಮುಲಾಘಾಟ್ ಗ್ರಾಮದಿಂದ ಕರುಣಾಜನಕ ಪ್ರಕರಣ ವರದಿಯಾಗಿದೆ.
ಮಲ್ಲಣ್ಣ ಸಾಗರ್ ಜಲಾಶಯ ನಿರ್ಮಾಣಕ್ಕಾಗಿ ಮನೆ ಕಳೆದುಕೊಂಡವರಿಗೆ ತೆಲಂಗಾಣ ಸರ್ಕಾರ ಪುನರ್ವಸತಿ ಕಾಲೋನಿ ನಿರ್ಮಾಣ ಮಾಡುತ್ತಿದೆ.. ಈ ಕಾಲೋನಿಯಲ್ಲಿ 2 ಬಿಹೆಚ್ ಕೆ ಮನೆ ನೀಡಲು ನಿರಾಕರಿಸಿದ ನಂತರ ರೈತ ಮಲ್ಲಯ್ಯ ಇಂಥ ನಿರ್ಧಾರ ಕೈಗೊಂಡಿದ್ದಾರೆ. ರೈತ ಸುಸೈಡ್ ಮಾಡಿಕೊಂಡ ನಂತರ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಮಲ್ಲಣ್ಣ ಸಾಗರ್ ಯೋಜನೆಗಾಗಿ ಮನೆ ಕಳೆದುಕೊಂಡವರಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಪ್ರತಿ ಕುಟುಂಬಕ್ಕೆ 5.4 ಲಕ್ಷ ಪರಿಹಾರ ಮತ್ತು 250 ಚದರ ಗಜ ಫ್ಲಾಟ್ ಅಥವಾ ಪುನರ್ವಸತಿ ಕಾಲೋನಿಯಲ್ಲಿ 2 ಬಿಎಚ್ ಕೆ ಮನೆಯೊಂದಿಗೆ 7.5 ಲಕ್ಷ ಹಣವನ್ನು ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿತ್ತು. ಮನೆ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟ ರೈತ ಮಲ್ಲಯ್ಯ ಎರಡನೇ 2019ರಲ್ಲಿ 2 ಬಿಎಚ್ ಕೆ ಮನೆಯೊಂದಿಗೆ 7.5 ಲಕ್ಷ ಹಣ ಆಯ್ಕೆ ಮಾಡಿಕೊಂಡಿದ್ದರು.
ಮಲ್ಲಯ್ಯ ಜೀವನದಲ್ಲಿ ಅನೇಕ ಸಮಸ್ಯೆ ಎದುರಿಸುತ್ತಿದ್ದರು. 9 ತಿಂಗಳ ಹಿಂದಷ್ಟೇ ಕ್ಯಾನ್ಸರ್ ನಿಂದಾಗಿ ಪತ್ನಿಯನ್ನು ಕಳೆದುಕೊಂಡಿದ್ದರು. ಪತ್ನಿ ಕಳೆದುಕೊಂಡ ವಿಚಾರ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು, ಮನೆಯಲ್ಲಿ ಒಬ್ಬರೇ ಇರುವುದಾದರೆ ಮನೆಯನ್ನು ಕೊಡುವುದಿಲ್ಲ ಎಂದು ಮಲ್ಲಯ್ಯ ಅವರಿಗೆ ಹೇಳಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಮಲ್ಲಯ್ಯ ಇಂಥ ನಿರ್ಧಾರ ಮಾಡಿದ್ದಾರೆ.
ನೆಲಸಮಗೊಳಿಸಲಾದ ಮನೆಯಿಂದ ಕಟ್ಟಿಗೆಗಳನ್ನು ಸಂಗ್ರಹಿಸಿದ್ದಾನೆ. ಇದನ್ನು ನೋಡಿದ ಕೆಲವರು ಮಾರಾಟಕ್ಕೆ ಸಂಗ್ರಹಿಸುತ್ತಿಬಹುದು ಎಂದುಕೊಂಡಿದ್ದಾರೆ. ಈ ಕಟ್ಟಿಗೆಯೇ ಮಲ್ಲಯ್ಯನಿಗೆ ಚಿತೆಯಾಗಿದ್ದು ಹಿರಿಯ ಜೀವವೊಂದು ಸರ್ಕಾರದ ಕಠಿಣ ನಿಯಮಕ್ಕೆ ಬಲಿಯಾಗಿದೆ.