ಬೆಂಗಳೂರು: IISC ಕ್ಯಾಂಪಸ್‌ನಲ್ಲಿ ಇಬ್ಬರು ಪಿಎಚ್‌ಡಿ ಸಂಶೋಧಕರ ಸಾವು
ಪ್ರತ್ಯೇಕ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು| ಬೆಂಗ್ಳೂರಿನ ಮಲ್ಲೇಶ್ವರ ಸಮೀಪದ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಘಟನೆ| ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಬೆಂಗಳೂರು(ಮಾ.04): ಮಲ್ಲೇಶ್ವರ ಸಮೀಪದ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ(ಐಐಎಸ್‌ಸಿ) ಪ್ರತ್ಯೇಕ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಸಂಸ್ಥೆಯ ನ್ಯಾನೋ ಸೈನ್ಸ್ ವಿಭಾಗದ ಬಿಹಾರ ಮೂಲದ ಪಿಎಚ್‌ಡಿ ವಿದ್ಯಾರ್ಥಿ ರಣಧೀರ್ ಕುಮಾರ್ (36) ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡರೆ, ಉತ್ತರ ಪ್ರದೇಶ ಮೂಲದ ಎಂ.ಟೆಕ್ ವಿದ್ಯಾರ್ಥಿ ರಾಹುಲ್ ಪ್ರತಾಪ್ ಸಿಂಗ್(30) ಫುಟ್ಬಾಲ್ ಆಡುವಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಎರಡು ದಿನಗಳ ಹಿಂದೆಯೇ ಹಾಸ್ಟೆಲ್ ಕೊಠಡಿಯಲ್ಲಿ ರಣಧೀರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಗೆಳೆಯ ಕಾಣದೆ ಹೋದಾಗ ಆತಂಕಗೊಂಡ ಮೃತನ ಸ್ನೇಹಿತ ತುಶಿನ್ ಚಕ್ರವರ್ತಿ, ರಣಧೀರ್ ಕೊಠಡಿಗೆ ಮಂಗಳವಾರ ಸಂಜೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತನ ಕೊಠಡಿಯಲ್ಲಿ ಯಾವುದೇ ಮರಣ ಪತ್ರ ಪತ್ತೆಯಾಗಿಲ್ಲ. ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದ ರಣಧೀರ್, ಆ ನೋವಿನಲ್ಲೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು; ಎಣ್ಣೆ ಕೊಡಿಸದ ಸ್ನೇಹಿತನ ಹತ್ಯೆ ಮಾಡಿದ ಕುಡುಕರು
ಫುಟ್ಬಾಲ್ ಆಡುವಾಗ ಹೃದಯಾಘಾತ
ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ತನ್ನ ಗೆಳೆಯರ ಜತೆ ಫುಟ್ಬಾಲ್ ಆಡುತ್ತಿದ್ದ ಪ್ರತಾಪ್‌ಸಿಂಗ್ ದಿಢೀರ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನ ಸ್ನೇಹಿತರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪ್ರತಾಪ್‌ನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಹೃದಯಾಘಾತಕ್ಕೊಳಗಾಗಿ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.