ಸಲುಗೆ ಚಾಟ್ ಮಾಡಿ ರೇಣುಕಾಸ್ವಾಮಿಗೆ ಪವಿತ್ರಾಗೌಡ ಗಾಳ: ಏನಿದು ರೋಚಕ ಕತೆ...
ಅಶ್ಲೀಲ ಸಂದೇಶ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಇನ್‌ಸ್ಟಾಗ್ರಾಂನಲ್ಲಿ ‘ಸಲುಗೆಯ’ ಚಾಟಿಂಗ್ ಮೂಲಕ ತನ್ನ ಗಾಳಕ್ಕೆ ಸೆಳೆದ ಪವಿತ್ರಾಗೌಡ, ಆತನಿಂದಲೇ ಸ್ವವಿವರ ಸಂಗ್ರಹಿಸಿ ದರ್ಶನ್‌ಗೆ ತಿಳಿಸಿದ್ದಳು.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಜೂ.19): ತನ್ನ ಹೆಸರು, ವಿಳಾಸ, ಕೆಲಸ ಮಾಡುವ ಜಾಗ, ಮೊಬೈಲ್ ಸಂಖ್ಯೆ ಹೀಗೆ ಪೋಟೋ ಸಹಿತ ರೇಣುಕಾಸ್ವಾಮಿ ತನ್ನ ವೈಯಕ್ತಿಕ ವಿವರ ಕಳುಹಿಸುವ ಮೂಲಕ ನಟ ದರ್ಶನ್ ಗ್ಯಾಂಗ್ ಬಲೆಗೆ ತಾನಾಗಿಯೇ ಬಿದ್ದು ಪ್ರಾಣಕ್ಕೆ ಎರವು ಮಾಡಿಕೊಂಡ ಕುತೂಹಲಕಾರಿ ವಿಷಯ ಬಯಲಾಗಿದೆ. ಅಶ್ಲೀಲ ಸಂದೇಶ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಇನ್‌ಸ್ಟಾಗ್ರಾಂನಲ್ಲಿ ‘ಸಲುಗೆಯ’ ಚಾಟಿಂಗ್ ಮೂಲಕ ತನ್ನ ಗಾಳಕ್ಕೆ ಸೆಳೆದ ಪವಿತ್ರಾಗೌಡ, ಆತನಿಂದಲೇ ಸ್ವವಿವರ ಸಂಗ್ರಹಿಸಿ ದರ್ಶನ್‌ಗೆ ತಿಳಿಸಿದ್ದಳು.
ಈ ವಿವರವನ್ನು ದರ್ಶನ್, ಚಿತ್ರದುರ್ಗ ಜಿಲ್ಲೆಯ ತಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಕಳುಹಿಸಿ ರೇಣುಕಾಸ್ವಾಮಿಯನ್ನು ಕೂಡಲೇ ಬೆಂಗಳೂರಿಗೆ ಕರೆತರುವಂತೆ ಹುಕುಂ ನೀಡಿದ್ದರು. ಅಂತೆಯೇ ರೇಣುಕಾಸ್ವಾಮಿಯನ್ನು ಜೂ.8ರಂದು ಚಿತ್ರದುರ್ಗದಲ್ಲಿ ಅಪಹರಿಸಿ ಕರೆತಂದು ದರ್ಶನ್‌ಗೆ ರಾಘವೇಂದ್ರ ತಂಡ ಒಪ್ಪಿಸಿತ್ತು ಎಂದು ‘ಕನ್ನಡಪ್ರಭ’ಕ್ಕೆ ಉನ್ನತ ಮೂಲಗಳು ತಿಳಿಸಿವೆ.
ಡಿ'ಗ್ಯಾಂಗ್‌ನ ಒಬ್ಬೊಬ್ಬ ಆರೋಪಿಯದೂ ಒಂದೊಂದು ಅವತಾರ: ದರ್ಶನ್ ಜತೆ ಬಂಧಿತರ ವಿಸ್ತೃತ ಮಾಹಿತಿ
ನಕಲಿ ಖಾತೆಗಳ ಶೂರ: ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಸ್ನೇಹದ ವಿಚಾರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಪವಿತ್ರಾ ಗೌಡ ಮಧ್ಯೆ ಪೋಸ್ಟ್ ವಾರ್ ನಡೆದಿತ್ತು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷೇಪಾರ್ಹ ಪದ ಬಳಸಿ ನಿಂದಿಸುವ ಮೂಲಕ ಪವಿತ್ರಾಗೌಡ ವಿರುದ್ಧ ಕೆಲ ದರ್ಶನ್ ಅಭಿಮಾನಿಗಳು ಮುಗಿಬಿದ್ದರು.
ಅದೇ ವೇಳೆ ಪವಿತ್ರಾಗೌಡ ಇನ್‌ಸ್ಟಾಗ್ರಾಂ ಖಾತೆಗೆ ರೇಣುಕಾಸ್ವಾಮಿ ಕೂಡ ‘ರೆಡ್ಡಿ’ ಹೆಸರಿನಲ್ಲಿ ನಿಂದಿಸಿ ಪೋಸ್ಟ್ ಹಾಕುತ್ತಿದ್ದ. ಇನ್ನೊಂದೆಡೆ ‘ಗೌತಮ್’ ಹೆಸರಿನ ಮತ್ತೊಂದು ಖಾತೆಯಲ್ಲಿ ಪವಿತ್ರಾಗೌಡಳಿಗೆ ಖಾಸಗಿಯಾಗಿ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶಗಳನ್ನು ನಿರಂತರವಾಗಿ ಕಳುಹಿಸಲಾರಂಭಿಸಿದ್ದ.
ತಾನು ಬ್ಯಾಚುಲರ್ ಎಂದಿದ್ದ ‘ಗೌತಮ್’: ಹೀಗೆ ಇನ್‌ಸ್ಟಾಗ್ರಾಂನಲ್ಲಿ ಕಾಡುತ್ತಿದ್ದ ರೇಣುಕಾಸ್ವಾಮಿ, ತಾನು ಕೊಲೆಯಾಗುವ ಐದಾರು ದಿನಗಳ ಹಿಂದೆ ಪವಿತ್ರಾಗೌಡಳಿಗೆ ತನ್ನ ಖಾಸಗಿ ಅಂಗದ ಭಾವಚಿತ್ರ ಕಳುಹಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ. ಈ ಅಶ್ಲೀಲ ಪೋಟೋಗೆ ಅಸಹ್ಯಗೊಂಡ ಆಕೆ, ತನ್ನ ಸಹಾಯಕ ಪವನ್‌ಗೆ ಗೌತಮ್ ಹೆಸರಿನ ವ್ಯಕ್ತಿ ಬಗ್ಗೆ ಹೇಳಿ ಕೋಪ ಕಾರಿದ್ದಳು. ತರುವಾಯ ದರ್ಶನ್ಗೆ ಮರ್ಮಾಂಗದ ಪೋಟೋ ಕಳುಹಿಸಿದ ವಿಷಯ ಗೊತ್ತಾಯಿತು. ಈ ಸಂಗತಿ ಗೊತ್ತಾಗಿ ಕೋಪಗೊಂಡ ದರ್ಶನ್, ಗೌತಮ್‌ನ ವಿವರ ಪಡೆಯಲು ಸೂಚಿಸಿದ್ದರು.
ಆಗ ಪವನ್ ಹಾಗೂ ಪವಿತ್ರಾಗೌಡ ಜಂಟಿಯಾಗಿ ರೇಣುಕಾಸ್ವಾಮಿಯನ್ನು ಟ್ರ್ಯಾಪ್ ಮಾಡಿದ್ದರು. ಅಂತೆಯೇ ಗೌತಮ್ ಹೆಸರಿನ ಅಪರಿಚಿತನ ಜತೆ ಸಲುಗೆ ವ್ಯಕ್ತಪಡಿಸುವ ಸಂದೇಶಗಳಿಂದ ಪವಿತ್ರಾ ಚಾಟಿಂಗ್ ಶುರು ಮಾಡಿದ್ದಳು. ಆದರೆ ತಾನು ಟ್ರ್ಯಾಪ್ ಆಗುವ ಪರಿವೆಯೇ ಇಲ್ಲದೆ ರೇಣುಕಾಸ್ವಾಮಿ, ತನ್ನ ಹೆಸರು ಗೌತಮ್, ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪೋಟೋ, ಮೊಬೈಲ್ ಸಂಖ್ಯೆ ಸಹಿತ ವೈಯಕ್ತಿಕ ವಿವರ ಹಂಚಿಕೊಂಡಿದ್ದ.
ಈ ಮಾಹಿತಿ ತಿಳಿದ ಕೂಡಲೇ ದರ್ಶನ್, ಆ ಜಿಲ್ಲೆಯ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಪೋಟೋ ಕಳುಹಿಸಿ ಹುಡುಕುವಂತೆ ಸೂಚಿಸಿದ್ದರು. ಕೊನೆಗೆ ಅಪೋಲೋ ಫಾರ್ಮಸಿಗೆ ತೆರಳಿ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿ ಗುರುತಿಸಿದ ರಾಘವೇಂದ್ರ, ಆತ ಗೌತಮ್ ಅಲ್ಲ ನಿಜವಾದ ಹೆಸರು ರೇಣುಕಾಸ್ವಾಮಿ ಎಂದು ದರ್ಶನ್ ರವರಿಗೆ ತಿಳಿಸಿದ್ದ. ಆಗ ಕೂಡಲೇ ಆತನನ್ನು ಬೆಂಗಳೂರಿಗೆ ಕರೆತರುವಂತೆ ದರ್ಶನ್ ಸೂಚಿಸಿದ್ದರು.
ದರ್ಶನ್ ಜತೆ ಸೆಲ್ಫಿ ಕ್ಲಿಕ್ಕಿಸಿ ಕಿಡ್ನಾಪ್ ಆರೋಪಿಗಳ ಸಂಭ್ರಮ: ರೇಣುಕಾಸ್ವಾಮಿ ಕರೆತಂದಿದ್ದೆ ಈ ಮೂವರು!
ಅಂತೆಯೇ ಜೂ.8 ರಂದು ಬೆಳಗ್ಗೆ 11 ಗಂಟೆಗೆ ರೇಣುಕಾಸ್ವಾಮಿ ಮೊಬೈಲ್‌ಗೆ ಕರೆ ಮಾಡಿದ ರಾಘವೇಂದ್ರ, ನಿನ್ನೊಂದಿಗೆ ಮಾತನಾಡಬೇಕಿದೆ ಎಂದು ಹೇಳಿ ಕರೆಸಿಕೊಂಡಿದ್ದ. ನಿನ್ನನ್ನು ದರ್ಶನ್ ಭೇಟಿಯಾಗಬೇಕಂತೆ. ಈಗಲೇ ಹೋಗಬೇಕು ಎಂದು ತಿಳಿಸಿ ಕಾರಿನಲ್ಲಿ ಬಲವಂತವಾಗಿ ಕರೆತಂದು ದರ್ಶನ್‌ಗೆ ರಾಘವೇಂದ್ರ ತಂಡ ಒಪ್ಪಿಸಿತ್ತು ಎಂದು ತಿಳಿದು ಬಂದಿದೆ.