ಕಾಲ್‌ಸೆಂಟರ್‌ ಹೆಸರಿನಲ್ಲಿ ಅಮೆರಿಕ ನಾಗರಿಕರನ್ನು ವಂಚಿಸುತ್ತಿದ್ದ ಸೈಬರ್‌ ವಂಚಕ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ. ಠಾಣೆಗೆ ಬಂದ ಅನಾಮಧೇಯ ಪತ್ರದ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಪೊಲೀಸರು, 33 ಹೊರ ರಾಜ್ಯದ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ (ನ.16): ಕಾಲ್‌ಸೆಂಟರ್‌ ಹೆಸರಿನಲ್ಲಿ ಅಮೆರಿಕ ನಾಗರಿಕರನ್ನು ವಂಚಿಸುತ್ತಿದ್ದ ಸೈಬರ್‌ ವಂಚಕ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ. ಠಾಣೆಗೆ ಬಂದ ಅನಾಮಧೇಯ ಪತ್ರದ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಪೊಲೀಸರು, 33 ಹೊರ ರಾಜ್ಯದ ಆರೋಪಿಗಳನ್ನು ಬಂಧಿಸಿದ್ದಾರೆ.

ಕಿಂಗ್‌ಪಿನ್‌ಗಳಾದ ಗುಜರಾತನ ಪ್ರಿತೇಶ್‌ ಪಟೇಲ್‌, ರಾಜು ಗುಪ್ತಾ, ದೆಹಲಿಯ ಅಶುತೋಷ್‌, ಮಹಾರಾಷ್ಟ್ರದ ಸುರೇಂದ್ರ ಸೇರಿ 33 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಬಂಧಿತರು ಅಸ್ಸಾಂ, ನ್ಯಾಗಾಲ್ಯಾಂಡ್, ರಾಜಾಸ್ಥಾನ, ಉತ್ತರಾಖಾಂಡ, ಮಹಾರಾಷ್ಟ್ರ ಮೂಲದವರಾಗಿದ್ದು, ವಿದ್ಯಾವಂತರಾಗಿದ್ದರು. ಇವರನ್ನು ಬಳಸಿಕೊಂಡು ಅಮೆರಿಕದ ವ್ಯಕ್ತಿಗಳಿಗೆ ಕರೆ ಮಾಡಿಸಿ, ಬಣ್ಣಬಣ್ಣದ ಮಾತನಾಡಿ ಅವರ ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ ಮಾಡಿಸಿ ಹಣ ದೋಚುತ್ತಿದ್ದರು.

ಕಾರ್ಯಾಚರಣೆ ಹೇಗೆ?

ಕುಮಾರ ಹೌಲ್‌ ಬಾಕ್ಸೈಟ್‌ ರಸ್ತೆಯಲ್ಲಿ ವ್ಯವಸ್ಥಿತವಾಗಿ ಕಾಲ್‌ ಸೆಂಟರನ್ನು ಅನಧಿಕೃತವಾಗಿ ತೆರೆಯಲಾಗಿತ್ತು. ಇಲ್ಲಿ 37 ಲ್ಯಾಪ್‌ಟಾಪ್‌, 37 ಮೊಬೈಲ್‌ಗಳನ್ನು ಬಳಸಿಕೊಂಡು ನೌಕರರು ಅಮೆರಿಕದ ಪ್ರಜೆಗಳಿಗೆ ಕರೆ ಮಾಡುತ್ತಿದ್ದರು. ಕರೆಗೂ ಮೊದಲು ಎಸ್‌ಎಂಎಸ್‌ ಕಳುಹಿಸಿ ನಿಮಗೆ ಗಿಫ್ಟ್‌ ಬಂದಿದೆ. ಇದನ್ನು ನೀವು ಬುಕ್‌ ಮಾಡಿಲ್ಲದಿದ್ದರೆ ಈ ಸಂಖ್ಯೆಗೆ ಕರೆ ಮಾಡಿ ಎಂದು ತಮ್ಮ ಮೊಬೈಲ್‌ ಸಂಖ್ಯೆಯನ್ನು ನೀಡುತ್ತಿದ್ದರು. ಹೀಗೆ ಅಮೆರಿಕದಿಂದ ಬರುತ್ತಿದ್ದ ಕರೆಗಳ ಮೂಲಕ ಅವರ ಮೊಬೈಲ್‌ಗಳನ್ನು ಹ್ಯಾಕ್ ಮಾಡುತ್ತಿದ್ದರು.

ಬಣ್ಣ ಬಣ್ಣದ ಮಾತುಗಳನ್ನು ಆಡಿ ಗಿಫ್ಟ್‌ ವೋಚರ್‌ ಕಳುಹಿಸುವುದು, ಹೂಡಿಕೆಯಲ್ಲಿ ಅಧಿಕ ಲಾಭದ ಆಸೆ ತೋರಿಸುವುದು, ಹೊಸ ಮೊಬೈಲ್‌ ಖರೀದಿ ಸೇರಿದಂತೆ ವಿವಿಧ ತಂತ್ರ, ಆಸೆ ತೋರಿಸುತ್ತಿದ್ದರು. ಬಳಿಕ ಅಮೆರಿಕನ್ನರ ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ಅವರ ಡಾಲರ್‌ಗಳನ್ನು ತಮ್ಮ ಅಕೌಂಟ್‌ಗೆ ವರ್ಗಾಯಿಸಿಕೊಂಡು ವಂಚಿಸುತ್ತಿದ್ದರು. ಇತ್ತೀಚೆಗೆ ಪೊಲೀಸ್‌ ಠಾಣೆಗೆ ವಂಚನೆ ನಡೆಸುತ್ತಿರುವ ಬಗ್ಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಅದರ ಜಾಡು ಹಿಡಿದು ಅನಧಿಕೃತ ಕಾಲ್ ಸೆಂಟರ್‌ ಮೇಲೆ ಪೊಲೀಸರು ದಾಳಿ ನಡೆಸಿದರು.