ಬೆಂಗಳೂರು(ಸೆ.26): ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿರುವ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯವು ಸೆ.28ರಂದು (ಸೋಮವಾರ) ತೀರ್ಪು ಪ್ರಕಟಿಸಲಿದೆ.

ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರಾಗಿಣಿ, ಸಂಜನಾ, ರಾಹುಲ್‌ ತೋಣ್ಸೆ ಸಲ್ಲಿಸಿರುವ ಜಾಮೀನು ಅರ್ಜಿ ಮತ್ತು ಮೊದಲನೇ ಆರೋಪಿ ಶಿವಪ್ರಕಾಶ್‌ ಮತ್ತು ವಿನಯ್‌ ಕುಮಾರ್‌ ಸಲ್ಲಿಸಿರುವ ನಿರೀಕ್ಷಣಾ ಜಾಮೀನುಗಳ ಸಂಬಂಧ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿರುವ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಂ.ಸೀನಪ್ಪ ಅವರು, ಎಲ್ಲಾ ಅರ್ಜಿಗಳ ತೀರ್ಪನ್ನು ಸೆ.28ಕ್ಕೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಇದರಿಂದ ಹಲವು ದಿನಗಳಿಂದ ಜೈಲುವಾಸ ಮಾಡುತ್ತಿರುವ ರಾಗಿಣಿ ಹಾಗೂ ಸಂಜನಾ ಜಾಮೀನು ಭವಿಷ್ಯವು ಸೆ.28ಕ್ಕೆ ನಿರ್ಧಾರವಾಗಲಿದೆ.

ಇದಕ್ಕೂ ಮುನ್ನ ನಟಿ ರಾಗಿಣಿ ಪರ ವಕೀಲರು ವಾದ ಮಂಡಿಸಿ, ಸಿಸಿಬಿ ಪೊಲೀಸರು ಸತ್ಯವನ್ನು ಮರೆಮಾಚಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ರವಿಶಂಕರ್‌ ಹೇಳಿಕೆ ಆಧರಿಸಿ 12 ಜನರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ರಾಗಿಣಿ ಸಾಕ್ಷ್ಯ ನಾಶ ಮಾಡುತ್ತಾರೆಂದು ಆರೋಪಿಸಿದ್ದಾರೆ. ಸಿಸಿಬಿಯಲ್ಲೇ ಸಾಕ್ಷ್ಯ ತಿದ್ದುಪಡಿ ಮಾಡುವವರಿದ್ದಾರೆ. ಡ್ರಗ್ಸ್‌ ಪ್ರಕರಣದಲ್ಲಿ ರಾಗಿಣಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಧಾರಗಳು ಲಭ್ಯವಿಲ್ಲ. ಇನ್ನೂ ರಾಗಿಣಿ ಕೊರೋನಾ ಸಮಯದಲ್ಲೂ ಸಮಾಜ ಸೇವೆ ಮಾಡಿದ್ದಾರೆ. ಈ ಎಲ್ಲಾ ಕಾರಣ ಪರಿಗಣಿಸಿ ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದರು.

ಓಪನ್‌ ಕೋರ್ಟ್‌ನಲ್ಲಿ ನೋಡಲಾಗದ ಸಿಡಿಗಳು,  ರಾಗಿಣಿ, ಸಂಜನಾ ರಹಸ್ಯ ಬಟಾಬಯಲು!

ಸಂಜನಾ ಪರ ವಕೀಲರು ವಾದ ಮಂಡಿಸಿ, ಕಳೆದ ಸೆ.3ರಂದು ರವಿಶಂಕರ್‌ ಹೇಳಿಕೆ ಪಡೆಯಲಾಗಿದೆ. ಸೆ.4ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಎಫ್‌ಐಆರ್‌ಗೆ ಮುನ್ನ ಸತ್ಯಾಂಶ ಪರಿಶೀಲಿಸಿಲ್ಲ. ಮೊದಲಿಗೆ ರವಿಶಂಕರ್‌ ವಿರುದ್ಧದ ಆರೋಪದ ತನಿಖೆ ಮಾಡಬೇಕಿತ್ತು. ಆತ ಹೆಸರಿಸಿದ ವ್ಯಕ್ತಿಗಳ ವಿರುದ್ಧ ಸಾಕ್ಷಿಗಳಿವೆಯೇ ಎಂಬುದನ್ನು ಪರಿಶೀಲಿಸಬೇಕಿತ್ತು. ಆದರೆ, ಸಿಸಿಬಿ ಪೋಲಿಸರು ಸೂಕ್ತವಾಗಿ ತನಿಖೆ ನಡೆಸದೆ ಮನಸೋಯಿಚ್ಚೇ ಎಫ್‌ಐಆರ್‌ ದಾಖಲಿಸಿ ಅರ್ಜಿದಾರರ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಬಾಣಸವಾಡಿ ಕೇಸ್‌ನಲ್ಲಿ ಸಿಕ್ಕ ಡ್ರಗ್ಸ್‌ಗೆ ಹಣದ ಹೂಡಿಕೆ ಮಾಡಿದವರನ್ನು ಪತ್ತೆ ಹಚ್ಚಲು ಮತ್ತೊಂದು ಎಫ್‌ಐಆರ್‌ ದಾಖಲಿಸಲಾಗಿದೆ. ಒಂದೇ ಪ್ರಕರಣದಲ್ಲಿ ಎರಡು ಎಫ್‌ಐಆರ್‌ ದಾಖಲಿಸಿರುವುದು ಕಾನೂನುಬಾಹಿರವಾಗಿದೆ. ಹೀಗಾಗಿ, ಅರ್ಜಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಶಿವಪ್ರಕಾಶ್‌ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧ ಯಾವುದೇ ದಾಖಲೆ ಹಾಗೂ ಸಾಕ್ಷ್ಯ ಇಲ್ಲ. ಆದರೂ ಸಿಸಿಬಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕೇವಲ ರವಿಶಂಕರ್‌ ಹೇಳಿಕೆ ಆಧರಿಸಿ ಎಲ್ಲರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ. ಪಾರ್ಟಿಗಳಲ್ಲಿ ಗಾಂಜಾ ಹಾಗೂ ಕೊಕೇನ್‌ ಸರಬರಾಜು ಮಾಡುತ್ತಿದ್ದರೆಂದು ಆರೋಪಿಸಲಾಗಿದೆ. ನಿರೀಕ್ಷಣಾ ಜಾಮೀನು ಸಿಗಬಾರದು ಎಂಬ ದುರುದ್ದೇಶದಿಂದ ಪೊಲೀಸರು ಇಂತಹ ಆರೋಪ ಮಾಡಿದ್ದಾರೆ. ಶಿವಪ್ರಕಾಶ್‌ ತಲೆಮರೆಸಿಕೊಂಡಿಲ್ಲ. ನಿರೀಕ್ಷಣಾ ಜಾಮೀನು ನೀಡಿದರೆ ನ್ಯಾಯಾಲಯಕ್ಕೆ ಹಾಜರಾಗಲು ಸಿದ್ಧರಿದ್ದಾರೆ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ರಾಗಿಣಿಗೆ ಡ್ರಗ್ಸ್‌ ಪೂರೈಸಿದ್ದ ಆಫ್ರಿಕಾ ಪ್ರಜೆ ಸೆರೆ

ಕನ್ನಡ ಚಲನಚಿತ್ರ ರಂಗದ ನಟಿಯರು ಹಾಗೂ ಪೇಜ್‌ ತ್ರಿ ಪಾರ್ಟಿ ಆಯೋಜಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಮತ್ತೊಬ್ಬ ಆಫ್ರಿಕಾ ಪ್ರಜೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನೈಜೀರಿಯಾ ಮೂಲದ ಓಸ್ಸಿ ಬಂಧಿತನಾಗಿದ್ದು, ಆರೋಪಿಯಿಂದ ಎಡಿಎಂಎ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಮಾದಕ ವಸ್ತು ಜಾಲದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಹಾಗೂ ಆಕೆಯ ಸ್ನೇಹಿತ, ಸಾರಿಗೆ ಇಲಾಖೆ ನೌಕರ ರವಿಶಂಕರ್‌ಗೆ ಓಸ್ಸಿ ಡ್ರಗ್ಸ್‌ ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.

ಹಲವು ವರ್ಷಗಳ ಹಿಂದೆ ಬಿಸಿನೆಸ್‌ ವೀಸಾದಡಿ ಭಾರತಕ್ಕೆ ಬಂದ ಓಸ್ಸಿ, ನಗರದಲ್ಲಿ ಬಾಸಣವಾಡಿ ಸಮೀಪ ನೆಲೆಸಿದ್ದ. ಡ್ರಗ್ಸ್‌ ಪ್ರಕರಣದ ಮತ್ತೊಬ್ಬ ಆರೋಪಿ, ಈಗಾಗಲೇ ಬಂಧಿತನಾಗಿರುವ ನೈಜೀರಿಯಾ ಮೂಲದ ಲೂಮ್‌ ಪೆಪ್ಪರ್‌ ಅಲಿಯಾಸ್‌ ಸೈಮನ್‌ನ ಸಹಚರನಾಗಿದ್ದ ಓಸ್ಸಿ, ಅಕ್ರಮವಾಗಿ ಡ್ರಗ್ಸ್‌ ತರಿಸಿ ಮಾರಾಟ ಮಾಡುತ್ತಿದ್ದ. ಪೆಪ್ಪರ್‌ ನೀಡಿದ ಮಾಹಿತಿ ಮೇರೆಗೆ ಓಸ್ಸಿ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ.