ಬೆಳಗಾವಿ(ಜೂ.10): ವಿಷಸೇವಿಸಿ ಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದ ಪತ್ನಿ ಕೂಡ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಜಿಲ್ಲೆ ಬೈಲಹೊಂಗಲದಲ್ಲಿ ನಡೆದಿದೆ. ಗುರುನಾಥ್ ತಾವರೆ(45) ಹಾಗೂ ಮೀನಾಕ್ಷಿ(35) ಎಂಬುವರೇ ಮೃತ ದುರ್ದೈವಿಗಳಾಗಿದ್ದಾರೆ.

ಏನಿದು ಪ್ರಕರಣ..?

ಮೃತ ಗುರುನಾಥ್ ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ‌ ನಿವಾಸಿಯಾಗಿದ್ದು ಅಮಟೂರು ಗ್ರಾಮದಲ್ಲಿ ಸರ್ಕಾರಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಗುರುನಾಥ್ ಅವರಿಗೆ ಕಳೆದ 13 ವರ್ಷಗಳ ಹಿಂದೆ ಬೆಳಗಾವಿಯ ಮೀನಾಕ್ಷಿ ಜೊತೆ ವಿವಾಹವಾಗಿತ್ತು. ಕೆಲ ವರ್ಷಗಳಿಂದ ಕೌಟುಂಬಿಕ ಕಲಹ ಹಿನ್ನೆಲೆ ಪರಸ್ಪರ ಜಗಳಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ

ಮೃತ ದಂಪತಿಗೆ 10 ವರ್ಷದ ಗಂಡು ಮಗು, ಮೂರು ವರ್ಷದ ಹೆಣ್ಣು ಮಗು ಇದೆ. ಪತಿ ಪತ್ನಿ ಮಧ್ಯೆ ಕೌಟುಂಬಿಕ ಕಲಹದ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಈ ವಿಷಯದಿಂದ ಬಹಳ ನೊಂದಿದ್ದ ಗುರುನಾಥ್ ತಾವರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡ ಅತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿದ ಪತ್ನಿ ಮೀನಾಕ್ಷಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಯಆತ್ಮಹತ್ಯೆಯಿಂದ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿವೆ. ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.