* ಕೋವಿಡ್‌ ಸೋಂಕು ಭೀತಿ: ಕಮಿಷನರ್‌ಗೆ ಕರೆ ಮಾಡಿ ಆತ್ಮಹತ್ಯೆ ಮಾಡಿದ ದಂಪತಿ* ಮಕ್ಕಳಾಗದ ಚಿಂತೆ ಜೊತೆಗೆ ಕೊರೋನಾ ಹೆದರಿಕೆ* ಮರಣೋತ್ತರ ಪರೀಕ್ಷೆಯಲ್ಲಿ ಕೋವಿಡ್‌ ನೆಗೆಟಿವ್‌ 

ಮಂಗಳೂರು(ಆ.18): ಕೊರೋನಾ ಸೋಂಕು ತಗುಲಿದ ಭೀತಿಯಿಂದ ದಂಪತಿ ಪೊಲೀಸ್‌ ಕಮಿಷನರ್‌ಗೆ ಕರೆ ಮಾಡಿ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ಘಟನೆ ಮಂಗಳೂರಿನಲ್ಲಿ ಮಂಗಳವಾರ ಸಂಭವಿಸಿದೆ.

ಬೈಕಂಪಾಡಿಯ ಚಿತ್ರಾಪುರದ ರೆಹೆಜಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ರಮೇಶ್‌ ಸುವರ್ಣ (45) ಮತ್ತು ಅವರ ಪತ್ನಿ ಗುಣ ಸುವರ್ಣ (35) ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದವರು. ಮೃತ ದಂಪತಿಯ ಮರಣೋತ್ತರ ಪರೀಕ್ಷೆಯಲ್ಲಿ ಕೋವಿಡ್‌ ನೆಗೆಟಿವ್‌ ಬಂದಿದೆ. ಇವರು ಮೂಲತಃ ಪಡುಬಿದ್ರಿ ನಿವಾಸಿಗಳು. ರಮೇಶ ಸುವರ್ಣ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಗುಣ ಸುವರ್ಣ ಅವರು ಡೆತ್‌ ನೋಟ್‌ ಬರೆದಿದ್ದು ಅದರಲ್ಲಿ ತಾವು ಆತ್ಮಹತ್ಯೆ ಮಾಡಲು ಕಾರಣವನ್ನು ತಿಳಿಸಿದ್ದಾರೆ.

ಡೆತ್‌ ನೋಟ್‌ನಲ್ಲಿ ಏನಿದೆ?: 

ನಾನು 14ನೇ ವಯಸ್ಸಿನಿಂದಲೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. 2000ನೇ ಇಸವಿಯಲ್ಲಿ ನಮ್ಮ ಮದುವೆಯಾಗಿದೆ. 2001ರಲ್ಲಿ ಗರ್ಭಿಣಿಯಾಗಿದ್ದಾಗ ನನಗೆ ಸಕ್ಕರೆ ಕಾಯಿಲೆ ಬಾಧಿಸಿತು. ಆಪರೇಷನ್‌ ಮೂಲಕ ಹೆರಿಗೆಯಾದರೂ ಗಂಡು ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 2005ರಲ್ಲಿ ಮತ್ತೆ ಗರ್ಭಿಣಿಯಾಗಿದ್ದೆ. ಆದರೂ ಮಾತ್ರೆಯಿಂದ ವ್ಯತಿರಿಕ್ತ ಪರಿಣಾಮವಾಗುತ್ತಿದ್ದಂತೆ ಮತ್ತೆ ಸಮಸ್ಯೆ ಎದುರಾಯಿತು. ಯಾವುದೇ ಮಾತ್ರೆ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಅಂದಿನಿಂದ ಪ್ರತಿನಿತ್ಯ ಎರಡು ಇನ್ಸೂಲಿನ್‌ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಕಾರಣದಿಂದ 2020ರ ಬಳಿಕ ಕೋವಿಡ್‌ ಬಂದ ಬಳಿಕ ನಾವೆಲ್ಲ ತುಂಬಾ ಜಾಗರೂಕತೆ ತೆಗೆದುಕೊಂಡಿದ್ದೆವು. ಆದರೆ ಸುಮಾರು 10 ದಿನಗಳಿಂದ ಕೋವಿಡ್‌ ನನ್ನನ್ನು ಬಾಧಿಸಿದ್ದು, ಅದು ವಿಕೋಪಕ್ಕೆ ಹೋಗಿ ಬ್ಲಾಕ್‌ ಫಂಗಸ್‌ ಭಯ ಕಾಡಿದೆ. ಗಂಡನಿಗೂ ಮೂರು ದಿನದಿಂದ ಕೋವಿಡ್‌ ಲಕ್ಷಣಗಳು ಕಂಡು ಬರುತ್ತಿದೆ. ಈ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿದ್ದಾರೆ.

ಸೆಕ್ಸ್ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ : ಯುವಕ ಆತ್ಮಹತ್ಯೆ

ನನ್ನ ತಂದೆ, ತಾಯಿ ಹಾಗೂ ತಮ್ಮನಿಗೂ ಕೋವಿಡ್‌ ಸೋಂಕು ತಗುಲಿದ್ದು, ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ನಮ್ಮ ಅಂತ್ಯಕ್ರಿಯೆ ತೊಂದರೆ ಕೊಡಬಾರದು. ನನಗೆ 2 ಬಾರಿ ಆಪರೇಷನ್‌ ಆಗಿ ಮಕ್ಕಳ ಸಮಸ್ಯೆಯಾದರೂ ಎಲ್ಲಿ ಹೋದರೂ ಮಕ್ಕಳ ಬಗ್ಗೆಯೇ ಕೇಳುತ್ತಿದ್ದಾರೆ. ಅದಕ್ಕಾಗಿ ನಾನು ಹೆಚ್ಚು ಯಾರ ಜೊತೆನೂ ಬೆರೆಯುತ್ತಿರಲಿಲ್ಲ. ಹಿಂದೂ ಸಂಘಟನೆಯ ಶರಣ್‌ ಪಂಪ್‌ವೆಲ್‌ ಮತ್ತು ಸತ್ಯಜಿತ್‌ ಸುರತ್ಕಲ್‌ ಅವರಲ್ಲಿ ವಿನಂತಿ ಮಾಡುವುದೇನೆಂದರೆ, ನಮ್ಮನ್ನು ನಮ್ಮ ಹಿಂದೂ ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರ ನಡೆಸಿ. ಅಂತ್ಯಕ್ರಿಯೆಗೆ 1 ಲಕ್ಷ ರು. ಇಟ್ಟಿದ್ದೇವೆ. ನಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಡವರಿಗೆ ನೀಡಿ. ಈ ಮನೆಯ ಮಾಲೀಕರಲ್ಲೂ ಕ್ಷಮೆ ಕೇಳುತ್ತೇವೆ ಎಂದು ಬರೆದಿದ್ದಾರೆ.

ಪೊಲೀಸ್‌ ಕಮಿಷನರ್‌ಗೆ ಕರೆ: 

ಮಂಗಳವಾರ ಬೆಳಗ್ಗೆ 6.45ರ ಸುಮಾರಿಗೆ ಆತ್ಮಹತ್ಯೆಗೆ ಮುನ್ನ ರಮೇಶ ಸುವರ್ಣ ಅವರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ಗೆ ವಾಯ್ಸ್‌ ಮೆಸೇಜ್‌ ಕಳುಹಿಸಿದ್ದು, ನಾವು ದಂಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದರು. ಇದಕ್ಕೆ ಕಮಿಷನರ್‌ ಕೂಡಲೇ ಪ್ರತಿಕ್ರಿಯಿಸಿ, ಆತ್ಮಹತ್ಯೆಯಂತಹ ದುಸ್ಸಾಹಸ ಮಾಡಬೇಡಿ. ನಿಮ್ಮ ಏನೇ ಕಷ್ಟವಿದ್ದರೂ ನಾವು ಸ್ಪಂದಿಸುತ್ತೇವೆ. ದಯವಿಟ್ಟು ಆತ್ಮಹತ್ಯೆ ಮಾಡಬೇಡಿ ಎಂದು ಪರಿಪರಿಯಾಗಿ ವಿನಂತಿ ಮಾಡಿದ್ದಾರೆ. ಅಲ್ಲದೆ ಕೂಡಲೇ ಎಲ್ಲ ಪೊಲೀಸ್‌ ಠಾಣೆಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ರವಾನಿಸಿ ದಂಪತಿ ರಕ್ಷಣೆಗೆ ಆಗ್ರಹಿಸಿದ್ದಾರೆ. ಪೊಲೀಸ್‌ ಕಮಿಷನರ್‌ ಅವರು ಎಷ್ಟೇ ಪ್ರಯತ್ನಿಸಿದರೂ ಆದರೆ ರಮೇಶ ಸುವರ್ಣ ಅವರು ಕರೆ ಸ್ವೀಕರಿಸಿರಲಿಲ್ಲ. ದಂಪತಿ ಮಾಹಿತಿ ಪಡೆದ ಸುರತ್ಕಲ್‌ ಪೊಲೀಸರು ಅಪಾರ್ಟ್‌ಮೆಂಟ್‌ಗೆ ತೆರಳಿದಾಗ ಅಲ್ಲಿ ದಂಪತಿ ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ. ಘಟನಾ ಸ್ಥಳದಲ್ಲಿ 1 ಲಕ್ಷ ರು. ನಗದು ಹಾಗೂ ಡೆತ್‌ನೋಟ್‌ ಪತ್ತೆಯಾಗಿದೆ.

ಪತ್ನಿ ಬಳಿಕ ಪತಿಯೂ ಆತ್ಮಹತ್ಯೆ: 

ಕೋವಿಡ್‌ ಚಿಂತೆಯಿಂದ ಜಿಗುಪ್ಸೆಗೊಂಡಿದ್ದ ಈ ದಂಪತಿ ಪೈಕಿ ಗುಣ ಸುವರ್ಣ ಮೊದಲು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಪೊಲೀಸ್‌ ಕಮಿಷನರ್‌ ಹಾಗೂ ತನ್ನ ಸಂಬಂಧಿಕರಿಗೆ ಆಡಿಯೋ ಸಂದೇಶ ಕಳುಹಿಸಿದ ನಂತರ ರಮೇಶ್‌ ಸುವರ್ಣ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 20 ನಿಮಿಷದಲ್ಲಿ ಪೊಲೀಸರು ಅಪಾರ್ಟ್‌ಮೆಂಟ್‌ಗೆ ಆಗಮಿಸಿ ಬಾಗಿಲು ಒಡೆದು ಒಳಪ್ರವೇಶಿಸಿದ್ದಾರೆ. ಅಷ್ಟರಲ್ಲಿ ಹಾಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿಯಾಗಿತ್ತು ಎನ್ನುತ್ತಾರೆ ಪೊಲೀಸ್‌ ಕಮಿಷನರ್‌.

ಕೋವಿಡ್‌ ನೆಗೆಟಿವ್‌: 

ಕೊರೋನಾ ಸೋಂಕಿನ ಭೀತಿ ವ್ಯಕ್ತಪಡಿಸಿದ ಕಾರಣ ಈ ದಂಪತಿಯ ಸ್ವಾಬ್‌ ಟೆಸ್ಟ್‌ ನಡೆಸಲಾಗಿದ್ದು, ಅದರಲ್ಲಿ ಕೋವಿಡ್‌ ನೆಗೆಟಿವ್‌ ಬಂದಿದೆ. ಕೋವಿಡ್‌ ಲಕ್ಷಣ ಇಲ್ಲದಿದ್ದರೂ ವಿಪರೀತ ಭಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೋವಿಡ್‌ ಟೆಸ್ಟ್‌ ನಡೆಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ನಾಗರಿಕರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದು. ಕೋವಿಡ್‌ ಬಗ್ಗೆ ಭೀತಿ ಬೇಡ, ಕೋವಿಡ್‌ ನಿಯಮ ಪಾಲಿಸಿದರೆ ಎಲ್ಲವೂ ಸರಿಹೋಗುತ್ತದೆ. ಆತ್ಮಹತ್ಯೆಯಿಂದ ಯಾವ ಸಮಸ್ಯೆಯೂ ನಿವಾರಣೆಯಾಗುವುದಿಲ್ಲ. ಆದ್ದರಿಂದ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕಬಾರದು ಎಂದು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ವಿನಂತಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಮತ್ತು ಡಿಸಿಪಿ ಹರಿರಾಂ ಶಂಕರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.