ಚಿನ್ನಾಭರಣ ಕಡಿಮೆ ದರಕ್ಕೆ ಕೊಡಿಸುವುದಾಗಿ ಗಾಳ, ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದ ಚಾಲಾಕಿಗಳು, 34.50 ಲಕ್ಷ ರು.ನಗದು ಹಾಗೂ 107 ಗ್ರಾಂ ತೂಕದ ಚಿನ್ನಾಭರಣ ಜಪ್ತಿ

ಬೆಂಗಳೂರು(ನ.25): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಕಸ್ಟಮ್ಸ್‌ ಅಧಿಕಾರಿಗಳೆಂದು ನಂಬಿಸಿ ಕಡಿಮೆ ದರಕ್ಕೆ ಚಿನ್ನಾಭರಣ ಕೊಡಿಸುವುದಾಗಿ ಪರಿಚಿತರಿಂದ ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದ ದಂಪತಿ ಕೊಡಿಗೇಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ದೇವನಹಳ್ಳಿ ಬ್ರಿಗೇಡ್‌ ಆರ್ಚಡ್‌ ಅಪಾರ್ಚ್‌ಮೆಂಟ್‌ ನಿವಾಸಿಗಳಾದ ದಾರ್ಬಿನ್‌ ದಾಸ್‌ ಅಲಿಯಾಸ್‌ ಮೋಹನ್‌ ದಾಸ್‌(38) ಮತ್ತು ಈತನ ಪತ್ನಿ ಧನುಷ್ಯ ಅಲಿಯಾಸ್‌ ರಾಚೆಲ್‌(28) ಬಂಧಿತರು. ಆರೋಪಿಗಳಿಂದ 34.50 ಲಕ್ಷ ರು.ನಗದು ಹಾಗೂ 107 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಿಲಾಗಿದೆ. ನೈಲ್‌ ಬಾಕ್ಸ್‌ ಅಕಾಡೆಮಿ ಮಾಲೀಕರಾದ ಸ್ನೇಹ ಕೆ.ಭಗವತ್‌ ನೀಡಿದ ದೂರಿನ ಮೇರೆಗೆ ಇನ್ಸ್‌ಪೆಕ್ಟರ್‌ ಎನ್‌.ರಾಜಣ್ಣ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಪುರ: ಸಾಲದ ಹೆಸ್ರಲ್ಲಿ ವಿಡಿಸಿಸಿ ಬ್ಯಾಂಕ್‌ನಲ್ಲಿ ಮಹಾಮೋಸ..!

ಆರೋಪಿ ರಾಚೆಲ್‌ ಇಂದಿರಾನಗರದ ನೈಲ್‌ ಬಾಕ್ಸ್‌ ಅಕಾಡೆಮಿಯಲ್ಲಿ ತರಬೇತಿದಾರಳಾಗಿದ್ದಳು. ಈ ವೇಳೆ ಆಕೆಗೆ ಅಕಾಡೆಮಿಯ ಮಾಲೀಕರಾದ ಸ್ನೇಹ ಕೆ.ಭಗವತ್‌ ಪರಿಚಯವಾಗಿದೆ. ಕೆಲ ದಿನಗಳ ಬಳಿಕ ‘ನನ್ನ ಪತಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ವಿಭಾಗದಲ್ಲಿ ಅಧಿಕಾರಿಯಾಗಿದ್ದಾರೆ. ವಿದೇಶದಿಂದ ಅಕ್ರಮವಾಗಿ ಸಾಗಿಸುವ ಚಿನ್ನಾಭರಣ ಜಪ್ತಿ ಮಾಡುವ ತಂಡದಲ್ಲಿದ್ದಾರೆ. ಈ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಕಡಿಮೆ ದರಕ್ಕೆ ಕೊಡಿಸುವುದಾಗಿ’ ನಂಬಿಸಿದ್ದಾಳೆ. ಈಕೆಯ ಮಾತು ನಂಬಿದ ಸ್ನೇಹ ವಿವಿಧ ಹಂತಗಳಲ್ಲಿ ಆರೋಪಿಗೆ ಬರೋಬ್ಬರಿ 68 ಲಕ್ಷ ರು. ನೀಡಿದ್ದರು.

ಅಕಾಡೆಮಿ ನೌಕರರಿಗೂ ವಂಚನೆ: ಆರೋಪಿ ರಾಚೆಲ್‌, ಅಕಾಡೆಮಿಯ ನೌಕರರಿಗೆ ಏರ್‌ಪೋರ್ಚ್‌ನಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದಾಳೆ. ಹಣ ಕೊಟ್ಟವರು ವಾಪಾಸ್‌ ಕೇಳಿದಾಗ, ಮೊಬೈಲ್‌ ಸ್ವಿಚ್‌್ಡ ಆಫ್‌ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದಾಳೆ. ಬಳಿಕ ವಾಸ್ತವ್ಯವನ್ನು ದೇವನಹಳ್ಳಿಯಿಂದ ಆರೋಪಿಗಳು ಮಂಗಳೂರಿಗೆ ಬದಲಿಸಿದ್ದರು. ಮಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಖಾಸಗಿ ಅಪಾರ್ಚ್‌ಮೆಂಟ್‌ವೊಂದರಲ್ಲಿ ಫ್ಲ್ಯಾಟ್‌ವೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ಮತ್ತೊಂದೆಡೆ ಕಡಿಮೆ ದರಕ್ಕೆ ಚಿನ್ನಾಭರಣ ಸಿಗುವ ಆಸೆಯಿಂದ 68 ಲಕ್ಷ ರು. ನೀಡಿ ವಂಚನೆಗೆ ಒಳಗಾಗಿದ್ದ ಸ್ನೇಹ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ವಂಚಕ ದಂಪತಿಯನ್ನು ಬಂಧಿಸಿ ಕರೆತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುತ್ರಿಯ ಶಿಕ್ಷಕರಿಗೂ ದೋಖಾ !

ಈ ವಂಚಕ ದಂಪತಿ ಪುತ್ರಿ ದೇವನಹಳ್ಳಿಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ಶಾಲೆಯ ಶಿಕ್ಷಕರನ್ನು ಪರಿಚಯಿಸಿಕೊಂಡಿದ್ದ ರಾಚೆಲ್‌, ವಿಮಾನ ನಿಲ್ದಾಣದಲ್ಲಿ ಉತ್ತಮ ವೇತನದ ನೌಕರಿಗೆ ಕೊಡಿಸುವುದಾಗಿ ನಂಬಿಸಿ 96 ಸಾವಿರ ರು. ಪಡೆದು ವಂಚಿಸಿದ್ದಳು. ಅಷ್ಟೇ ಅಲ್ಲದೆ, ಪುತ್ರಿಯ ಸಹಪಾಠಿಗಳ ಪೋಷಕರನ್ನು ಪರಿಚಯಿಸಿಕೊಂಡು ಕಡಿಮೆ ದರಕ್ಕೆ ಚಿನ್ನಾಭರಣ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಳು. ಈ ಸಂಬಂಧ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಬಸ್‌ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ವಶಕ್ಕೆ

ನೆರೆಯ ನಿವಾಸಿಗಳಿಗೂ ವಂಚನೆ

ಈ ವಂಚಕ ದಂಪತಿ ದೇವನಹಳ್ಳಿಯಲ್ಲಿ ತಾವು ವಾಸವಿದ್ದ ಅಪಾರ್ಚ್‌ಮೆಂಟ್‌ನಲ್ಲಿ ಅಕ್ಕಪಕ್ಕದ ಫ್ಲ್ಯಾಟ್‌ನ ನಿವಾಸಿಗಳನ್ನು ಪರಿಚಯಿಸಿಕೊಂಡು ಕಡಿಮೆ ದರಕ್ಕೆ ಚಿನ್ನಾಭರಣ, ಬ್ರ್ಯಾಂಡೆಡ್‌ ವಸ್ತುಗಳು, ಲ್ಯಾಪ್‌ಟಾಪ್‌, ಐಫೋನ್‌ ಸೇರಿದಂತೆ ದುಬಾರಿ ಮೌಲ್ಯದ ವಸ್ತುಗಳನ್ನು ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಲವ್‌ ಮ್ಯಾರೇಜ್‌

ಚೆನ್ನೈ ಮೂಲದ ಮೋಹನ್‌ ದಾಸ್‌ ಹಾಗೂ ಬೆಂಗಳೂರು ಮೂಲದ ರಾಚೆಲ್‌ ಕೆಲ ವರ್ಷಗಳ ಹಿಂದೆ ಚೆನ್ನೈನಲ್ಲಿ ಪರಿಚಿತರಾಗಿದ್ದರು. ಬಳಿಕ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮಾಂಕುರವಾಗಿ ಮದುವೆಯಾಗಿದ್ದರು. ದಂಪತಿಗೆ 4 ವರ್ಷ ಹಾಗೂ 11 ತಿಂಗಳ ಎರಡು ಮಕ್ಕಳಿವೆ. ಆರಂಭದಲ್ಲಿ ಸಣ್ಣಪುಟ್ಟಕೆಲಸ ಮಾಡುತ್ತಿದ್ದ ದಂಪತಿ ನಂತರ ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.