Asianet Suvarna News Asianet Suvarna News

ಮನೆ ಬಿಟ್ಟು ಬಂದವಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಕಾನ್‌ಸ್ಟೇಬಲ್: ರಕ್ಷಕರೇ ಹೀಗೆ ಮಾಡಿದ್ರೆ ಹೇಗೆ?

ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿ ಮರುದಿನ ಬಾಲಕಿಗೆ 500 ನೀಡಿ ಕಳುಹಿಸಿದ್ದ ಆರೋಪಿ 

Constable Rape on Minor Girl in Bengaluru grg
Author
Bengaluru, First Published Jul 30, 2022, 6:47 AM IST

ಬೆಂಗಳೂರು(ಜು.30):  ಮನೆ ಬಿಟ್ಟು ಬಂದಿದ್ದ 17 ವರ್ಷದ ಬಾಲಕಿಗೆ ನೆರವು ನೀಡುವ ನೆಪದಲ್ಲಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬನನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜ ನಗರ ಠಾಣೆ ಕಾನ್‌ಸ್ಟೇಬಲ್‌ ಪವನ್‌ ದ್ಯಾವಣ್ಣನವರ್‌ ಬಂಧಿತನಾಗಿದ್ದು, ನಾಲ್ಕು ದಿನದ ಹಿಂದೆ ವಿಜಯ ನಗರ ಸಮೀಪ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದುಕೊಂಡು ಆರೋಪಿ ಲೈಂಗಿಕವಾಗಿ ಶೋಷಿಸಿದ್ದ. ಮರು ದಿನ ಬೆಂಗಳೂರಿನಿಂದ ಚಾಮರಾಜನಗರ ಜಿಲ್ಲೆ ಯಳಂದೂರಿನಲ್ಲಿರುವ ತನ್ನ ಇನ್‌ಸ್ಟಾಗ್ರಾಮ್‌ ಸ್ನೇಹಿತನನ್ನು ಭೇಟಿ ಮಾಡಿ ಸಂತ್ರಸ್ತೆ ಘಟನೆ ಬಗ್ಗೆ ಹೇಳಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಯಳಂದೂರು ಪೊಲೀಸರು, ತಕ್ಷಣವೇ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದರು. ಬಳಿಕ ನಗರಕ್ಕೆ ಮರಳಿದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅತ್ಯಾಚಾರ ಎಸಗಿ 500 ಕೊಟ್ಟ

ಜು.26ರಂದು ಸಂಜೆ ಮನೆ ತೊರೆದು ಬಂದ ಸಂತ್ರಸ್ತೆ, ವಿಜಯ ನಗರ ಸಮೀಪ ಮೈದಾನದ ಬಳಿ ಕುಳಿತಿದ್ದಳು. ಆಗ ಆಕೆಯನ್ನು ಗಮನಿಸಿದ ಸಮವಸ್ತ್ರದಲ್ಲಿದ್ದ ಪವನ್‌, ‘ನಿನ್ನ ಸಂಕಷ್ಟಕ್ಕೆ ಸಹಾಯ ಮಾಡುತ್ತೇನೆ’ ಎಂದು ನಂಬಿಸಿದ್ದಾನೆ. ಬಳಿಕ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ, ಮರುದಿನ ಬಾಲಕಿಗೆ .500 ನೀಡಿ ಕಳುಹಿಸಿದ್ದ. ಅಲ್ಲಿಂದ ಚಾಮರಾಜನಗರದ ಯಳಂದೂರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿಯವಾಗಿದ್ದ ಗೆಳೆಯನನ್ನು ಭೇಟಿಯಾಗಲು ಸಂತ್ರಸ್ತೆ ತೆರಳಿದ್ದಳು.

ಶಾಲಾ ಟಾಯ್ಲೆಟ್‌ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಆರೋಪಿ ಬಂಧನ

ಗೆಳತಿ ಮನೆ ಬಿಟ್ಟು ಬಂದಿರುವ ವಿಚಾರ ತಿಳಿದು ಆತಂಕಗೊಂಡ ಆತ, ಕೂಡಲೇ ಯಳಂದೂರು ಠಾಣೆಗೆ ಆಕೆಯನ್ನು ಕರೆದೊಯ್ದು ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದ. ಇತ್ತ ಮಗಳು ನಾಪತ್ತೆಯಾಗಿರುವ ಬಗ್ಗೆ ಕೆ.ಪಿ.ಅಗ್ರಹಾರ ಠಾಣೆಗೆ ಸಂತ್ರಸ್ತೆಯ ಪೋಷಕರು ದೂರು ದಾಖಲಿಸಿದ್ದರು. ಯಳಂದೂರು ಪೊಲೀಸರಿಂದ ಮಾಹಿತಿ ಪಡೆದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು, ನಗರಕ್ಕೆ ಸಂತ್ರಸ್ತೆಯನ್ನು ಕರೆದುಕೊಂಡು ಬಂದು ವಿಚಾರಿಸಿದಾಗ ಆಕೆ ತನ್ನ ಮೇಲೆ ಅತ್ಯಾಚಾರದ ಬಗ್ಗೆ ಹೇಳಿದ್ದಾಳೆ. ಬಳಿಕ ಸಂತ್ರಸ್ತೆಯಿಂದ ದೂರು ಪಡೆದು ಕಾನ್‌ಸ್ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಣ ಸುಲಿದು ವರ್ಗಗೊಂಡಿದ್ದ

ಬೆಳಗಾವಿ ಜಿಲ್ಲೆಯ ಪವನ್‌ ದ್ಯಾವಣ್ಣನವರ್‌, 2020ರಲ್ಲಿ ಕಾನ್‌ಸ್ಟೇಬಲ್‌ ಹುದ್ದೆಗೆ ನೇಮಕಗೊಂಡಿದ್ದ. ಮೊದಲು ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಠಾಣೆಯಲ್ಲಿ ಕರ್ತವ್ಯಕ್ಕೆ ಆತ ನಿಯೋಜಿತನಾಗಿದ್ದ. ಆಗ ಸಂಚಾರ ನಿಯಮ ಉಲ್ಲಂಘನೆ ನೆಪದಲ್ಲಿ ಸಾರ್ವಜನಿಕರಿಗೆ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಗೋವಿಂದರಾಜ ನಗರ ಠಾಣೆಗೆ ಪವನ್‌ನನ್ನು ಅಧಿಕಾರಿಗಳು ವರ್ಗಾವಣೆ ಮಾಡಿದ್ದರು. ಇನ್ನು ಪ್ರೊಬೇಷನರಿ ಅವಧಿ ಮುಗಿಯುವ ಮುನ್ನವೇ ಲೈಂಗಿಕ ದೌರ್ಜನ್ಯ ಕೃತ್ಯದ ಆರೋಪ ಹೊತ್ತು ಪವನ್‌ ಜೈಲು ಸೇರುವಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

Follow Us:
Download App:
  • android
  • ios