ಬೆಂಗಳೂರು(ಸೆ.11): ರಾಜ್ಯದಲ್ಲಿ ಡ್ರಗ್ಸ್‌ ದಂಧೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸುತ್ತಿದ್ದೇವೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಾವು ಆಳವಾದ ತನಿಖೆಗೆ ಇಳಿದಿದ್ದು, ಈಗಾಗಲೇ ಕೆಲವರ ಬಣ್ಣ ಬಯಲಾಗಿದೆ. ಇನ್ನೂ ಹಲವರ ಬಣ್ಣ ಬಯಲಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಗುರವಾರ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಡ್ರಗ್ಸ್‌ ದಂಧೆಯಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಸದ್ಯ ದಂಧೆ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಿಂದ ಎಲ್ಲರ ಬಣ್ಣವೂ ಬಯಲಾಗಲಿದೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪ ಸಾಬೀತಾಗುವ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಕೋಲಾರ; 5 ವರ್ಷದ ಮಗಳ ಕೊಂದು ನೇಣಿಗೆ ಶರಣಾದ ಅರ್ಚಕರ ಪತ್ನಿ

ಅಲ್ಲದೆ, ಡ್ರಗ್ಸ್‌ ದಂಧೆಯ ಪ್ರಕರಣಗಳು ಕಳೆದ 10 ವರ್ಷದಿಂದಲೂ ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಆದರೆ ಯಾವ ಸರ್ಕಾರಗಳೂ ಬಿಗಿ ಕ್ರಮಗಳನ್ನು ಕೈಗೊಳ್ಳದೆ ಕೈಕಟ್ಟಿಕುಳಿತಿದ್ದವು. ಸಮಾಜಕ್ಕೆ ಹಾನಿಯಾಗುವ ಯಾವುದನ್ನೂ ನಾವು ಸಹಿಸುವುದಿಲ್ಲ. ಹೀಗಾಗಿ ಸಮಗ್ರವಾಗಿ ತನಿಖೆ ನಡೆಸುತ್ತಿದ್ದೇವೆ. ಹೀಗಾಗಿ ಹಲವರ ಬಣ್ಣ ಬಯಲಾಗಲಿದೆ ಎಂದರು.