ದರೋಡೆ ಪ್ರಕರಣ: ಸ್ಯಾಂಟ್ರೋ ರವಿ ಪತ್ನಿಗೆ ಕ್ಲೀನ್‌ಚಿಟ್?
ವೈಯಕ್ತಿಕ ದ್ವೇಷದಿಂದ ಪತಿ ನಡೆಸಿದ ಪಿತೂರಿಯಿಂದಾಗಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲಾಗಿದ್ದಕ್ಕೆ ಸಿಸಿಬಿ ತನಿಖೆಯಲ್ಲಿ ಪೂರಕ ಸಾಕ್ಷ್ಯಗಳು ಲಭ್ಯವಾಗಿವೆ. ಆಗಿನ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣ್ ಕರ್ತವ್ಯ ಲೋಪ ಎಸಗಿರುವುದು ಸಹ ಸಾಬೀತು.
ಬೆಂಗಳೂರು(ಮೇ.18): ಕುಖ್ಯಾತ ವಂಚಕ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ಎರಡನೇ ಪತ್ನಿ ವಿರುದ್ಧದ ದರೋಡೆ ಪ್ರಕರಣದ ತನಿಖೆ ಮುಕ್ತಾಯಗೊಳಿಸಿರುವ ಸಿಸಿಬಿ, ಈ ಸಂಬಂಧ ಶೀಘ್ರದಲ್ಲೇ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಚ್ ಅನ್ನು ಸಲ್ಲಿಸಲು ಅಂತಿಮ ಹಂತದ ಸಿದ್ಧತೆ ನಡೆಸಿದೆ. ಈ ಪ್ರಕರಣದಲ್ಲಿ ರವಿ ಪತ್ನಿಗೆ ಸಿಸಿಬಿ ಕ್ಲೀನ್‌ಚೀಟ್ ನೀಡಲಿದೆ ಎನ್ನಲಾಗಿದೆ.
ವೈಯಕ್ತಿಕ ದ್ವೇಷದಿಂದ ಪತಿ ನಡೆಸಿದ ಪಿತೂರಿಯಿಂದಾಗಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲಾಗಿದ್ದಕ್ಕೆ ಸಿಸಿಬಿ ತನಿಖೆಯಲ್ಲಿ ಪೂರಕ ಸಾಕ್ಷ್ಯಗಳು ಲಭ್ಯವಾಗಿವೆ. ಆಗಿನ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣ್ ಕರ್ತವ್ಯ ಲೋಪ ಎಸಗಿರುವುದು ಸಹ ಸಾಬೀತಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ ಪಾತ್ರ ವಹಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಆತನ ಕೆಲವು ವಿಡಿಯೋಗಳು ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿತ್ತು. ಅತ್ಯಾಚಾರ ಹಾಗೂ ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿದ ಆರೋಪದ ಮೇರೆಗೆ ಆತನ ಪತ್ನಿ ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್‌ನಲ್ಲಿ ಮೈಸೂರು ಪೊಲೀಸರು ಬಂಧಿಸಿ ಕರೆ ತಂದಿದ್ದರು. ಬಳಿಕ 2022ರ ನವೆಂಬರ್‌ನಲ್ಲಿ ಆತನ ಪತ್ನಿ ಹಾಗೂ ನಾದಿನಿ ಮೇಲೆ ಬೆಂಗಳೂರಿನ ಕಾಟನ್‌ಪೇಟೆ ಠಾಣೆಯಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲಾಗಿದ್ದ ಸಂಗತಿ ಬಯಲಾಗಿತ್ತು. ಈ ಸಂಬಂಧ ಅಂದಿನ ಕಾಟನ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಪ್ರವೀಣ್ ಅವರನ್ನು ಡಿಜಿಪಿ ಪ್ರವೀಣ್ ಸೂದ್ ಅಮಾನತುಗೊಳಿಸಿದ್ದರು. ಈ ಸುಳ್ಳು ದರೋಡೆ ಆರೋಪದ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ, ಕೊನೆಗೆ ರವಿ ಪತ್ನಿ ಹಾಗೂ ನಾದಿನಿಯನ್ನು ದೋಷಮುಕ್ತಗೊಳಿಸಿದೆ ಎನ್ನಲಾಗಿದೆ.
ಸ್ಯಾಂಟ್ರೋ ವಿರುದ್ಧ ಮತ್ತೊಂದು ಕೇಸ್?
ದರೋಡೆ ಪ್ರಕರಣದಲ್ಲಿ ಸಿಸಿಬಿ ‘ಬಿ’ ರಿಪೋರ್ಚ್ ಸಲ್ಲಿಸಿದ ಬಳಿಕ ರವಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ದರೋಡೆ ಪ್ರಕರಣದಲ್ಲಿ ರವಿಯನ್ನು ಪೊಲೀಸರು ತನಿಖೆಗೆ ಒಳಪಡಿಸಿಲ್ಲ. ಈ ಕೃತ್ಯದಲ್ಲಿ ಆತನ ವಿಚಾರಣೆಗೆ ತಾಂತ್ರಿಕ ತೊಡಕು ಎದುರಾಗಿತ್ತು. ಹೀಗಾಗಿ ಎರಡನೇ ಪತ್ನಿ ದೂರು ಆಧರಿಸಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.