ಬೆಂಗಳೂರು(ಆ.07):  ಕೊರೋನಾ ಸೋಂಕು ತಗುಲಿದ್ದರಿಂದ ಬೇಸರಗೊಂಡು ಬಿಬಿಎಂಪಿ ಪೌರ ಕಾರ್ಮಿಕನೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದೆ.

ಆರ್‌ಪಿಸಿ ಲೇಔಟ್‌ ನಿವಾಸಿ ರಂಗನಾಥ್‌ (44) ಮೃತ ದುರ್ದೈವಿ. ಕೈಗಾರಿಕಾ ಪ್ರದೇಶದಲ್ಲಿರುವ ತನ್ನ ಸ್ನೇಹಿತನ ಮನೆಗೆ ಬಂದು ರಂಗನಾಥ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಆತನ ಸ್ನೇಹಿತ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಹಲವು ದಿನಗಳಿಂದ ಬಿಬಿಎಂಪಿ ಕಚೇರಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರಂಗನಾಥ್‌, ತನ್ನ ಕುಟುಂಬದ ಜತೆ ಆರ್‌ಪಿಸಿ ಲೇಔಟ್‌ನಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಸೋಂಕು ದೃಢವಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಬುಧವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ತಮಗೆ ಸೋಂಕು ತಗುಲಿರುವ ವಿಚಾರವನ್ನು ಕುಟುಂಬದವರಿಗೆ ತಿಳಿಸದೆ ಗೌಪ್ಯವಾಗಿಟ್ಟಿದ್ದ ರಂಗನಾಥ್‌, ಆಸ್ಪತ್ರೆಯಿಂದ ಬಿಡುಗಡೆ ಮಾಡದಂತೆ ಸಹ ಮನವಿ ಮಾಡಿದ್ದರು. ಈ ಕೋರಿಕೆಯನ್ನು ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ, ‘ನಿಮ್ಮಲ್ಲಿ ರೋಗದ ಲಕ್ಷಣಗಳು ಕಡಿಮೆಯಾಗಿದೆ. ಸಾಕಷ್ಟು ಚೇತರಿಕೆ ಕಂಡಿದ್ದೀರಾ’ ಎಂದು ಹೇಳಿ ಕಳುಹಿಸಿದ್ದರು.

ಒಲ್ಲದ ಮನಸ್ಸಿನಿಂದಲೇ ಮಧ್ಯಾಹ್ನ ಮನೆಗೆ ಮರಳಿದ ರಂಗನಾಥ್‌, ಕೆಲ ಹೊತ್ತಿನಲ್ಲಿ ಸ್ನೇಹಿತರ ಭೇಟಿಯಾಗಿ ಬರುವುದಾಗಿ ಕುಟುಂಬದವರಿಗೆ ತಿಳಿಸಿ ಮನೆಯಿಂದ ಹೊರ ಬಂದಿದ್ದಾರೆ. ಅಲ್ಲಿಂದ ಸೀದಾ ಕೈಗಾರಿಕಾ ಪ್ರದೇಶದಲ್ಲಿದ್ದ ಗೆಳೆಯನ ಕೊಠಡಿಗೆ ಬಂದಿದ್ದಾರೆ. ಆ ವೇಳೆ ಕೆಲಸದ ನಿಮಿತ್ತ ಅವರ ಸ್ನೇಹಿತ ಹೊರ ಹೋಗಿದ್ದರು. ಆಗ ನೇಣು ಬಿಗಿದುಕೊಂಡು ರಂಗನಾಥ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.