ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್, ಆಡಳಿತಾಧಿಕಾರಿ ವಿರುದ್ಧ ರೇಪ್ ಕೇಸ್
ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಪೋಕ್ಸೋ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಇದೀಗ ಮಹಿಳಾ ವಾರ್ಡನ್ ಮಠದ ಆಡಳಿತಾಧಿಕಾರಿ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದಾರೆ.
ಚಿತ್ರದುರ್ಗ, (ಆಗಸ್ಟ್.27): ಕರ್ನಾಟಕದ ಪ್ರತಿಷ್ಠಿತ ಮಠ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಶರಣರ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಸ್ವಾಮೀಜಿ ಸೇರಿ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ತೀವ್ರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇನ್ನು ಈ ಕೇಸ್‌ನಲ್ಲಿ ಒಂದು ಸಣ್ಣ ಟ್ವಿಸ್ಟ್ ಸಿಕ್ಕಿದೆ.
ಮೈಸೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮಠದ ಹಾಸ್ಟೆಲ್ ಮಹಿಳಾ ವಾರ್ಡನ್ ಇದೀಗ ಮಠದ ಆಡಳಿತಾಧಿಕಾರಿ ಬಸವರಾಜನ್ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದಾರೆ. ಇದರ ಅನ್ವಯ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಸವರಾಜನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನ್ನನ್ನು ಅತ್ಯಾಚಾರ ಮಾಡಲು ಬಸವರಾಜನ್ ಯತ್ನಿಸಿದ್ದಾರೆಂದು ವಾರ್ಡನ್ ಆರೋಪಿಸಿದ್ದಾರೆ.
ಮುರುಘಾ ಮಠ ಶ್ರೀಗಳಿಂದ ಲೈಂಗಿಕ ದೌರ್ಜನ್ಯ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ಮಠದ ಆಡಳಿತಾಧಿಕಾರಿ ವಿರುದ್ಧ ರೇಪ್ ಕೇಸ್
ಎಸ್.ಕೆ.ಬಸವರಾಜನ್ ವಿದ್ಯಾರ್ಥಿ ನಿಲಯದ ತಪಾಸಣೆ ನೆಪದಲ್ಲಿ ಮಹಿಳಾ ನಿಲಯ ಪಾಲಕರಾದ ತಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ದಿನಾಂಕ:27.07.2022 ರಂದು ಸಂಜೆ 6.00 ಗಂಟೆ ವೇಳೆಗೆ ವಿದ್ಯಾರ್ಥಿ ನಿಲಯದಲ್ಲಿ ಯಾರು ಇಲ್ಲದ ಸಮಯದಲ್ಲಿ ತನ್ನ ದೇಹದ ಅಂಗಾಂಗಳನ್ನು ಮುಟ್ಟಿ, ಎಳೆದಾಡಿ ತಬ್ಬಿಕೊಂಡು ಬಲಾತ್ಕರಿಸಲು ಪ್ರಯತ್ನಿಸಿದ್ದರು. ತಾನು ವಿರೋಧಿಸಿದಾಗ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ವಾರ್ಡನ್ ರಶ್ಮೀ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುರುಘಾಮಠ ಬಾಲಕಿಯರ ವಸತಿ ನಿಲಯದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ದಿನಾಂಕ:24.07.2022 ರಂದು ವಸತಿ ನಿಲಯದ ಗೇಟ್ ಪಾಸ್ ಪಡೆದು ಹೊರಗೆ ಹೋಗಿರುತ್ತಾರೆ. ಹೊರಗೆ ಹೋದ ಅಪ್ರಾಪ್ತ ಬಾಲಕಿಯರು ಅದೇ ದಿನ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಾಜರ್ ಆಗಿದ್ದಾರೆ. ಬಳಿಕ ಕಾಟನ್‌ಪೇಟೆ ಪೊಲೀಸ್ ಠಾಣೆಯವರು ಮುರುಘಾಮಠಕ್ಕೆ ಮತ್ತು ಎಸ್.ಕೆ.ಬಸವರಾಜನ್ ರವರಿಗೆ ಮಾಹಿತಿ ನೀಡಿದ್ದಾರೆ.
ನಂತರ ಎಸ್.ಕೆ.ಬಸವರಾಜನ್ ಮತ್ತು ಅವರ ಪತ್ನಿ ಶ್ರೀಮತಿ ಸೌಭಾಗ್ಯ ಬಸವರಾಜನ್ ಕಾಟನ್ ಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ದಿನಾಂಕಃ25.07.2022 ರಂದು ಬೆಳಿಗ್ಗೆ 5.00 ಗಂಟೆಗೆ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಿಂದ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿನಿಯರನ್ನು ತಮ್ಮ ವಶಕ್ಕೆ ಪಡೆದ ದಂಪತಿಗಳು ವಿದ್ಯಾರ್ಥಿನಿಯರ ಪೋಷಕರಿಗೆ ಅಥವಾ ವಿದ್ಯಾರ್ಥಿನಿಲಯಕ್ಕೆ ಒಪ್ಪಿಸದೆ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಅನಧಿಕೃತವಾಗಿ 27.07.2022 ರವರೆಗೆ ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಆರೋಪ ಮಾಡಿದ್ದಾರೆ.
ಈ ಪ್ರಕರಣದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಮಠದ ಪರ ಬ್ಯಾಟಿಂಗ್ ಮಾಡುತ್ತಿದ್ರೆ, ಮತ್ತೊಂದೆಡೆ ಕೆಲವರು ಸ್ವಾಮೀಜಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಇನ್ನೂ ಎಲವರು ಇದರ ನಿಜವಾದ ಸತ್ಯಾಸತ್ಯತೆ ಅರಿತು ಕ್ರಮಕೈಗೊಳ್ಳಲಿ ಎನ್ನುತ್ತಿದ್ದಾರೆ.