ಅಪಘಾತಕ್ಕೀಡಾದ ಟ್ರಕ್ ಮುಂಬೈಗೆ ತೆರಳುತ್ತಿದ್ದರೆ, ಮೃತ ಸಂತ್ರಸ್ಥರೆಲ್ಲ ಸಂಬಂಧಿಕರಾಗಿದ್ದು, ಇವರು ವ್ಯಾನ್‌ನಲ್ಲಿ ರತ್ನಗಿರಿ ಜಿಲ್ಲೆಯ ಗುಹಾಗರ್‌ಗೆ ಹೋಗುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.
ಮುಂಬೈ (ಜನವರಿ 19, 2023): ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಗೋವಾ ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತವಾಗಿದೆ. ವೇಗವಾಗಿ ಚಲಾಯಿಸುತ್ತಿದ್ದ ಟ್ರಕ್ ವ್ಯಾನಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದು ಮಗು, ಮೂವರು ಮಹಿಳೆಯರು ಸೇರಿದಂತೆ 9 ಜನ ದುರ್ಮರಣಕ್ಕೀಡಾಗಿದ್ದಾರೆ. ಅಲ್ಲದೆ, ಅಪಘಾತದಲ್ಲಿ ಮತ್ತೊಂದು ಮಗುವಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಇಂದು ಮುಂಜಾನೆ 4. 45ರ ಸುಮಾರಿಗೆ ಮುಂಬೈ-ಗೋವಾ ಹೆದ್ದಾರಿಯ ಮಂಗಾವ್ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂಬೈನಿಂದ 130 ಕಿ.ಮೀ ದೂರದಲ್ಲಿರುವ ರಾಯಗಢದ ರೆಪೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಪಘಾತಕ್ಕೀಡಾದ ಟ್ರಕ್ ಮುಂಬೈಗೆ ತೆರಳುತ್ತಿದ್ದರೆ, ಮೃತ ಸಂತ್ರಸ್ಥರೆಲ್ಲ ಸಂಬಂಧಿಕರಾಗಿದ್ದು, ಇವರು ವ್ಯಾನ್‌ನಲ್ಲಿ ರತ್ನಗಿರಿ ಜಿಲ್ಲೆಯ ಗುಹಾಗರ್‌ಗೆ ಹೋಗುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ. ಈ ಅಪಘಾತದಲ್ಲಿ 9 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಣ್ಣು ಮಗು, ಮೂವರು ಮಹಿಳೆಯರು ಮತ್ತು ಐದು ಪುರುಷರು ಸೇರಿದ್ದಾರೆ ಎಂದೂ ಅಧಿಕಾರಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅವರು ಹೇಳಿದರು. ಮೃತರೆಲ್ಲ ಗುಹಾಗರ್‌ನ ಹೆಡ್ವಿ ಗ್ರಾಮದವರು ಎಂದೂ ತಿಳಿದುಬಂದಿದೆ.
ಇದನ್ನು ಓದಿ: ನೇಪಾಳ ವಿಮಾನ ಅಪಘಾತದಲ್ಲೇ ಬಲಿಯಾದ ಪೈಲಟ್ ದಂಪತಿ..!
ಅಪಘಾತದಲ್ಲಿ ಗಾಯಗೊಂಡ ಮತ್ತೊಬ್ಬ ಬಾಲಕನನ್ನು ಮಂಗಾಂವ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಸಂಪೂರ್ಣ ಜಖಂ ಆಗಿದ್ದು, ಆ ಕಾರಿನ ಸ್ಥಿತಿಯನ್ನು ನೋಡಿದರೆ ಅಪಘಾತದ ತೀವ್ರತೆಯನ್ನು ಅಂದಾಜು ಮಾಡಬಹುದಾಗಿದೆ. ಇನ್ನು, ಅಪಘಾತಕ್ಕೀಡಾದ ಮುಂಬೈ - ಗೋವಾ ಹೆದ್ದಾರಿಯಲ್ಲಿ ಸಂಚಾರ ಪುನಾರಂಭಗೊಂಡಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ನೇಪಾಳ ವಿಮಾನ ದುರಂತ: ಫೇಸ್‌ಬುಕ್ ಲೈವ್ ಮಾಡುವಾಗ ಅಪಘಾತ.!
