ಹನಿಮೂನ್‌ ಮೂಡ್‌ನಲ್ಲಿದ್ದ ಹುಡುಗ ರಾತ್ರಿ ಬೆಳಗಾಗುವಷ್ಟರಲ್ಲಿ ಅಣ್ಣನಾಗಿ ಹೋದ!

ಮೊದಲಿಗೆ ಪ್ರೇಮಿಯ ಜೊತೆ ಮದುವೆ. ಆದರೆ, ಹುಡುಗ ತಮ್ಮ ಜಾತಿಯವನಲ್ಲ ಎನ್ನುವ ಕಾರಣಕ್ಕೆ, ಮಗಳಿಗೆ ಅಪ್ಪ ಇನ್ನೊಂದು ಮದುವೆ ಮಾಡಿದ. ಆದರೆ, ಸಿಟ್ಟಿಗೆದ್ದ ಮಗಳು 2ನೇ ಗಂಡನಿಗೆ ರಾಖಿ ಕಟ್ಟಿದ್ದಲ್ಲದೆ, ಸಹಾಯಕ್ಕಾಗಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಬಾಲಿವುಡ್‌ ನಟ ಸೋನು ಸೂದ್‌ಗೆ ಮೊರೆ ಇಟ್ಟಿದ್ದಾರೆ.
 

Chhattisgarh father forced daughter to marry in anger tied the rakhi to the second husband san

ನವದೆಹಲಿ (ಜೂ.12): ಬಾಲ್ಯದಿಂದಲೂ ಪ್ರೀತಿ ಮಾಡ್ತಿದ್ದ ನೆರೆಮನೆಯ ಹುಡುಗನ ಜೊತೆ ಆಕೆ ಓಡಿಹೋಗಿ ವಿವಾಹ ಮಾಡಿಕೊಂಡಿದ್ದರು. ಅದರೆ, ಅಳಿಯ ತಮ್ಮ ಜಾತಿಯವನಲ್ಲ ಎನ್ನುವ ಕಾರಣಕ್ಕಾಗಿ ಸಿಟ್ಟಾಗಿದ್ದ ಅಪ್ಪ, ಊರೂರು ಅಲೆದಾಡಿ ಮಗಳನ್ನು ಹುಡುಕಿ ಕರೆತಂದಿದ್ದಲ್ಲದೆ, ಆಕೆಗೆ 2ನೇ ಮದುವೆಯನ್ನೂ ಮಾಡಿದ್ದ. ಆದರೆ, 2ನೇ ಪತಿಗೆ ಆಕೆ ರಾಖಿ ಕಟ್ಟುವ ಮೂಲಕ ಅಣ್ಣ-ತಂಗಿಯ ಬಾಂಧವ್ಯ ಬೆಸೆದಿದ್ದಾಳೆ. ಇನ್ನೇನು ಹನಿಹೂನ್‌ಗೆ ಹೋಗುವ ಮೂಡ್‌ನಲ್ಲಿದ್ದ ಹುಡುಗ ರಾತ್ರೋರಾತ್ರಿ ತನ್ನ ಹೆಂಡತಿಗೆ ಅಣ್ಣನಾಗಿ ಹೋಗಿದ್ದಾನೆ. ಇನ್ನು ಆಕೆ ತನ್ನನ್ನು ರಕ್ಷಿಸುವಂತೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಬಾಲಿವುಡ್‌ ನಟ ಸೋನು ಸೂದ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಮನವಿ ಮಾಡಿದ್ದಾಳೆ. ಇದರ ಬೆನ್ನಲ್ಲಿಯೇ ಪೊಲೀಸರು ಅಕೆಯನ್ನು ರಕ್ಷಿಸಿದ್ದು, ಸಖಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಬಾಲಾಸೇರ್‌ ಜಿಲ್ಲೆಯ 22 ವರ್ಷದ ತಾರುಣಾ ಶರ್ಮ ಅವರ ಜೀವನದಲ್ಲಿ ಇಂಥ ಘಟನೆಗಳು ನಡೆದಿವೆ. ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯ ಅಂತಗರ್‌ನ ಜೀತೇಂದ್ರ ಶರ್ಮ ಎನ್ನುವ ಹುಡುಗನೊಂದಿಗೆ ತಾರುಣಾ ಶರ್ಮಳ 2ನೇ ವಿವಾಹ ನೆರವೇರಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಆಕೆಯ ದೂರಿನ ಮೇರೆಗೆ ಅಂತಗರ್‌ ಪೊಲೀಸರು ಆಕೆಯ ಮನೆಯ ಮೇಳೆ ದಾಳಿ ನಡೆಸಿ ಸಖಿ ಕೇಂದ್ರಕ್ಕೆ ತಂದಿದ್ದಾರೆ, ಎಂದು ಸಖಿ ಕೇಂದ್ರದ ಇನ್‌ಚಾರ್ಜ್‌ ಪ್ರೀತಿ ತಿವಾರಿ ತಿಳಿಸಿದ್ದಾರೆ.

ಮೊದಲ ಮದುವೆಯನ್ನು ಒಪ್ಪಂದ ತಾರುಣಾ ತಂದೆ: ಹೊಸದಾಗಿ ಮದುವೆಯಾಗಿದ್ದ ಜೀತೇಂದ್ರ ಶರ್ಮಾ ಅವರ ನಿವಾಸಕ್ಕೆ ದಾಳಿ ಮಾಡಿದ ಅಂತಗರ್‌ ಪೊಲೀಸರು, ತಾರುಣಾ ಶರ್ಮರನ್ನು ಕಾಪಾಡಿದ್ದಾರೆ. ಈ ಕುರಿತಾಗಿ ವಿಚಾರಣೆ ನಡೆಸುವಂತೆಯೂ ತಿಳಿಸಿದ್ದಾರೆ. ಇನ್ನೊಂದೆಡೆ ಜೀತೇಂದ್ರ ಶರ್ಮ ಅವರ ಕುಟುಂಬಕ್ಕೆ ತಾವು ಕರೆತಂದಿರುವ ಸೊಸೆಗೆ ಈಗಾಗಲೇ ಕಾನೂನುಬದ್ಧವಾಗಿ ಮದುವೆಯಾಗಿದೆ ಎನ್ನುವ ವಿಚಾರವವೂ ಇದೆಲ್ಲ ಘಟನೆ ಆದ ಬಳಿಕವೇ ಗೊತ್ತಾಗಿದೆ. ಮದುವೆಯ ವೇಳೆ ತಾರುಣಾ ಶರ್ಮ ತಂದೆ ಇದನ್ನು ಮುಚ್ಚಿಟ್ಟಿದ್ದರು. ತಾರುಣಾಳ ಮೊದಲ ಪತಿ ಬೇರೆ ಜಾತಿಯ ಹುಡುಗ ಎನ್ನುವ ಕಾರಣಕ್ಕೆ ಅಳಿಯನನ್ನು ಒಪ್ಪಿಕೊಂಡಿರಲಿಲ್ಲ.

ಮೊದಲ ಪತಿ ಸುರೇಂದ್ರ ಸಂಖ್ಲಾ ಈ ಬಗ್ಗೆ ಮಾತನಾಡಿದ್ದು, ತಾರುಣಾ ಶರ್ಮಾ ತನ್ನ ಬಾಲ್ಯದ ಪ್ರೀತಿ ಎಂದಿದ್ದಾರೆ. ನಾವು ಬಾಲ್ಯದಿಂದಲೂ ಒಟ್ಟಿಗೆ ಆಡಿದ್ದೇವೆ ಮತ್ತು ಓದಿದ್ದೇವೆ. ನಾವಿಬ್ಬರೂ ಎಂಎ ವರೆಗೆ ಓದಿದ್ದೇವೆ. ತಾರುಣಾ ಹಾಗೂ ನನ್ನದು ಬೇರೆ ಬೇರೆ ಜಾತಿ. ಆಕೆಯ ತಂದೆ ನನ್ನನ್ನು ಅಳಿಯನನ್ನಾಗಿ ಒಪ್ಪಿರಲಿಲ್ಲ. ತಾರುಣಾಳ ಒಪ್ಪಿಗೆ ಇಲ್ಲದೆ, ರಾಜಸ್ಥಾನದಲ್ಲಿ ಕ್ರಿಮಿನಲ್‌ ಹಿನ್ನಲೆ ಹೊಂದಿದ್ದ ಯುವಕನೊಂದಿಗೆ ಎಂಗೇಜ್‌ಮೆಂಟ್‌ ಕೂಡ ಮಾಡಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಆ ವ್ಯಕ್ತಿ 6 ತಿಂಗಳ ಕಾಲ ಜೈಲಿನಲ್ಲಿದ್ದ ಎಂದಿದ್ದಾರೆ.

2023ರ ಜನವರಿ 25 ರಂದು ಈಕೆಯ ಮದುವೆ ನಿಶ್ಚಯವಾಗಿತ್ತು. ಆದರೆ, ಜನವರಿ 11 ರಂದು ತಾರುಣಾ ನನ್ನ ಬಳಿ ಬಂದಿದ್ದಳು. ನಾವು ಜನವರಿ 13 ರಂದು ರಿಜಿಸ್ಟರ್‌ ಮ್ಯಾರೇಜ್‌ ಮಾಡಿಕೊಂಡಿದ್ದೆವು. ಆದರೆ, ಆಕೆಯ ಕುಟುಂಬದ ಕಾರಣದಿಂದಾಗಿ ನಾವು ತಲೆಮರೆಸಿಕೊಂಡು ಓಡಾಡುತ್ತಿದ್ದೆವು. ಜೋಧಪುರ ಪೊಲೀಸ್‌ ಠಾಣೆಯಿಂದ ಭದ್ರತೆಯನ್ನೂ ಕೇಳಿದ್ದವು. ಆದರೆ, ಅವರು ನಮಗೆ ಭದ್ರತೆ ನೀಡಿರಲಿಲ್ಲ. ನಮ್ಮನ್ನು ಬಾಲಸೋರ್‌ ಸ್ಟೇಷನ್‌ಗೆ ಕಳಿಸಿದ್ದರು. ಅಲ್ಲಿ 12 ಗಂಟೆಗಳ ಕಾಲ ನಮ್ಮನ್ನು ಇರಿಸಿಕೊಂಡು ಹೇಳಿಕೆ ಪಡೆದುಕೊಂಡಿದ್ದರು. ಇದೇ ಠಾಣೆಯಲ್ಲಿ ತಾರುಣಾ ಮೇಲೆ ಹಲ್ಲೆಯೂ ಆಗಿತ್ತಲ್ಲದೆ, ಆಕೆಯನ್ನು ಅವರ ಕುಟುಂಬ ಕರೆದುಕೊಂಡು ಹೋಗಿತ್ತು.. ಆ ನಂತರವೂ ತಾರುಣಾಗೆ ಚಿತ್ರಹಿಂಸೆ ನೀಡಿದ್ದರು. ವಿಚ್ಛೇದನವೇ ಇಲ್ಲದೆ 2023ರ ಮೇ 1 ರಂದು ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯ ಜೀತೇಂದ್ರ ಶರ್ಮ ಎನ್ನುವ ಹುಡುಗನೊಂದಿಗೆ ಆಕೆಯ 2ನೇ ಮದುವೆ ಮಾಡಲಾಗಿತ್ತು ಎಂದಿದ್ದಾರೆ.

ಇನ್ನೊಂದೆಡೆ ತಾರುಣಾ ಶರ್ಮ, ಕಳೆದ ಐದು ತಿಂಗಳಲ್ಲಿ ನನ್ನ ಕುಟುಂಬ ರಾಜಸ್ಥಾ, ಗುಜರಾತ್‌ನ ವಿವಿಧ ನಗರಗಳಲ್ಲಿ ನನ್ನನ್ನು ಜೈಲಿನ ಕೈದಿಯಂತೆ ಇರಿಸಿಕೊಂಡಿತ್ತು ಎಂದು ಆರೋಪಿಸಿದ್ದಾರೆ. ನನಗೆ ಮೊಬೈಲ್‌ ನೀಡಿರಲಿಲ್ಲ. ನನ್ನ ಜತೆ ಯಾರಿಗೂ ಮಾತನಾಡುವ ಅವಕಾಶ ನೀಡುತ್ತಿರಲಿಲ್ಲ.  ಏಪ್ರಿಲ್‌ನಲ್ಲಿ ಸಂಬಂಧಿಕರೊಬ್ಬರ ಮೂಲಕ ಮಾಹಿತಿ ಪಡೆದು ನನ್ನನ್ನು ರಾಯ್‌ಪುರಕ್ಕೆ ಕರೆತರಲಾಗಿತ್ತು. ಇಲ್ಲಿ ಜೀತೇಂದ್ರ ಶರ್ಮ ಎನ್ನುವ ವ್ಯಕ್ತಿಯ ಜೊತೆ ಮದುವೆ ನಿಶ್ಚಯವಾಗಿತ್ತು. ಅಂತಗರದಲ್ಲಿಯೇ  ಮದುವೆಯನ್ನೂ ಮಾಡಿಕೊಡಲಾಗಿತ್ತು. ಎರಡು ದಿನಗಳ ಹಿಂದೆ, ಈಕೆಯನ್ನು ರಾಯ್‌ಪುರದ ಏಮ್ಸ್‌ನಲ್ಲಿ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಇಲ್ಲಿ ಬಾಲಕಿಯೊಬ್ಬಳ ಮೊಬೈಲ್‌ ಪಡೆದು ತನ್ನ ಮೊದಲ ಪತಿಗೆ ಸಂದೇಶ ಕಳಿಸಿರುವ ತಾರುಣಾ, ಟ್ವಿಟರ್‌ನಲ್ಲೂ ಈ ಕುರಿತಾಗಿ ದೂರು ಬರೆದಿದ್ದಾರೆ. ಇದಾದ ಬಳಿಕವೇ ಇಡೀ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಪತ್ನಿಯನ್ನು ಕರೆದುಕೊಂಡು ಹೋಗಲು ಜೀತೇಂದ್ರ ಶರ್ಮ ಬಂದಾಗ ಆತನ ಜೊತೆ ಹೋಗಲು ತಾರುಣಾ ನಿರಾಕರಿಸಿದ್ದಾರೆ.

ಮಾವನ 3 ಕಂಡೀಷನ್‌ ಕೇಳಿ, 'ನಿನ್‌ ಮಗಳೇ ಬೇಡ..' ಎಂದು ಎಸ್ಕೇಪ್‌ ಆದ ವರ!

'ನನಗೆ ಈಗಾಗಲೇ ಮದುವೆಯಾಗಿದೆ. ಒತ್ತಾಯದಿಂದ ನನ್ನ ಕುಟುಂಬ 2ನೇ ಮದುವೆ ಮಾಡಿದೆ. ಯಾವುದೇ ಬೇಸರವಿಲ್ಲದೆ 2ನೇ ಮದುವೆಯಾಗಿದ್ದೇನೆ ಎಂದು ಊರಿನವರಿಗೆ ತೋರಿಸಲು ಇಡೀ ಪೊಲೀಸರನ್ನೇ ಬಾಲಾಸೋರ್‌ನ ನಮ್ಮ ಮನೆಗೆ ಕರೆತರಲಾಗಿತ್ತು. ಅಲ್ಲಿಯೇ ಪೇಪರ್‌ಗೆ ಸಹಿ ಕೂಡ ಹಾಕಿಸಿಕೊಳ್ಳಲಾಗಿತ್ತು. ಈಗ ನನ್ನ ಮನೆಗೂ ಹೋಗೋದಿಲ್ಲ, ಕಂಕೇರ್‌ನಲ್ಲಿರುವ 2ನೇ ಪತಿಯ ಮನೆಗೂ ಹೋಗೋದಿಲ್ಲ. ನನ್ನ 2ನೇ ಪತಿಗೆ ನನ್ನ ಮೊದಲ ಮದುವೆಯ ಬಗ್ಗೆ ತಿಳಿಸಿದ್ದೇನೆ. ಆತನಿಗೆ ರಾಖಿಯನ್ನೂ ಕೂಡ ಕಟ್ಟಿದ್ದೇನೆ. ಆ ಬಳಿಕ ಈತ ಒಮ್ಮೊಮ್ಮೆ ನನ್ನನ್ನು ತಂಗಿ ಎಂತಲೂ ಇನ್ನೊಮ್ಮೆ ಆಂಟಿ ಎಂದೂ ಕರೆಯುತ್ತಾನೆ. ಈಗ ನಾನು ಮೊದಲ ಪತಿಯ ಜೊತೆಗೆ ಹೋಗುತ್ತೇನೆ' ಎಂದು ತಾರುಣಾ ಹೇಳಿದ್ದಾರೆ.

Bengaluru: ಮದ್ವೆಗೆ ಮುಂಚೆ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಜೋಡಿ ದಾರುಣ ಸಾವು

ಈ ಬಗ್ಗೆ ಮಾತನಾಡಿರುವ ಜೀತೇಂದ್ರ, 'ತಾರುಣಾ ವಿವಿಧ ರೀತಿಯಲ್ಲಿ ನನಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾಳೆ. ಗಾಜಿನ ಬಳೆಯನ್ನು ಜಜ್ಜಿ ನುಂಗುವ ಪ್ರಯತ್ನ ಮಾಡಿದ್ದಳು. ಆಕೆಯ ಹೃದಯ ಗೆಲ್ಲುವ ಸಲುವಾಗಿ, ರಾಖಿ ಕಟ್ಟುತ್ತೇನೆ ಎಂದಾಗ ಕಟ್ಟಿಸಿಕೊಂಡಿದ್ದೇನೆ. ಆಕೆಯನ್ನೂ ಎಂದೂ ತಂಗಿ ಎಂದಾಗಲಿ ಆಂಟಿ ಎಂದಾಗಲಿ ಕರೆದಿಲ್ಲ. ನನಗೆ ಮಾತುಗಳೇ ಬರುತ್ತಿಲ್ಲ. ನನ್ನನ್ನು ಸಿಕ್ಕಿ ಹಾಕಿಸಲಾಗಿದೆ. ನನ್ನ ಇಡೀ ಜೀವನ ಹಾಳಾಗಿದೆ. ಒಮ್ಮೊಮ್ಮೆ ನಾನು ಒತ್ತಾಯಪೂರ್ವಕವಾಗಿ ಮದುವೆ ಆಗಿಲ್ಲ ಎನ್ನುತ್ತಾಳೆ' ಎಂದು ತಿಳಿಸಿದ್ದಾರೆ.

ರಾಯ್‌ಪುರದಿಂದ ಮಾಹಿತಿ ಪಡೆದು ಸಖಿ ಕೇಂದ್ರದ ಮಾಹಿತಿ ಮೇರೆಗೆ ಮಹಿಳೆಯನ್ನು ಅಲ್ಲಿಂದ ಕರೆತರಲಾಯಿತು ಎಂದು ಅಂತಗರ ಪೊಲೀಸ್ ಠಾಣೆ ಪ್ರಭಾರಿ ರೋಷನ್ ಕೌಶಿಕ್ ತಿಳಿಸಿದ್ದಾರೆ. ಮಹಿಳೆಯನ್ನು ಕಂಕೇರ್‌ನ ಸಖಿ ಕೇಂದ್ರದಲ್ಲಿ ಇರಿಸಲಾಗಿದೆ.

Latest Videos
Follow Us:
Download App:
  • android
  • ios