ಚಾಮರಾಜನಗರದಲ್ಲಿ ಪತಿಯೊಬ್ಬ ಪತ್ನಿಯ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಪತ್ನಿ ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದಂತೆ ಆರೋಪಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಚಾಮರಾಜನಗರ (ಜೂ.4): ಪತ್ನಿಯ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ರೋಸಿ ಹೋಗಿದ್ದ ಪತಿ ಪಟ್ಟಣ ಠಾಣೆಗೆ ಪತಿ ವಿರುದ್ದವೇ ದೂರು ನೀಡಿ ವಾಪಸ್ ಬರುತ್ತಿದ್ದ ಪತ್ನಿಯ ಮೇಲೆ ಎರಗಿ ಹಾಡಹಗಲೇ ಕುಡುಗೋಲಿನಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಚಾ.ನಗರದಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಸೋಮವಾರಪೇಟೆಯ ನಿವಾಸಿ ಮಹದೇವಪ್ಪ ಮಗ ಗಿರೀಶ್ ಕೊಲೆ ಆರೋಪಿ. ಕರಿನಂಜನಪುರದ ವಿದ್ಯಾ (35) ಕೊಲೆಯಾದ ದುರ್ದೈವಿ.

ಪತ್ನಿ ವಿದ್ಯಾ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಈ ಬಗ್ಗೆ ಆಗಿಂದಾಗ್ಗೆ ಪತಿ ಗಿರೀಶ್ ಅನುಮಾನ ವ್ಯಕ್ತಪಡಿಸುತ್ತಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಪತ್ನಿ ವಿದ್ಯಾ ಕೆಲವು ತಿಂಗಳಿಂದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಳು. ಅಲ್ಲಿಗೂ ಬಂದು ಪತಿ ಗಿರೀಶ್ ಗಲಾಟೆ ಮಾಡಿದ್ದ ಎನ್ನಲಾಗಿದೆ.

ಪಕ್ಕದಲ್ಲೇ ಇದ್ದ ಪಟ್ಟಣ ಠಾಣೆಗೆ ಪತಿ ವಿರುದ್ಧ ದೂರು ನೀಡಿ ಹೊರ ಬರುತ್ತಿದ್ದಂತೆ ಕಾದು ಕುಳಿತ್ತಿದ್ದ ಆರೋಪಿ ಗಿರೀಶ್ ರೇಷ್ಮೆ ಮಾರುಕಟ್ಟೆ ಕೇಂದ್ರ ಮುಂಭಾಗದಲ್ಲಿ ಪತ್ನಿಗೆ ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮೃತ ದೇಹವನ್ನು ಸಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಳಕ್ಕೆ ಎಸ್ಪಿಡಾ.ಬಿ.ಟಿ.ಕವಿತಾ, ಎಎಸ್ಪಿ ಶಶಿಧರ್, ಡಿವೈಎಸ್ಪಿ ಲಕ್ಷ್ಮಯ್ಯ, ಇನ್ಸ್‌ಪೆಕ್ಟರ್ ರಾಜೇಶ್ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ.