*  ಸಂತ್ರಸ್ತೆಗೆ ಸಾಂತ್ವನ ಹೇಳಿದ್ದ ಪ್ರಮೀಳಾ ನಾಯ್ಡು *  ಯಾದಗಿರಿಗೆ ನಿನ್ನೆ ಸಂಜೆ ದಿಢೀರ್‌ ಭೇಟಿ*  ಅಧಿಕಾರಿಗಳಿಂದ ಮಾಹಿತಿ ಸಂಗ್ರಹ 

ಯಾದಗಿರಿ(ಸೆ.15):  ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಶಹಾಪುರದಲ್ಲಿ ಮಹಿಳೆಯ ಮೇಲಿನ ಗ್ಯಾಂಗ್‌ರೇಪ್‌ ಘಟನೆಗೆ ಸಂಬಂಧಿಸಿ ಮಾಹಿತಿ ಪಡೆಯುವ ಸಲುವಾಗಿ ಮಂಗಳವಾರ ಪಟ್ಟಣಕ್ಕೆ ದಿಢೀರ್‌ ಭೇಟಿ ನೀಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಸಂತ್ರಸ್ತೆಗೆ ಧೈರ್ಯ ತುಂಬಿದ್ದಾರೆ.

ಮಂಗಳವಾರ ಸಂಜೆ ಇಲ್ಲಿನ ಸ್ವಧಾರಾ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಅವರು ಬಳಿಕ ನೊಂದ ಮಹಿಳೆಗೆ ಸಾಂತ್ವನದ ಮಾತುಗಳನ್ನು ಹೇಳಿದರು. ಬಳಿಕ ಪ್ರಕರಣದ ಕುರಿತು ಅಧಿಕಾರಿಗಳಿಂದ ವಿವರಣೆ ಪಡೆದರು. ಈ ವೇಳೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಎಸ್ಪಿ ವೇದಮೂರ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಭಾಕರ ಕವಿತಾಳ್‌ ಉಪಸ್ಥಿತರಿದ್ದರು.

ಅಪಹರಿಸಿ ಗ್ಯಾಂಗ್‌ ರೇಪ್‌ ಮಾಡಿ ಅಂಗಾಂಗ ಸುಟ್ಟರು: ಕ್ರೌರ್ಯ ಬಿಚ್ಚಿಟ್ಟ ಯಾದಗಿರಿ ಸಂತ್ರಸ್ತೆ

ಹೆಣ್ಣು ಕುಲಕ್ಕೇ ಅಪಮಾನ: ಈ ಮಧ್ಯೆ ಘಟನೆ ಕುರಿತು ರೈತ ಸಂಘದ ಮಹಿಳಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ಅಮಾನವೀಯ ಹಾಗೂ ಮೃಗೀಯ ಕೃತ್ಯ. ಕಾಮುಕರು ಸಂತ್ರಸ್ತ ಮಹಿಳೆಯನ್ನು ವಿವಸ್ತ್ರಳನ್ನಾಗಿಸಿ ಮನಬಂದಂತೆ ಥಳಿಸಿರುವುದು, ಅತ್ಯಾಚಾರ ಎಸಗಿರುವುದು ಹೆಣ್ಣು ಕುಲಕ್ಕೆ ಮಾಡಿದ ಅಪಮಾನ ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಾ ವಿ. ಪಾಟೀಲ್‌ ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ, ಹತ್ತಿಗೂಡೂರು ಬಳಿ ಇತ್ತೀಚೆಗಷ್ಟೇ ನಡೆದ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಇಂತಹ ಕೃತ್ಯ ಬಯಲಿಗೆ ಬಂದಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದೆನಿಸುತ್ತದೆ ಎಂದು ಆರೋಪಿಸಿದ್ದಾರೆ.

ಮಂಗಳವಾರ ಸಂಜೆ ಯಾದಗಿರಿಗೆ ಆಗಮಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಇಲ್ಲಿನ ಸ್ವಧಾರಾ ಕೇಂದ್ರ ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಎಸ್ಪಿ ಡಾ. ವೇದಮೂರ್ತಿ ಹಾಗೂ ಇಲಾಖೆಯ ಅಧಿಕಾರಿಗಳಿದ್ದರು.