Asianet Suvarna News Asianet Suvarna News

ಬಿಜೆಪಿ ಲೋಕಸಭಾ ಟಿಕೆಟ್‌ ಕೊಡಿಸುವುದಾಗಿ 2 ಕೋಟಿ ವಂಚನೆ: ಪ್ರಲ್ಹಾದ್ ಜೋಶಿ ಸಹೋದರನ ಬಂಧನ

ಬಿಜೆಪಿ ಲೋಕಸಭಾ ಟಿಕೆಟ್‌ ಕೊಡಿಸುವುದಾಗಿ ಜೆಡಿಎಸ್‌ ಮಾಜಿ ಶಾಸಕನಿಂದ ಎರಡು ಕೋಟಿ ರು. ಪಡೆದು ವಂಚನೆ ಮಾಡಿದ ಆರೋಪ ಪ್ರಕರಣ ಸಂಬಂಧ ಗೋಪಾಲ ಜೋಶಿ ಅವರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಶನಿವಾರ ನೆರೆಯ ರಾಜ್ಯದಲ್ಲಿ ಬಂಧಿಸಿದ್ದಾರೆ.

Central Minister Pralhad Joshi Brother Gopal Joshi Detained By Police gvd
Author
First Published Oct 20, 2024, 8:29 AM IST | Last Updated Oct 20, 2024, 8:29 AM IST

ಬೆಂಗಳೂರು (ಅ.20): ಬಿಜೆಪಿ ಲೋಕಸಭಾ ಟಿಕೆಟ್‌ ಕೊಡಿಸುವುದಾಗಿ ಜೆಡಿಎಸ್‌ ಮಾಜಿ ಶಾಸಕನಿಂದ ಎರಡು ಕೋಟಿ ರು. ಪಡೆದು ವಂಚನೆ ಮಾಡಿದ ಆರೋಪ ಪ್ರಕರಣ ಸಂಬಂಧ ಗೋಪಾಲ ಜೋಶಿ ಅವರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಶನಿವಾರ ನೆರೆಯ ರಾಜ್ಯದಲ್ಲಿ ಬಂಧಿಸಿದ್ದಾರೆ. ಗೋಪಾಲ್‌ ಜೋಶಿ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮತ್ತೊಬ್ಬ ಆರೋಪಿ ಗೋಪಾಲ್‌ ಜೋಶಿ ಪುತ್ರನಾಗಿರುವ ಅಜಯ್‌ ಜೋಶಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ವಂಚನೆ ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿಗಳು ತಲೆಮರೆಸಿಕೊಂಡಿದ್ದರು.

ತನಿಖೆಗಿಳಿದ ಪೊಲೀಸರು ಶುಕ್ರವಾರ ಶೇಖರ್‌ ನಾಯಕ್‌ ಮತ್ತು ವಿಜಯಕುಮಾರಿ ಎಂಬುವವರನ್ನು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಗೋಪಾಲ್‌ ಜೋಶಿ ಬಂಧನಕ್ಕೆ ಹುಡುಕಾಟ ಮುಂದುವರೆಸಿದ್ದರು.ಆರೋಪಿ ಗೋಪಾಲ್‌ ಜೋಶಿ ಮಹಾರಾಷ್ಟ್ರದ ಕೊಲ್ಹಾಪುರದ ಲಾಡ್ಜ್‌ವೊಂದರಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು, ಶನಿವಾರ ಕೊಲ್ಹಾಪುರಕ್ಕೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿ ಗೋಪಾಲ್‌ ಜೋಶಿಯನ್ನು ಹುಬ್ಬಳ್ಳಿ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲೇ ಕೆಲ ಕಾಲ ವಿಚಾರಣೆ ನಡೆಸಿದ್ದಾರೆ. ಆರೋಪಿಯನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರೆತಂದು ವೈದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಪಚುನಾವಣೆವರೆಗೂ ಜಾತಿ ಗಣತಿ ಇಲ್ಲ, ಸಿಎಂ ಇದನ್ನು ತಿಳಿಸಿದ್ದಾರೆ: ಬಿ.ಕೆ.ಹರಿಪ್ರಸಾದ್‌

ಗೋಪಾಲ ಮನೆ ಮೇಲೆ ದಾಳಿ: ಪ್ರಕರಣಕ್ಕೆ ಸಂಬಂಧಿಸಿ ಗೋಪಾಲ ಜೋಶಿಯ ಹುಬ್ಬಳ್ಳಿಯ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಇಂದಿರಾಕಾಲನಿಯ ಮನೆಗೆ ಕರೆ ತಂದು ಕೆಲಕಾಲ ತಪಾಸಣೆ ನಡೆಸಿದ್ದು, ನಗದು ಹಾಗೂ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತಪಾಸಣೆ ವೇಳೆ ಸಾಕಷ್ಟು ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗೋಪಾಲ್‌ ಜೋಶಿ ಕೇಸ್‌ಗೂ ನನಗೂ ಸಂಬಂಧವಿಲ್ಲ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ದಾಖಲಾಗಿರುವ ಬಿಜೆಪಿ ಟಿಕೆಟ್‌ ವಂಚನೆ ಸಂಬಂಧ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿ, ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ ಎಂದರು. ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಅಫಿಡವಿಟ್‌ನಲ್ಲಿ ಅದರ ವಿವರವಿದೆ ಎಂದು ದಾಖಲೆ ಸಮೇತ ಪ್ರಹ್ಲಾದ್‌ ಜೋಶಿ ಸ್ಪಷ್ಟನೆ ನೀಡಿದರು.

ಬೆಂಕಿ ಹಚ್ಚುವುದೇ ಶೋಭಾ ಕರಂದ್ಲಾಜೆ ಕೆಲಸ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಸಚಿವ ಪ್ರಹ್ಲಾದ ಜೋಶಿ ಪಾತ್ರ ಇಲ್ಲ: ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪಾತ್ರ ಏನೂ ಇಲ್ಲ ಎಂದು ದೂರುದಾರೆ ಸುನಿತಾ ಚವ್ಹಾಣ ಸ್ಪಷ್ಟನೆ ನೀಡಿದ್ದಾರೆ. ನಾನು ಯಾರ ವಿರುದ್ಧ ದೂರು ಕೊಟ್ಟಿದ್ದೇನೋ ಅವರ ಬಗ್ಗೆ ಮಾತ್ರ ಮಾಧ್ಯಮದವರು ವಿಷಯ ಪ್ರಸ್ತಾಪ ಮಾಡಬೇಕು. ದೇವಾನಂದ ಚವ್ಹಾಣ, ಪ್ರಹ್ಲಾದ ಜೋಶಿ, ಅಮಿತ್ ಶಾ ಅವರ ಹೆಸರು ಕೇಳಿ ಬರುತ್ತಿರುವುದು ನನಗೆ ನೋವುಂಟು ಮಾಡಿದೆ. ಪ್ರಹ್ಲಾದ ಜೋಶಿ ಅವರು ಒಳ್ಳೆಯವರು, ಪಾಪದ ವ್ಯಕ್ತಿ, ಅವರನ್ನು ಭೇಟಿ ಆಗಲು ಆಗಿಲ್ಲ. ಅವರ ಹೆಸರನ್ನು ಗೋಪಾಲ ಜೋಶಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

Latest Videos
Follow Us:
Download App:
  • android
  • ios