ಬೆಂಗಳೂರು(ಸೆ.06): ಕನ್ನಡ ಚಿತ್ರರಂಗದ ಮಾದಕ ವಸ್ತು ನಂಟು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಖ್ಯಾತ ನಟಿ ರಾಗಿಣಿ ದ್ವಿವೇದಿಯ ಆಪ್ತನೂ ಆದ ಸಾರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ರವಿಶಂಕರ್‌ನ ಐಷಾರಾಮಿ ಜೀವನ ನೋಡಿ ಸಿಸಿಬಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

"

ಜಯನಗರ ಆರ್‌ಟಿಒ ಕಚೇರಿಯಲ್ಲಿ ಸಾಮಾನ್ಯ ದ್ವಿತೀಯ ದರ್ಜೆ ಸಹಾಯಕನ ಹುದ್ದೆಯಲ್ಲಿದ್ದ ಈತ ನಿತ್ಯ ಹೋಟೆಲ್‌, ಪಾರ್ಟಿ ಎಂದು ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದ. ಸರ್ಕಾರದಿಂದ ಅಂದಾಜು 35 ಸಾವಿರ ವೇತನ ಪಡೆಯುತ್ತಿದ್ದ ಆರೋಪಿಗೆ ಇಂತಹ ಬದುಕು ಹೇಗೆ ಸಾಧ್ಯ ಎಂದು ಅಧಿಕಾರಿಗಳು ಕಂಗಾಲಾಗಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ರವಿಶಂಕರ್‌ ಲ್ಯಾವೆಲ್ಲೆ ರಸ್ತೆಯಲ್ಲಿ ವಾಸವಿದ್ದ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಪುತ್ರಿಯೊಂದಿಗೆ ವಾಸವಿದ್ದ ಎನ್ನಲಾಗಿದೆ. ಜಯನಗರ ಆರ್‌ಟಿಒ ಕಚೇರಿಯಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ಸಿರಿವಂತರಿಗೆ ತಮ್ಮಿಷ್ಟದ ಕಾರಿನ ನೋಂದಣಿ ಸಂಖ್ಯೆ ಹಾಗೂ ಫ್ಯಾನ್ಸಿ ನಂಬರ್‌ ಕೊಡಿಸುತ್ತಿದ್ದ. ಈ ಮೂಲಕ ಹಲವು ಪ್ರಭಾವಿಗಳ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ.

ಡ್ರಗ್ಸ್‌ ಮಾಫಿಯಾ: ರಾಗಿಣಿ ಸ್ನೇಹಿತ ರವಿಶಂಕರ್‌ ವಿರುದ್ಧ ಪ್ರತ್ಯೇಕ FIR

ಕಳೆದ ನಾಲ್ಕು ವರ್ಷಗಳ ಹಿಂದೆ ರವಿಶಂಕರ್‌ಗೆ ನಟಿ ರಾಗಿಣಿ ಪಾರ್ಟಿಯೊಂದರಲ್ಲಿ ಪರಿಚಯವಾಗಿದ್ದರು. ಕ್ರಮೇಣ ರಾಗಿಣಿ ಮತ್ತು ರವಿಶಂಕರ್‌ ನಡುವೆ ಹೆಚ್ಚು ಆಪ್ತತೆ ಮೂಡಿತ್ತು. ರಾಗಿಣಿಯ ಸಿನಿಮಾದ ಪ್ರತಿಯೊಂದು ಕಾರ್ಯಕ್ರಮ ಹಾಗೂ ಪಾರ್ಟಿಯಲ್ಲಿ ರವಿಶಂಕರ್‌ ಪಾಲ್ಗೊಳ್ಳುತ್ತಿದ್ದ. ನಿತ್ಯ, ಹೋಟೆಲ್‌, ಪಬ್‌, ಪಾರ್ಟಿ ಎಂದು ರಾಗಿಣಿ ಹಾಗೂ ಆರೋಪಿ ಸುತ್ತಾಡುತ್ತಿದ್ದರು. ಅಲ್ಲದೆ, ಬೆಂಗಳೂರು ಹೊರತುಪಡಿಸಿ ಗೋವಾ ಸೇರಿದಂತೆ ಹೊರ ರಾಜ್ಯಗಳಿಗೂ ತೆರಳಿ ಪಾರ್ಟಿ ಮಾಡಿದ್ದಾರೆ.

ಇನ್ನು ಮತ್ತೊಬ್ಬ ಬಂಧಿತ ವೀರೇನ್‌ ಖನ್ನಾ ಆಯೋಜಿಸುತ್ತಿದ್ದ ಡ್ರೈವ್‌ ಇನ್‌ ಥಿಯೇಟರ್‌ ಈವೆಂಟ್‌ ಕಾರ್ಯಕ್ರಮದಲ್ಲೂ ಇವರು ಪಾಲ್ಗೊಳ್ಳುತ್ತಿದ್ದರು. ಇದಕ್ಕೆ ತಗಲುವ ವೆಚ್ಚವನ್ನು ಆರೋಪಿಯೇ ಭರಿಸುತ್ತಿದ್ದ ಎಂದು ತಿಳಿದುಬಂದಿದೆ. ಸರ್ಕಾರಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನೊಬ್ಬ ಈ ರೀತಿ ಐಷಾರಾಮಿ ಜೀವನ ಸಾಗಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಇದೀಗ ಎದ್ದಿದೆ. ಆರ್‌ಟಿಓ ಕಚೇರಿಯಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾನೆಯೇ? ಅಥವಾ ಮಾದಕ ವಸ್ತುವನ್ನು ಚಿತ್ರರಂಗಕ್ಕೆ ಪೂರೈಸಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾನೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

ಇನ್ನು ರವಿಶಂಕರ್‌ ದ್ವಿತೀಯ ದರ್ಜೆ ಸಹಾಯಕ ಹುದ್ದೆಯನ್ನು ಪರೀಕ್ಷೆ ಬರೆದು ಪಡೆದು ಪಡೆದಿಲ್ಲ. ಬದಲಿಗೆ ಆತನ ತಂದೆ ಉದ್ಯೋಗದಲ್ಲಿದ್ದ ವೇಳೆ ನಿಧನರಾಗಿದ್ದರು. ಅನುಕಂಪದ ಆಧಾರದ ಹಿನ್ನೆಲೆಯಲ್ಲಿ ಆರೋಪಿ ಸರ್ಕಾರಿ ಹುದ್ದೆ ಗಿಟ್ಟಿಸಿದ್ದ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.