ಬೆಂಗಳೂರು [ಮಾ.05]:  ಅರಮನೆ ಮೈದಾನದ ಕಂಟ್ರಾಕ್ಟರ್‌ ಕ್ಲಬ್‌ ಮೇಲೆ ನಡೆಸಿದ ದಾಳಿ ವೇಳೆ ಕುಖ್ಯಾತ ದರೋಡೆಕೋರ ಕುಣಿಗಲ್‌ ಗಿರಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕುಣಿಗಲ್‌ ತಾಲೂಕಿನ ಗಿರಿ ವಿರುದ್ಧ ಬೆಂಗಳೂರು, ಗ್ರಾಮಾಂತರ, ತುಮಕೂರು ಹಾಗೂ ಬಳ್ಳಾರಿ ಸೇರಿದಂತೆ ವಿವಿಧಡೆ 120ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರಾದ ಕಾರಣ ಆತನ ಮೇಲೆ ವಾರೆಂಟ್‌ಗಳು ಜಾರಿಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆತನಿಗೆ ಹುಡುಕಾಟ ನಡೆದಿದ್ದು, ಮಂಗಳವಾರ ರಾತ್ರಿ ಅರಮನೆ ಮೈದಾನದ ಕಂಟ್ರಾಕ್ಟ​ರ್ಸ್  ಕ್ಲಬ್‌ ಮೇಲೆ ದಾಳಿ ವೇಳೆ ಅಚಾನಕ್ಕಾಗಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿರುವ ಗುತ್ತಿಗೆದಾರ ಉದಯ್‌ಗೌಡ ಒಡೆತನದ ಕಂಟ್ರಾಕ್ಟ​ರ್‍ಸ್ ಕ್ಲಬ್‌ನಲ್ಲಿ ಕಾನೂನು ಬಾಹಿರವಾಗಿ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ತನ್ನ ಸಹಚರರ ಜತೆ ಗಿರಿ ಸಹ ಇಸ್ಟೀಟ್‌ ಆಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶಕ್ಕೆ ಹೆಸರು ಗೊತ್ತಾಗಬೇಕೆಂದು ರಾಬರಿ ಮಾಡಿದ್ದ:

ದೇಶಕ್ಕೆ ತನ್ನ ಹೆಸರು ತಿಳಿಯಬೇಕು ಎಂದು ಕುಣಿಗಲ್‌ ಗಿರಿ, 2014ರಲ್ಲಿ ಬೆಂಗಳೂರಿನಲ್ಲಿ ಸರಣಿ ದರೋಡೆ ಕೃತ್ಯಗಳ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ. ರಾತ್ರಿ ವೇಳೆ ಕ್ಲಬ್‌, ಮನೆಗಳು ಹಾಗೂ ಹೋಟೆಲ್‌ಗಳಿಗೆ ನುಗ್ಗುತ್ತಿದ್ದ ಆತ, ಜನರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದ. ಈ ಉಪಟಳ ಸಹಿಸಲಾರದೆ ಪೊಲೀಸರ ವಿರುದ್ಧ ಜನಾಕ್ರೋಶ ವ್ಯಕ್ತವಾಯಿತು.

ಬಸ್ಸಿನಲ್ಲೇ ಇದನ್ನ ಸಾಗಿಸ್ತಿದ್ದ ಆಂಧ್ರ ಮಹಿಳೆ ಜೊತೆ 5 ಮಂದಿ ಅರೆಸ್ಟ್...

ಕೊನೆಗೆ ಆಂಧ್ರಪ್ರದೇಶದಲ್ಲಿ ಆತನನ್ನು ಅಂದಿನ ಪಶ್ಚಿಮ ವಿಭಾಗದ ಡಿಸಿಪಿ ಲಾಭೂರಾಮ್‌ ನೇತೃತ್ವದ ತಂಡವು ಬಂಧಿಸಿ ಕರೆ ತಂದಿತ್ತು. ಕೆಲವು ತಿಂಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಗಿರಿ, ನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದು ಮತ್ತೆ ಚಾಳಿ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

2018ರಲ್ಲಿ ಪೀಣ್ಯ ಸಮೀಪ ಆತನ ಸಹಚರರು ದರೋಡೆಗೆ ಸಜ್ಜಾಗಿದ್ದ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. 2019ರಲ್ಲಿ ರೆಸಿಡೆನ್ಸಿ ರಸ್ತೆಯ ಟೈಮ್ಸ್‌ ಬಾರ್‌ನಲ್ಲಿ ತನ್ನ ಸಹಚರ ಜತೆ ಅದ್ಧೂರಿಯಾಗಿ ಗಿರಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿದಾಗ ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡಿದ್ದ. ಇದಾದ ಕೆಲವೇ ದಿನಗಳಲ್ಲಿ ದರೋಡೆ ಸಂಚು ಪ್ರಕರಣದಲ್ಲಿ ಆತನನ್ನು ಕೋರಮಂಗಲ ಠಾಣೆ ಪೊಲೀಸರು ಸೆರೆ ಹಿಡಿದರು. ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಮತ್ತೆ ಆತ ಹೊರ ಬಂದು ದುಷ್ಕತ್ಯಗಳಲ್ಲಿ ಮುಂದುವರೆಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಂಟ್ರಾಕ್ಟ​ರ್ ಕ್ಲಬ್‌ನಲ್ಲಿ ಜೂಜಾಟದ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಗಿರಿ ವಿರುದ್ಧ ಪ್ರಕರಣ ದಾಖಲಾಗಿದೆ. ಹಳೆಯ ಪ್ರಕರಣದಲ್ಲಿ ನ್ಯಾಯಾಲಯದ ವಾರೆಂಟ್‌ ಹಿನ್ನೆಲೆಯಲ್ಲಿ ಕೆ.ಆರ್‌.ಪುರ ಹಾಗೂ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಸಿಸಿಬಿಯಿಂದ ಗಿರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.