ರೌಡಿಶೀಟರ್ ಜತೆ ನಂಟು ಹೊಂದಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಸಸ್ಪೆಂಡ್!
ರೌಡಿ ಜತೆ ಹಣಕಾಸು ವ್ಯವಹಾರದ ನಂಟು ಹೊಂದಿದ್ದ ಆರೋಪದ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳದ ಇನ್‌ಸ್ಪೆಕ್ಟರ್‌ವೊಬ್ಬರನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಬೆಂಗಳೂರು (ಏ.21): ರೌಡಿ ಜತೆ ಹಣಕಾಸು ವ್ಯವಹಾರದ ನಂಟು ಹೊಂದಿದ್ದ ಆರೋಪದ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳದ ಇನ್‌ಸ್ಪೆಕ್ಟರ್‌ವೊಬ್ಬರನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಸಿಸಿಬಿ ಓಸಿಡಬ್ಲ್ಯು ದಳದ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ತಲೆದಂಡವಾಗಿದ್ದು, ಕೆಲ ದಿನಗಳ ಹಿಂದೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರತ್ತಹಳ್ಳಿ ರೌಡಿ ರೋಹಿತ್‌ನನ್ನು ವಿಚಾರಣೆ ನಡೆಸಿದಾಗ ಖಾಕಿ ನಂಟು ಬಯಲಾಗಿದೆ. ಈ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸಿದ ಸಿಸಿಬಿ ಡಿಸಿಪಿ ಅವರು, ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿ ಆಯುಕ್ತರಿಗೆ ವರದಿ ಸಲ್ಲಿಸಿದರು.
ಅದರನ್ವಯ ಪಿಐ ಅವರನ್ನು ಆಯುಕ್ತರು ಅಮಾನತುಗೊಳಿಸಿದ್ದಾರೆ. ಸಿಸಿಬಿಯ ಓಸಿಡಬ್ಲ್ಯು ದಳದ ಪೂರ್ವ ವಿಭಾಗದಲ್ಲಿ ಪಿಐ ಜ್ಯೋರ್ತಿಲಿಂಗ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಮಾರತ್ತಹಳ್ಳಿ ರೌಡಿ ರೋಹಿತ್ ಮೇಲೆ ಕೊಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಲೋಕಸಭಾ ಚುನಾವಣಾ ನಿಮಿತ್ತ ನಗರದ ರೌಡಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದರು. ಅಲ್ಲದೆ ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ಶೋಧ ಮಾಡಿದ್ದರು. ಆದರೆ ರೌಡಿ ರೋಹಿತ್ ಪತ್ತೆಯಾಗಿರಲಿಲ್ಲ.
ಇಂದು ರಾಜ್ಯದಲ್ಲಿ ಭಾರಿ ಮಳೆ ಸಂಭವ: ಆರೆಂಜ್ ಅಲರ್ಟ್, ಹವಾಮಾನ ಇಲಾಖೆ ಮುನ್ಸೂಚನೆ
ಆಗ ರೋಹಿತ್‌ನನ್ನು ಕರೆದು ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ಸೂಚಿಸಿದ್ದರು. ಅದರಂತೆ ಆತನನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆಸಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಆ ವೇಳೆ ರೌಡಿ ಮೊಬೈಲನ್ನು ವಶಕ್ಕೆ ಪಡೆದು ಅಧಿಕಾರಿಗಳು ಪರಿಶೀಲಿಸಿದಾಗ ಪಿಐ ಜ್ಯೋತಿರ್ಲಿಂಗ ಜತೆ ನಿಕಟ ನಂಟು ಬೆಳಕಿಗೆ ಬಂದಿದೆ. ಆಗ ಮತ್ತಷ್ಟು ವಿಚಾರಣೆ ನಡೆಸಿದಾಗ ಹಲವು ಬಾರಿ ಪಿಐ ಜ್ಯೋತಿರ್ಲಿಂಗ ಅವರಿಗೆ ರೌಡಿ ರೋಹಿತ್ ಹಣ ಕೊಟ್ಟಿರುವುದು ಗೊತ್ತಾಯಿತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆಯುಕ್ತರಿಗೆ ಡಿಸಿಪಿ ವರದಿ ಸಲ್ಲಿಸಿದರು ಎಂದು ಮೂಲಗಳು ಹೇಳಿವೆ.